ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಿಂದ ಹೊರಬಂದಿಲ್ಲ ದುಡಿಯುವ ವರ್ಗ: ಶಾಸಕ ದಿನೇಶ್ ಗುಂಡೂರಾವ್

ಕೊರೊನಾ ಯೋಧರನ್ನು ಗೌರವಿಸಿದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಕೋ–ಆಪರೇಟಿವ್ ಸೊಸೈಟಿ
Last Updated 25 ಜುಲೈ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಕಾಣಿಸಿ ಕೊಂಡ ಬಳಿಕ ಒಂದೆಡೆ ಕುಟುಂಬದ ಸದಸ್ಯರು ರೋಗಿಗಳಾಗಿ ಆಸ್ಪತ್ರೆ ಸೇರಿದರೆ, ಇನ್ನೊಂದೆಡೆ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದವರು ದುಡಿಮೆ ಇಲ್ಲದೆಯೇ ಸಂಕಷ್ಟ ಎದುರಿಸಿ ದ್ದಾರೆ. ಅಂತಹವರಿಗೆ ಉಳ್ಳವರು ನೆರ ವಿನ ಹಸ್ತ ನೀಡಬೇಕು’ ಎಂದು ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಕೋ–ಆಪರೇಟಿವ್ ಸೊಸೈಟಿ ಲಿಮಿಟೆಡ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೊರೊನಾ ಯೋಧರನ್ನು ಅಭಿನಂದಿಸಲಾಯಿತು.

‘ಕೋವಿಡ್‌ನಿಂದ ದೇಶದ ಶೇ 95ರಷ್ಟು ಜನತೆ ಸಮಸ್ಯೆ ಎದುರಿಸಿದ್ದಾರೆ. ಸಾಂಕ್ರಾಮಿಕ ರೋಗಗಳು ಕಾಣಿಸಿ ಕೊಂಡಾಗ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ವೇಳೆ ಸಮಾಜದಲ್ಲಿ ಉತ್ತಮ ಸ್ಥಿತಿಯಲ್ಲಿರುವವರು ಹೃದಯ ಶ್ರೀಮಂತಿಕೆ ಮೆರೆದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು’ ಎಂದರು.

‘ನಿಷ್ಕಾಳಜಿಯಿಂದಾಗಿ ಎರಡನೇ ಅಲೆಯಲ್ಲಿ ಸಮಸ್ಯೆ ಎದುರಿಸಬೇಕಾಯಿತು. ಔಷಧ ಕೊರತೆ ಸೇರಿದಂತೆ ವಿವಿಧ ಸವಾಲುಗಳ ನಡುವೆ ವೈದ್ಯರು ರೋಗಿಯ ಜೀವ ಉಳಿಸಲು ಹಗಲಿರುಳು ಶ್ರಮಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೊಸೈಟಿಯ ಸದಸ್ಯರಿಗೆ ಲಸಿಕೆ ವಿತರಣಾ ಶಿಬಿರ ಏರ್ಪಡಿಸಲು ಸಹಕಾರ ನೀಡುವಂತೆ ನಿರ್ದೇಶಕರು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ದಿನೇಶ್ ಗುಂಡೂರಾವ್, ‘ಸಾಧ್ಯವಾದಷ್ಟು ಮಂದಿಗೆ ಲಸಿಕೆ ಒದಗಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕೋವಿಡ್‌ ಮೂರನೇ ಅಲೆ– ನಿರ್ಲಕ್ಷ್ಯ ಬೇಡ: ಬಿಬಿಎಂಪಿ ಪಶ್ಚಿಮ ವಲಯದ ಗಾಂಧಿನಗರದ ಆರೋಗ್ಯ ವೈದ್ಯಾಧಿಕಾರಿ ಡಾ. ನಂದಕುಮಾರ್, ‘ನಗರದಲ್ಲಿ ಒಂದೂವರೆ ವರ್ಷದ ಹಿಂದೆ ಕೋವಿಡ್ ಕಾಣಿಸಿಕೊಂಡಾಗ ಈ ಸೋಂಕು ಇಷ್ಟರ ಮಟ್ಟಿಗೆ ಕಾಡಲಿದೆ ಅಂದುಕೊಂಡಿರಲಿಲ್ಲ. ಮೊದಲನೇ ಅಲೆಯಲ್ಲಿ ಸಾವು–ನೋವುಗಳು ಅಷ್ಟಿರಲಿಲ್ಲ. ಆಸ್ಪತ್ರೆಗೆ ದಾಖಲಾದ 5ರಿಂದ 6 ದಿನಗಳಲ್ಲಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಎರಡನೇ ಅಲೆಯಲ್ಲಿ ಕೆಲವರು ಆಸ್ಪತ್ರೆಗೆ ದಾಖಲಾದ ಅರ್ಧ ಗಂಟೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸೋಂಕಿನ ತೀವ್ರತೆ ಹೆಚ್ಚಳವಾಗಿರುವುದೇ ಇದಕ್ಕೆ ಕಾರಣ. ಹಾಗಾಗಿ, ಮೂರನೇ ಅಲೆ ಬಗ್ಗೆ ನಿರ್ಲಕ್ಷ್ಯ ಮಾಡಬಾರದು’ ಎಂದರು.

ಸೊಸೈಟಿಯ ಅಧ್ಯಕ್ಷೆ ಎಚ್‌.ಸಿ. ಸ್ವಯಂಪ್ರಭಾ, ‘ಕೋವಿಡ್‌ನಿಂದ ಹಲವು ಕುಟುಂಬಗಳು ಯಜಮಾನರನ್ನು ಹಾಗೂ ಸಹಸದಸ್ಯರನ್ನು ಕಳೆದುಕೊಂಡಿವೆ. ತಂದೆ–ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯ ವಯಸ್ಕರು ಕೂಡ ಮೃತಪಟ್ಟಿದ್ದಾರೆ. ಅಗಲಿದ ತಮ್ಮ ಆಪ್ತರು, ಕುಟುಂಬ ಸದಸ್ಯರ ಅಂತಿಮ ದರ್ಶನವನ್ನು ಮಾಡಲು ಕೂಡ ಎಷ್ಟೋ ಜನರಿಗೆ ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘₹ 20 ಲಕ್ಷ ಸಹಾಯ ಧನ ವಿತರಣೆ’

ಕೋವಿಡ್ ಪೀಡಿತರಿಗೆ ಚಿಕಿತ್ಸೆ ಒದಗಿಸಿದ ವೈದ್ಯರು ಹಾಗೂ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಿನ ಹಸ್ತ ನೀಡಿದ ಸ್ವಯಂಸೇವಕರನ್ನು ಸೊಸೈಟಿ ವತಿಯಿಂದ ಗೌರವಿಸಲಾಯಿತು. ರಾಘವ್ ಎಸ್.ಎ., ನೀಲಕಂಠಸಾ ಧೊಂಡಾಳೆ, ಡಾ. ವಸುಮತಿ, ಡಾ.ಎಂ.ಜಿ. ಶಂಕರಸಾ, ಕೆ.ಎಸ್. ವಿವೇಕ್, ಕೆ.ಆರ್. ವಸಂತ್ ಕುಮಾರ್, ಎಚ್‌.ಕೆ. ವಿನಾಯಕ, ಎಸ್.ಆರ್. ಮಂಜುನಾಥ್, ಎಂ.ಬಿ. ಮುರಳಿ, ಡಿ.ಎಂ. ರಾಮ್, ಜೆ.ಕೆ. ಸುರೇಶ್, ಭರತ್ ಕುಮಾರ್, ಗೋವಿಂದ್ ಕಬಾಡಿ, ವಾಗಲೆ ರಾಜೇಂದ್ರ, ಸತೀಶ್ ಸುಲೆಗಾಯಿ, ಸತೀಶ್ ಈ. ವಾಗೆಲೆ, ಕಲಬುರ್ಗಿ ವೆಂಕಟೇಶ್, ಡಿ.ಎ. ಆಶಾ, ಎಸ್.ಆರ್. ಕೃಷ್ಣ, ವಿನಾಯಕ ಸುಲೇಗಾಯಿ, ಶಂಕರ ಖೋಡೆ, ಅಮಿತ್ ಅಮರನಾಥ್, ಧೋಂಡಾಳೆ ಮುನಿರಾಜ್ ಹಾಗೂ ಮಗಜಿ ಸುಬ್ರಮಣಿ ಅವರನ್ನು ಕೊರೊನಾ ಯೋಧರು ಎಂದು ಗುರುತಿಸಿ, ಅಭಿನಂದಿಸಲಾಯಿತು.

ಕೋವಿಡ್‌ ಜಯಿಸಿದ ಸೊಸೈಟಿಯ 365 ಸದಸ್ಯರಿಗೆ ಒಟ್ಟು ₹ 20 ಲಕ್ಷ ಸಹಾಯ ಧನ ನೀಡಲಾಯಿತು. ಆಸ್ಪತ್ರೆ ಚಿಕಿತ್ಸೆ ಪಡೆದು ಚೇತರಿಸಿಕೊಂಡವರಿಗೆ ತಲಾ ₹ 10 ಸಾವಿರ ಹಾಗೂ ಮನೆ ಆರೈಕೆಗೆ ಒಳಗಾದವರಿಗೆ ತಲಾ ₹ 5 ಸಾವಿರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT