ಗುರುವಾರ , ಅಕ್ಟೋಬರ್ 29, 2020
19 °C
ಜೊಂಡು ಹೊರತೆಗೆಯುವ ಕೆಲಸ ಮತ್ತೆ ಶುರು * ಕೆರೆ ಒಡಲಿಗೆ ಶುದ್ಧೀಕೃತ ನೀರು

ಸಾರಕ್ಕಿ ಕೆರೆ: ಕಾಮಗಾರಿಗೆ ಮರುಜೀವ

ವಿಜಯಕುಮಾರ್ ಎಸ್‌.ಕೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅರ್ಧಕ್ಕೆ ನಿಂತಿದ್ದ ಸಾರಕ್ಕಿ ಕೆರೆ ಪುನರುಜ್ಜೀವನ ಕಾಮಗಾರಿ ಮತ್ತೆ ಆರಂಭವಾಗಿದೆ. ಕೆರೆಯಲ್ಲಿದ್ದ ಜೊಂಡು ತೆಗೆಯುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಕೆರೆ ಪುನರುಜ್ಜೀವನಕ್ಕೆ 2017ರಲ್ಲಿ ಚಾಲನೆ ಸಿಕ್ಕಿತ್ತು. ಬಿಬಿಎಂಪಿ ಕೆರೆಗಳ ವಿಭಾಗದಿಂದ ಕಾಮಗಾರಿ ಆರಂಭಿಸಲಾಗಿತ್ತು. 82 ಎಕರೆ ವಿಸ್ತೀರ್ಣದ ಕೆರೆ ಅಭಿವೃದ್ಧಿಗೆ ₹6.14 ಕೋಟಿ ಮೊತ್ತದ ಯೋಜನೆ ರೂಪಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ಕೆರೆ ಸುತ್ತಲೂ ವಾಯುವಿಹಾರಕ್ಕಾಗಿ 3.2 ಕಿಲೋ ಮೀ. ಉದ್ದದ ಪಥ, ಮಳೆ ನೀರು ಸಂಗ್ರಹಿಸಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದು, ದೋಣಿ ವಿಹಾರಕ್ಕೆ ವ್ಯವಸ್ಥೆ ಕಲ್ಪಿಸಿ ನಗರ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಯೋಜನೆಯ ಮುಖ್ಯ ಉದ್ದೇಶ.

ನೈಟ್ರೇಟ್‌ ಮತ್ತು ಫಾಸ್ಪೇಟ್‌ಗಳನ್ನು ಹೀರುವ ಸಸಿಗಳನ್ನು ಜೌಗು ‍ಪ್ರದೇಶದಲ್ಲಿ ಬೆಳೆಸುವುದು, ಕೆರೆ ಮಧ್ಯದಲ್ಲಿ ಇರುವ ನಡುಗಡ್ಡೆಯನ್ನು ಹಾಗೆಯೇ ಉಳಿಸಿಕೊಂಡು ಅದನ್ನು ಪಕ್ಷಿಗಳ ಆವಾಸ ಸ್ಥಾನವಾಗಿ ಉಳಿಸಿಕೊಳ್ಳುವುದೂ ಯೋಜನೆಯಲ್ಲಿ ಸೇರಿದೆ.

ಕಾಮಗಾರಿ ಮೊದಲೇ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಕೆರೆಯಲ್ಲಿದ್ದ ಅಲ್ಪಸ್ವಲ್ಪ ಜೊಂಡು ಇಡೀ ಕೆರೆಯನ್ನೇ ಆವರಿಸಿತ್ತು. ಸೊಳ್ಳೆಗಳ ಕಾಟ ಹೆಚ್ಚಾಗಿದ್ದರಿಂದ ಸುತ್ತಮುತ್ತಲ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿತ್ತು. ಕಾಮಗಾರಿ ಸ್ಥಗಿತಗೊಂಡಿದ್ದ ಕುರಿತು ‘ಪ್ರಜಾವಾಣಿ’ ಆಗಸ್ಟ್‌ 4ರಂದು ವರದಿ ಪ್ರಕಟಿಸಿತ್ತು.

ಬಿಬಿಎಂಪಿ ಅಧಿಕಾರಿಗಳು ಕಾಮಗಾರಿಯನ್ನು ಇತ್ತೀಚೆಗೆ ಮತ್ತೆ ಆರಂಭಿಸಿದ್ದಾರೆ. ಮೊದಲ ಹಂತದಲ್ಲಿ ಜೊಂಡು ತೆಗೆಯುವ ಮತ್ತು ಕೋಡಿ ಸರಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ‘ಕೊಳಚೆ ನೀರು ಕೆರೆ ಸೇರುವುದನ್ನು ತಡೆಯಲಾಗಿದೆ. ಎಸ್‌ಟಿಪಿಯಲ್ಲಿ ಶುದ್ಧೀಕರಿಸಿದ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಹೀಗಾಗಿ, ಕೆರೆಯಲ್ಲಿ ತಿಳಿನೀರಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಹೆಚ್ಚುವರಿಯಾಗಿ ₹5 ಕೋಟಿ ಬಿಡುಗಡೆ
‘ಸಾರಕ್ಕಿ ಕೆರೆಯನ್ನು ಮಾದರಿ ಜೀವವೈವಿಧ್ಯ ತಾಣವನ್ನಾಗಿ ರೂಪಿಸಲಾಗುತ್ತಿದೆ. ಬಾಕಿ ಕಾಮಗಾರಿಗೆ ಹೆಚ್ಚುವರಿಯಾಗಿ ₹5 ಕೋಟಿ ಬಿಡುಗಡೆಯಾಗಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್(ಕೆರೆ) ಬಿ.ಟಿ. ಮೋಹನಕೃಷ್ಣ ತಿಳಿಸಿದರು.

‘ಕಲ್ಯಾಣಿಗಳ ಪುನರುಜ್ಜೀವನ, ಪ್ರವೇಶದ್ವಾರ ಅಭಿವೃದ್ಧಿ, ಸಣ್ಣ ಕಾಲುವೆಗಳ ನಿರ್ಮಾಣವೂ ಸೇರಿದಂತೆ ಹಲವು ಕಾಮಗಾರಿಗಳನ್ನು ಈ ಅನುದಾನದಲ್ಲಿ ಕೈಗೊಳ್ಳಲಾಗುವುದು. ಶೀಘ್ರವೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಅವರು ಹೇಳಿದರು.

‘ಸದ್ಯ 550 ಸಸಿಗಳನ್ನು ನೆಡಲಾಗಿದ್ದು, ಇನ್ನೂ 250 ಸಸಿ ನೆಡುವುದು ಬಾಕಿ ಇದೆ. ಆರು ತಿಂಗಳುಗಳಲ್ಲಿ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ’ ಎಂದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು