ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರಿಗೆ ನೆರವು: 100 ಸಿಬ್ಬಂದಿ ನಿಯೋಜನೆ

ರಾತ್ರಿ ಪಾಳಿಯಲ್ಲಿಯೂ ಮಹಿಳಾ ಸಂಚಾರ ಪೊಲೀಸರಿಂದ ಕರ್ತವ್ಯ ನಿರ್ವಹಣೆ
Published 23 ಆಗಸ್ಟ್ 2024, 16:32 IST
Last Updated 23 ಆಗಸ್ಟ್ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ರಾತ್ರಿ ವೇಳೆ ಮಹಿಳೆಯರಿಗೆ ನೆರವು ನೀಡಲು ಪ್ರತ್ಯೇಕವಾಗಿ 100 ಮಹಿಳಾ ಸಿಬ್ಬಂದಿಯನ್ನು ನಗರ ಪೊಲೀಸ್‌ ಇಲಾಖೆ ನಿಯೋಜಿಸಿದೆ.

ಮಹಿಳಾ ಚಾಲಕರ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಇನ್ನು ಮುಂದೆ‌ ಮಹಿಳಾ ಸಂಚಾರ ಪೊಲೀಸರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ರತಿ ಠಾಣೆಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ರಾತ್ರಿ ವೇಳೆ ಪಾಳಿ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ.‌

ರಾತ್ರಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅಪಘಾತ ಹಾಗೂ ನ್ಯಾಯ ಕೋರಿ ಠಾಣೆಗಳಿಗೆ ಬರುವ ಮಹಿಳೆಯರಿಗೆ ನೆರವು ನೀಡಲು ಒಬ್ಬ ಮಹಿಳಾ ಸಿಬ್ಬಂದಿ ಠಾಣೆಯಲ್ಲೇ ಕಾರ್ಯನಿರ್ವಹಿಸುತ್ತಾರೆ. ಮತ್ತೊಬ್ಬ ಮಹಿಳಾ ಸಿಬ್ಬಂದಿ ಅಪಘಾತ ಸ್ಥಳದ‌ ಪರಿಶೀಲನೆ ನಡೆಸಲಿದ್ದಾರೆ.

ದಟ್ಟಣೆ ಪ್ರದೇಶದಲ್ಲಿ ಗಸ್ತು ಹಾಗೂ ಮದ್ಯ ಸೇವನೆ ತಪಾಸಣೆ ನಡೆಸುವ ಪುರುಷ ಸಿಬ್ಬಂದಿ ಜತೆಗೆ ಒಬ್ಬರು ಮಹಿಳಾ ಸಿಬ್ಬಂದಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಚಾಲಕರು ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ರೀತಿಯ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿ ಠಾಣೆಯಲ್ಲಿ ರಾತ್ರಿ ವೇಳೆ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ನಿರ್ದೇಶನ ನೀಡಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ನಗರದಲ್ಲಿ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಸಂಚಾರ ವಿಭಾಗದ ಎಲ್ಲ ಪೊಲೀಸ್ ಠಾಣೆಗಳಲ್ಲಿ ವಾರಾಂತ್ಯದ ಗುರುವಾರದಿಂದ ಭಾನುವಾರದವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಕಡ್ಡಾಯವಾಗಿ ವಿಶೇಷ ಕಾರ್ಯಾಚರಣೆ ನಡೆಸುವಂತೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ.

ಠಾಣಾ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಜಂಕ್ಷನ್‌ಗಳಲ್ಲಿ ಮಾತ್ರ ತಪಾಸಣೆ ನಡೆಸಿ, ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಸೂಚನೆ ಬೆನ್ನಲ್ಲೇ ಗುರುವಾರ ತಡರಾತ್ರಿ ಒಟ್ಟು 8,550 ವಾಹನಗಳ ಚಾಲಕರನ್ನು ತಪಾಸಣೆಗೆ ಒಳಪಡಿಸಿದ ಸಂಚಾರ ಪೊಲೀಸರು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಒಟ್ಟು 167 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT