ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಕ್ಷಗಾನ ಪುರುಷರಿಗೆ ಸೀಮಿತವಾಗಿಲ್ಲ: ಧರಣೀದೇವಿ ಮಾಲಗತ್ತಿ

Published 11 ಆಗಸ್ಟ್ 2024, 15:36 IST
Last Updated 11 ಆಗಸ್ಟ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ‘ಯಕ್ಷಗಾನ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಮಹಿಳೆಯರೂ ಪಾಲ್ಗೊಂಡು ಸಾಧನೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ತಿಳಿಸಿದರು.

ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ ಏರ್ಪಡಿಸಿದ್ದ ಯಕ್ಷಗಾನ ಉತ್ಸವ-2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಗವತಿಕೆಯಲ್ಲಿ, ಚೆಂಡೆ ವಾದನದಲ್ಲಿ, ಮುಮ್ಮೇಳ ಕಲಾವಿದರಾಗಿ ಮಹಿಳೆಯರು ತಮ್ಮದೇ ಛಾಪು ಮೂಡಿಸಿದ್ದಾರೆ. ಬಣ್ಣದ ವೇಷದಲ್ಲೂ ತೊಡಗಿಸಿಕೊಂಡು, ಆಯಾ ಪಾತ್ರಕ್ಕೆ ಅನುಗುಣವಾದ ಧ್ವನಿಯನ್ನೂ ನೀಡಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ ಎಂದು ಹೇಳಿದರು.

ಯಕ್ಷಗಾನದ ಬೇರು ಆಳವಾಗಿದೆ. ಎಂದಿಗೂ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ. ಯಕ್ಷಗಾನವನ್ನು ಉಳಿಸಿಕೊಳ್ಳಬೇಕು, ಯಕ್ಷಗಾನ ಅವನತಿಯತ್ತ ಸಾಗುತ್ತಿದೆ ಎಂಬಂತಹ ಮಾತುಗಳ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

‘ಶರಸೇತು ಬಂಧ’ ಮಹಿಳಾ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಆಂಜನೇಯನ ಪಾತ್ರವಹಿಸಿ ಅರ್ಥಗಾರಿಕೆ ಮಾಡಿ ಧರಣೀದೇವಿ ಗಮನ ಸೆಳೆದರು.

ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ನಿರ್ದೇಶಕಿ ಗೌರಿ ಕೆ. ಮಾತನಾಡಿ, ‘ಸಂಸ್ಥೆ 26 ವರ್ಷಗಳಿಂದ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡುತ್ತಿದೆ. ಈಗ ವಿದ್ಯಾರ್ಥಿವೇತನದ ಮೂಲಕ 12 ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡುವ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ’ ಎಂದು ವಿವರಿಸಿದರು.

ಯಕ್ಷಗಾನ ಉತ್ಸವದಲ್ಲಿ ಯಕ್ಷಗಾನ ವೇಷಭೂಷಣ ಹಾಗೂ ಮುಖವರ್ಣಿಕೆ ಕಮ್ಮಟ ನಡೆಸಲಾಯಿತು. ಯಕ್ಷಗಾನ ಪ್ರದರ್ಶನ, ತಾಳಮದ್ದಳೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT