ಭಾನುವಾರ, ಆಗಸ್ಟ್ 1, 2021
28 °C
ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ

ಮೂರು ವರ್ಷಗಳಲ್ಲಿ 1 ಕೋಟಿ ಸಸಿ ಬೆಳೆಸುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಬಿಬಿಎಂಪಿ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ‘ಕೋಟಿ ವೃಕ್ಷ ಆಂದೋಲನ’ಕ್ಕೆ ಚಾಲನೆ ನೀಡಲಾಯಿತು. ಸಸಿ ನೆಡುವ ಮೂಲಕ ಮೇಯರ್‌ ಗೌತಮ್‌ ಕುಮಾರ್‌ ಚಾಲನೆ ನೀಡಿದರು. 

ಪಾಲಿಕೆ ಅರಣ್ಯ ವಿಭಾಗ, ಕೋಟಿ ವೃಕ್ಷ ಸೈನ್ಯ, ಎನ್.ಜಿ.ಓ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 1 ಕೋಟಿ ಸಸಿ ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು. 

‘ಪರಿಸರ ದಿನದ ಅಂಗವಾಗಿ ಪ್ರತಿವರ್ಷವೂ ಗಿಡಗಳನ್ನು ನೆಡಲಾಗುತ್ತದೆ. ಆದರೆ, ಅದನ್ನು ಪೋಷಿಸುವ ಕಾರ್ಯ ಮಾಡುವುದು ಕಡಿಮೆ. ಈ ನಿಟ್ಟಿನಲ್ಲಿ ಪಾಲಿಕೆಯು ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡುವ ಕೆಲಸ ಮಾಡಲಿದೆ’ ಎಂದರು.

ಶಾಸಕ ದಿನೇಶ್‌ ಗುಂಡೂರಾವ್, ‘ಪರಿಸರ ಮಾಲಿನ್ಯದಿಂದ ಅನೇಕ ನೈಸರ್ಗಿಕ ವಿಕೋಪಗಳು ಉಂಟಾಗುತ್ತಿವೆ. ಅದನ್ನು ತಡೆಯಬೇಕಾದರೆ ನಾವು ಪರಿಸರವನ್ನು ಕಾಪಾಡಬೇಕು’ ಎಂದರು.

ಪಾಲಿಕೆ ಅರಣ್ಯ ವಿಭಾಗದ ವಿಶೇಷ ಆಯುಕ್ತ ಜಿ.ಮಂಜುನಾಥ್, ‘ಪಾಲಿಕೆಯಲ್ಲಿ ನಾಲ್ಕು ನರ್ಸರಿಗಳಿದ್ದು, ಸುಮಾರು 10 ಲಕ್ಷ ಸಸಿಗಳು ಇವೆ. ಅದನ್ನು ಪಾಲಿಕೆ, ಸಾರ್ವಜನಿಕರು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ನೆಡಲಾಗುವುದು’ ಎಂದು ಹೇಳಿದರು.

ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಮಾತನಾಡಿದರು. ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾದೇವಿ ನಾಗರಾಜು, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌ ಇತರರು ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು