ತಡವಾಗಿ ಬಂದು ವಿಮಾನ ನಿಲ್ದಾಣ ಸ್ಫೋಟಿಸುವ ಬೆದರಿಕೆ ಹಾಕಿ ಬೇಗ ಹೋಗಲು ಯುವತಿ ಯತ್ನ!

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ಕೊಲ್ಕತ್ತಾಗೆ ಹೊರಟಿದ್ದ ಯುವತಿಯೊಬ್ಬರು ತಪಾಸಣೆಗೆ ಮುಂದಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‌ಎಫ್) ಸಿಬ್ಬಂದಿ ಮೇಲೆ ರೇಗಾಡಿ ಬಾಂಬ್ ಹಾಕಿ ವಿಮಾನ ನಿಲ್ದಾಣ ಸ್ಫೋಟಿಸುವ ಬೆದರಿಕೆ ಒಡ್ಡಿದ್ದರು.
ಆತುರದಿಂದ ನಿರ್ಗಮನ ದ್ವಾರ–6ಕ್ಕೆ ಬಂದ ಮಾನಸಿ ಸತೇಬೈನು (31) ಎಂಬ ಯುವತಿ ತಪಾಸಣೆಗೆ ಮುಂದಾದ ಸಿಐಎಸ್‌ಎಫ್ ಸಿಬ್ಬಂದಿಗೆ ಸಹಕಾರ ತೋರದೆ ಅವಸರದಿಂದ ನಿಲ್ದಾಣದ ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಅದಕ್ಕೆ ಅವಕಾಶ ನೀಡದ ಭದ್ರತಾ ಸಿಬ್ಬಂದ ಮೇಲೆ ರೇಗಾಡಿದ್ದಾರೆ.
ಅದಾಗಲೇ ವಿಮಾನ ಹೊರಡುವ ಸಮಯವಾದ ಕಾರಣ ಬೇಗ ಒಳ ಬಿಡುವಂತೆ ಸಿಬ್ಬಂದಿ ಮೇಲೆ ಒತ್ತಡ ಹೇರಿದರು. ತಪಾಸಣೆ ನಡೆಸಲು ಮುಂದಾದ ಭದ್ರತಾ ಸಿಬ್ಬಂದಿ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಿಮಾನ ನಿಲ್ದಾಣವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಭದ್ರತಾ ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಸಹ ಪ್ರಯಾಣಿಕರಿಗೆ ಬಳಿ ತೆರಳಿ ‘ಈ ಗೇಟ್‌ನಲ್ಲಿ ಬಾಂಬ್ ಇದೇ ಎಲ್ಲರೂ ಇಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಳ್ಳಿ’ ಎಂದು ಕೂಗಿ ರಂಪಾಟ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಸಿಐಎಸ್‌ಎಫ್ ಸಿಬ್ಬಂದಿ ಸಂದೀಪ್ ಸಿಂಗ್ ಎಂಬುವವರ ಅಂಗಿಯ ಕಾಲರ್ ಹಿಡಿದು ಒದ್ದಿರುತ್ತಾರೆ ಹಾಗೂ ಮುಖಕ್ಕೆ ಗುದ್ದಿದ್ದಾರೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇತರ ಪ್ರಯಾಣಿಕರು ಆತಂಕಗೊಂಡಿದ್ದರು.
ಕರ್ತವ್ಯ ನಿರ್ವಹಣೆ ಅಡ್ಡಿ ಪಡಿಸಿದ ಯುವತಿಯನ್ನು ಸಿಐಎಸ್‌ಎಫ್ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಯುವತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.