ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ಅಕ್ರಮ ಸಾಗಣೆ ಜಾಲ ಸಕ್ರಿಯ

ನಗರದಲ್ಲಿ 4 ವರ್ಷಗಳಲ್ಲಿ 660 ಅಕ್ರಮ ಸಾಗಣೆ ಪ್ರಕರಣ ವರದಿ
Published 22 ಮೇ 2024, 0:30 IST
Last Updated 22 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಅಸಹಾಯಕತೆಯನ್ನು ದರ್ಬಳಕೆ ಮಾಡಿಕೊಂಡು ಅವರನ್ನು ಅಕ್ರಮ ಸಾಗಣೆ ಮಾಡುವ ಜಾಲ ನಗರದಲ್ಲಿ ಸಕ್ರಿಯವಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿ ಪ್ರಕಾರ ನಾಲ್ಕು ವರ್ಷಗಳಲ್ಲಿ 660 ಮಹಿಳೆಯರ ಅಕ್ರಮ ಸಾಗಣೆ ಪ್ರಕರಣಗಳು ವರದಿಯಾಗಿವೆ. 

ಉದ್ಯೋಗ ಸಂಬಂಧ ವಲಸೆ ಬಂದವರು, ಕುಟುಂಬದಿಂದ ಹೊರತಳ್ಳಲ್ಪಟ್ಟವರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರು ಸೇರಿ ವಿವಿಧ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರನ್ನೇ ಈ ಪ್ರಕರಣಗಳಲ್ಲಿ ಗುರಿಯಾಗಿಸಿಕೊಳ್ಳಲಾಗಿದೆ. ಅವರಿಗೆ ಹಣದ ಆಮಿಷವೊಡ್ಡಿ, ಅಕ್ರಮ ಸಾಗಣೆ ಮಾಡಲಾಗುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರವು ವಿವಿಧ ಯೋಜನೆಗಳನ್ನು ಹಮ್ಮಿಕೊಂಡು, ಪೊಲೀಸ್ ಹಾಗೂ ವಿವಿಧ ಇಲಾಖೆಗಳ ನೆರವಿನಿಂದ ಕಾನೂನಿನಡಿ ಕ್ರಮ ಕೈಗೊಂಡರೂ ನಗರದಲ್ಲಿ ಮಹಿಳೆಯರ ಅಕ್ರಮ ಸಾಗಣೆ ತಡೆಯಲು ಸಾಧ್ಯವಾಗುತ್ತಿಲ್ಲ. ಸಂತ್ರಸ್ತೆಯರು ದೂರು ದಾಖಲಿಸಲು ಹಿಂದೇಟು ಹಾಕುವ ಕಾರಣ ಕೆಲ ಪ್ರಕರಣಗಳು ಮಾತ್ರ ವರದಿಯಾಗಿವೆ. 

ರಾಜ್ಯದಲ್ಲಿ ವರದಿಯಾಗುತ್ತಿರುವ ಒಟ್ಟು ಮಹಿಳಾ ಅಕ್ರಮ ಸಾಗಣೆ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿಯೇ ಬಹುತೇಕ ಪ್ರಕರಣಗಳು ವರದಿಯಾಗಿವೆ. 2022ರಲ್ಲಿ ರಾಜ್ಯದಲ್ಲಿ ವರದಿಯಾದ 321 ಪ್ರಕರಣಗಳಲ್ಲಿ 230ಕ್ಕೂ ಅಧಿಕ ಪ್ರಕರಣಗಳು ಬೆಂಗಳೂರಿನಲ್ಲಿಯೇ ದಾಖಲಾಗಿವೆ. ಕಳೆದ ವರ್ಷ ರಾಜ್ಯದಲ್ಲಿ 299 ಪ್ರಕರಣಗಳು ವರದಿಯಾದರೆ, ನಗರದಲ್ಲಿ 200ರ ಗಡಿ ದಾಟಿದೆ. ಈ ಪ್ರಕರಣಗಳಲ್ಲಿ ಸಂತ್ರಸ್ತೆಯರ ಮೂಲತಾಣ, ಸಾಗಾಣಿಕೆ ಪ್ರದೇಶ ಹಾಗೂ ತಲುಪುವ ತಾಣವೆಂದು ವಿಂಗಡಿಸಿ, ರೈಲ್ವೆ ಸಂರಕ್ಷಣಾ ಪಡೆ ಸೇರಿ ವಿವಿಧ ಇಲಾಖೆಗಳ ನೆರವಿನಿಂದ ಅಪರಾಧಿಗಳನ್ನು ಪತ್ತೆ ಮಾಡಲಾಗುತ್ತಿದೆ. 

ತಡೆಗೆ ವಿವಿಧ ಕ್ರಮ: ಮಹಿಳೆಯರ ಅಕ್ರಮ ಸಾಗಣೆ ತಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೊಲೀಸ್‌ ಇಲಾಖೆಯ ನೆರವಿನಿಂದ ವಿವಿಧ ಕ್ರಮಗಳನ್ನು ಕೈಗೊಂಡಿದೆ. ವಿವಿಧ ಇಲಾಖೆಗಳ ಸಿಬ್ಬಂದಿಗೆ ಈ ಪ್ರಕರಣಗಳ ನಿರ್ವಹಣೆ ಹಾಗೂ ತಡೆಗೆ ತರಬೇತಿಯನ್ನೂ ಒದಗಿಸುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ‘ಸಾಂತ್ವನ’, ‘ಸಖಿ’ ಸೇರಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ‘ಉದ್ಯೋಗಿನಿ’ ಸೇರಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಇಷ್ಟಾಗಿಯೂ ಮಹಿಳಾ ಅಕ್ರಮ ಸಾಗಣೆ ನಿಂತಿಲ್ಲ. 

‘ಮಹಿಳೆಯರ ಅಕ್ರಮ ಸಾಗಣೆ ತಡೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ಜಾಗೃತಿ ಶಿಬಿರಗಳನ್ನೂ ನಡೆಸಲಾಗುತ್ತಿದೆ. ಇಂತಹ ಪ್ರಕರಣಗಳ ತಡೆಗೆ ಸರ್ಕಾರೇತರ ಸಂಸ್ಥೆಗಳೂ ಕೈಜೋಡಿಸಬೇಕಾಗುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ದುರ್ಬಲ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಕ್ರಮ ಸಾಗಣೆ ನಡೆಸಲಾಗುತ್ತಿದೆ. ಹೀಗಾಗಿ, ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT