ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕೋದ್ಯಮ: ಕಡಿಮೆಯಾದ ಪ್ರೋತ್ಸಾಹ- ಬರಗೂರು ರಾಮಚಂದ್ರಪ್ಪ ಕಳವಳ

ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿಕೆ
Published 23 ಏಪ್ರಿಲ್ 2024, 16:01 IST
Last Updated 23 ಏಪ್ರಿಲ್ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ‘ಪುಸ್ತಕೋದ್ಯಮ ಮತ್ತು ಪುಸ್ತಕ ಸಂಸ್ಕೃತಿಗೆ ಸರ್ಕಾರದಿಂದ ಸಿಗಬೇಕಾದ ಮನ್ನಣೆ ಹಾಗೂ ಪ್ರೋತ್ಸಾಹ ದಿನೇ ದಿನೇ ಕಡಿಮೆಯಾಗುತ್ತಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಪುಸ್ತಕ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಪುಸ್ತಕ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದನ್ನು ಪ್ರಕಾಶಕರು, ಲೇಖಕರು ಹಾಗೂ ಸರ್ಕಾರಗಳು ಅರಿಯಬೇಕು. ಉದ್ಯಮವನ್ನು ಉಳಿಸಿಕೊಳ್ಳುವ ಉಮೇದಿನಲ್ಲಿ ಸಂಸ್ಕೃತಿ ನಾಶವಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಪುಸ್ತಕಗಳಿಗೆ ಯಾವತ್ತೂ ಸಾವಿಲ್ಲ, ಆದರೆ ಸವಾಲುಗಳಿವೆ. ಆ ಸವಾಲುಗಳನ್ನು ಎದುರಿಸಿ ಅದರ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕು. ಇದು ಪುಸ್ತಕೋದ್ಯಮ ಸೇರಿದಂತೆ ಎಲ್ಲ ಮಾಧ್ಯಮಗಳಿಗೆ ಅನ್ವಯಿಸುತ್ತದೆ. ಆದರೆ, ಮಾಧ್ಯಮಗಳೆಲ್ಲ ಉದ್ಯಮವಾಗಿರುವ ಕಾಲದಲ್ಲಿ ನಾವಿದ್ದೇವೆ. ಚಲನಚಿತ್ರ ಮಾಧ್ಯಮ ಚಲನಚಿತ್ರೋದ್ಯಮವಾಗಿದೆ. ಪತ್ರಿಕಾ ಮಾಧ್ಯಮ, ಪತ್ರಿಕೋದ್ಯಮವಾಗಿದೆ. ಹಾಗೆಯೇ ಪುಸ್ತಕ ಮಾಧ್ಯಮ ಅನಿವಾರ್ಯವಾಗಿ ಪುಸ್ತಕೋದ್ಯಮವಾಗಿದೆ’ ಎಂದರು.

‘ಎಲ್ಲ ಕಾಲದಲ್ಲೂ ಉದ್ಯಮ ಮತ್ತು ಸಂಸ್ಕೃತಿಯ ನಡುವೆ ತಾಕಲಾಟ ನಡೆಯುತ್ತಿರುತ್ತದೆ. ಉದ್ಯಮಕ್ಕೆ ಸಂಪಾದನೆಯೇ ಪ್ರಧಾನ, ಸಂಸ್ಕೃತಿಗೆ ಸಂವೇದನೆ ಮುಖ್ಯ. ಸಂವೇದನೆ ಉಳಿಸಿಕೊಳ್ಳಬೇಕಾ, ಸಂಪಾದನೆ ಉಳಿಸಿಕೊಳ್ಳಬೇಕಾ? ಪುಸ್ತಕ ಅಚ್ಚಾಗದಿದ್ದರೆ ಸಂವೇದನೆ ಉಳಿಸಿಕೊಳ್ಳಲು ಹೇಗೆ ಸಾಧ್ಯ. ಪುಸ್ತಕವೇ ಮಾರಾಟವಾ ಗದಿದ್ದರೆ ಸಂಪಾದನೆ ಹೇಗೆ ಸಾಧ್ಯ? ಉದ್ಯಮದಲ್ಲಿ ಪ್ರಧಾನವಾಗಿರುವ ಸಂಪಾದನೆ, ಪುಸ್ತಕ ಸಂಸ್ಕೃತಿಯಲ್ಲಿ ಮುಖ್ಯವಾಗಿರುವ ಸಂವೇದನೆ ಇವೆರಡನ್ನು ಸಮತೋಲನಗೊಳಿಸುವ ನೀತಿಯನ್ನು ಸರ್ಕಾರ ರೂಪಿಸಬೇಕು’ ಎಂದು ಹೇಳಿದರು.

‘ಸರ್ಕಾರ ಮುಂದಿನ ಬಜೆಟ್‌ನಲ್ಲಿ ಗ್ರಂಥಾಲಯ ಇಲಾಖೆಗೆ ನಿರ್ದಿಷ್ಟ ಮೊತ್ತವನ್ನು ಘೋಷಿಸಬೇಕು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಪ್ರಜ್ಞೆ ಇರುವ ಸರ್ಕಾರಗಳು ಪುಸ್ತಕ ಸಂಸ್ಕೃತಿಯನ್ನು ನಿರ್ಲಕ್ಷಿಸುವುದಿಲ್ಲ. ಗ್ರಂಥಾಲಯಗಳು ಗೋದಾಮುಗಳಲ್ಲ. ಅಲ್ಲಿ ಪ್ರತಿ ತಿಂಗಳು ಓದಿನ ಅಭಿರುಚಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ’ ಎಂದರು.

ಇದೇ ಸಂದರ್ಭದಲ್ಲಿ ಪುಸ್ತಕ ಪ್ರಚಾಕರಾದ ರೂಪಾ ಮತ್ತಿಕೆರೆ, ಸಿ. ಮಾಯಣ್ಣ, ಪುಸ್ತಕ ವಿನ್ಯಾಸಕ ಆರ್. ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT