ಬುಧವಾರ, ಏಪ್ರಿಲ್ 21, 2021
33 °C

ಸದನಕ್ಕೆ ತಪ್ಪು ಮಾಹಿತಿ: ಪಾಲಿಕೆ ಎಂಜಿನಿಯರ್‌ಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ–ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಧಾನ ಪರಿಷತ್ತಿನ ಸದಸ್ಯ ಯು.ಬಿ.ವೆಂಕಟೇಶ್ ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ತಪ್ಪು ಮಾಹಿತಿಗಳಿಂದ ಕೂಡಿದ ಉತ್ತರ ನೀಡಿದ್ದ ಕಾರ್ಯಪಾಲಕ ಎಂಜಿನಿಯರ್‌ಗೆ ಕಾರಣ ಕೇಳಿ ಬಿಬಿಎಂಪಿ ನೋಟಿಸ್ ನೀಡಿದೆ.

‘ವರ್ತುಲ ರಸ್ತೆಯ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಜಂಕ್ಷನ್‌ನಿಂದ ನಾಯಂಡಹಳ್ಳಿ ಜಂಕ್ಷನ್ ತನಕ ಸರ್ವೀಸ್ ರಸ್ತೆಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಖಾಸಗಿಯವರು ಅನ್ಯ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ತಿಳಿದಿದೆಯೇ, ಗಮನಕ್ಕೆ ಬಂದಿದ್ದಲ್ಲಿ ಕೈಗೊಂಡ ಕ್ರಮಗಳೇನು’ ಎಂದು ಪ್ರಶ್ನೆ ಕೇಳಿದ್ದರು.

ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಉತ್ತರ ನೀಡಬೇಕಿದ್ದು, ಬಿಬಿಎಂಪಿ ಅಧಿಕಾರಿಗಳಿಂದ ಪಡೆದ ಉತ್ತರವನ್ನು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿ ಮುಖ್ಯಮಂತ್ರಿ ಕಚೇರಿಗೆ ನೀಡಿದ್ದರು.

‘ಸರ್ವೀಸ್ ರಸ್ತೆಗೆ ಕಟ್ಟಡ ತ್ಯಾಜ್ಯ ಸುರಿಯುವುದು, ವಾಹನಗಳ ರಿಪೇರಿ ಕಾರ್ಯ, ಮರಳು ಲಾರಿಗಳ ನಿಲುಗಡೆ ತಾಣವಾಗಿತ್ತು. ರಸ್ತೆ ದುರಸ್ತಿಪಡಿಸಿ ಅಂತಹ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಲಾಗಿದೆ’ ಎಂದು ಎಂಜಿನಿಯರ್‌ ಅವರು ಉತ್ತರ ನೀಡಿದ್ದರು.

‘ಮುಖ್ಯಮಂತ್ರಿ ಅವರ ಪರವಾಗಿ ಗೃಹ ಸಚಿವರು ವಿಧಾನ ಪರಿಷತ್ತಿನಲ್ಲಿ ಉತ್ತರ ನೀಡಿದ್ದು, ಈ ಉತ್ತರ ಸುಳ್ಳು ಮಾಹಿತಿಗಳಿಂದ ಕೂಡಿದೆ ಎಂದು ಚಿತ್ರಗಳ ಸಹಿತ ಯು.ಬಿ. ವೆಂಕಟೇಶ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದನಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರಿಯಾದ ಮಾಹಿತಿಯನ್ನು ನೀಡಬೇಕು ಮತ್ತು ತಪ್ಪು ಮಾಹಿತಿ ನೀಡಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಗುರುವಾರವೇ ವರದಿ ಸಲ್ಲಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್ ಅವರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು.

ಅದಕ್ಕೂ ಮುನ್ನ ಮುಖ್ಯಮಂತ್ರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಅವರು ನಗರಾಭಿವೃದ್ಧಿ ಇಲಾಖೆಗೆ ಗುರುವಾರ ಬೆಳಿಗ್ಗೆ ಪತ್ರ ಬರೆದಿದ್ದರು.

ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಕಾರ್ಯಪಾಲಕ ಎಂಜಿನಿಯರ್‌(ರಸ್ತೆ, ಮೂಲಸೌಕರ್ಯ) ಸಾವಿತ್ರಿ ಹಕ್ಕಿ ಅವರಿಗೆ ಅದೇ ವಿಭಾಗದ ಮುಖ್ಯ ಎಂಜಿನಿಯರ್‌ ನೋಟಿಸ್ ನೀಡಿದ್ದಾರೆ. ‘ಯಾವ ಕಾರಣಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂಬುದಕ್ಕೆ 24 ಗಂಟೆಗಳಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದರೆ, ನಿಮ್ಮ ಮತ್ತು ನಿಮ್ಮ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು