ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಹಂಕ: ನೀರಿನ ಬವಣೆ ನೀಗಿಸುತ್ತಿರುವ ಬಾವಿಗಳು

ಡಿ.ಸುರೇಶ್‌
Published 1 ಮೇ 2024, 20:10 IST
Last Updated 1 ಮೇ 2024, 20:10 IST
ಅಕ್ಷರ ಗಾತ್ರ

ಯಲಹಂಕ: ಅಂತರ್ಜಲ ಕುಸಿತದಿಂದ ಬೆಂಗಳೂರು ನಗರದ ಹಲವೆಡೆ ಕೊಳವೆಬಾವಿಗಳು ಬತ್ತಿ ಹೋಗಿ ನೀರಿಗಾಗಿ ಪರದಾಡುತ್ತಿರುವ ಹೊತ್ತಲ್ಲಿ, ತಾಲ್ಲೂಕಿನ ಸೊಣ್ಣಪ್ಪನಹಳ್ಳಿ ಮತ್ತು ಹುಣಸಮಾರನಹಳ್ಳಿ ಗ್ರಾಮಗಳಲ್ಲಿ ತೆರೆದ ಬಾವಿಗಳು ನಿವಾಸಿಗಳಿಗೆ ನೀರು ಪೂರೈಸುತ್ತಿವೆ!

ಹೌದು, ಈ ಎರಡು ಗ್ರಾಮಗಳಲ್ಲಿ ಅರ್ಧ ಶತಮಾನದಷ್ಟು ಹಳೆಯದಾದ ಹಲವು ತೆರೆದಬಾವಿಗಳಿವೆ. ದಶಕದಿಂದೀಚೆಗೆ ಈ ಬಾವಿಗಳ ಬಳಕೆಯನ್ನು ನಿಲ್ಲಿಸಲಾಗಿತ್ತು. ಎರಡು ವರ್ಷಗಳ ಹಿಂದೆ ಬಯೋ ಎನ್ವಿರಾನ್ಮೆಂಟಲ್‌ ಟ್ರಸ್ಟ್‌ನವರು ‘ದಶಲಕ್ಷ ಇಂಗು ಬಾವಿಗಳ’ ಅಭಿಯಾನದ ಭಾಗವಾಗಿ ಪುರವಂಕರ ಕಂಪನಿಯ ಸಹಯೋಗದಲ್ಲಿ ತೆರೆದ ಬಾವಿಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಆ ಬಾವಿಗಳೀಗ ನಿವಾಸಿಗಳಿಗೆ ನೀರಾಸರೆ ಆಗಿವೆ.

ಬಾವಿಗಳು ಪುನಶ್ಚೇತನ: ‘ಸಹೋದ್ಯೋಗಿ ಆರ್‌.ಎಸ್‌.ಶಿವಾನಂದ್‌, ಶಾಲೆಗೆ ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಲು ಸೊಣ್ಣಪ್ಪನಹಳ್ಳಿಗೆ ಹೋಗಿದ್ದಾಗ, ಶಾಲೆಯ ಮುಖ್ಯಶಿಕ್ಷಕ ವೆಂಕಟೇಗೌಡರಿಂದ ಗ್ರಾಮದಲ್ಲಿ ತೆರೆದ ಬಾವಿಗಳಿರುವ ಮಾಹಿತಿ ಸಿಕ್ಕಿತು. ನಂತರ, ಪುರವಂಕರ ಕಂಪನಿಯವರ ಸಿಎಸ್‌ಆರ್‌ ನಿಧಿಯಡಿಯಲ್ಲಿ ಮಣ್ಣು ಒಡ್ಡರ ಸಮುದಾಯದ ಶಂಕರ್‌ ನೆರವಿನೊಂದಿಗೆ ಶಾಲೆಯ ಸುತ್ತಮುತ್ತಲಿನ ಮೂರು ಮತ್ತು ಹುಣಸಮಾರನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಮೂರು ಬಾವಿಗಳನ್ನು ಪುನಶ್ಚೇತನಗೊಳಿಸಿದೆವು’ ಎಂದು ಬಯೋಂ ಎನ್ವಿರಾನ್ಮೆಂಟಲ್‌ ಟ್ರಸ್ಟ್‌ನ ಟ್ರಸ್ಟಿ ಎಸ್‌.ವಿಶ್ವನಾಥ್‌ ತಿಳಿಸಿದರು.

ಪುನಶ್ಚೇತನಗೊಂಡ ಮೂರು ಬಾವಿಗಳಿಗೆ ಪುರಸಭೆಯಿಂದ ಮೋಟಾರ್‌ ಪಂಪ್‌ ಅಳವಡಿಸಿ ಸುತ್ತಮುತ್ತಲಿನ ಬಡಾವಣೆಯ ಮನೆಗಳಿಗೆ ನಿತ್ಯ ನೀರು ಪೂರೈಸಲಾಗುತ್ತಿದೆ. ‘ಉಳಿದ ಮೂರು ಬಾವಿಗಳಿಗೆ ಪಂಪ್‌ ಅಳವಡಿಸುವುದು ಬೇಡ. ಪಂಪ್ ಹಾಕಿದರೆ ಬೇಗ ನೀರು ಖಾಲಿಯಾಗುತ್ತದೆ. ನಾವು ಸೇದಿಕೊಂಡೇ ಬಳಸುತ್ತೇವೆ’ ಎಂದು ಮಹಿಳೆಯರು ಮನವಿ ಮಾಡಿದರು. ಹೀಗಾಗಿ ಬಾವಿಗಳಿಗೆ ಗ್ರಿಲ್ ಮತ್ತು ಗಾಲಿ ಅಳವಡಿಸಲಾಗಿದೆ. ಸ್ಥಳೀಯರು ಬಾವಿಯಿಂದ ಸೇದಿಕೊಂಡು ನೀರನ್ನು ಉಪಯೋಗಿಸುತ್ತಿದ್ದಾರೆ. ಶಂಕರ್‌ ಅವರು ತಿಂಗಳಿಗೊಮ್ಮೆ ಬಂದು ಬಾವಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ ಎಂದು ವಿಶ್ವನಾಥ್‌ ಮಾಹಿತಿ ನೀಡಿದರು.

ಮನೆ ಬಳಕೆಗೆ ನೀರು: ‘ನಮ್ಮ ತಂದೆಯ ಕಾಲದಿಂದಲೂ ಈ ಬಾವಿಯ ನೀರನ್ನು ಕುಡಿಯಲು ಮತ್ತು ಅಡುಗೆಗೆ ಬಳಸುತ್ತಿದ್ದೇವೆ. ನೀರು ತಿಳಿಯಾಗಿದ್ದು, ಗುಣಮಟ್ಟದಿಂದ ಕೂಡಿದೆ. ಹಲವಾರು ಕುಟುಂಬಗಳಿಗೆ ಈ ಬಾವಿಯು ಆಸರೆಯಾಗಿದ್ದು, ಬೇಸಿಗೆಯಲ್ಲಿಯೂ ನೀರಿನ ಕೊರತೆಯನ್ನು ನೀಗಿಸಿದೆ’ ಎಂದು ಸ್ಥಳೀಯ ನಿವಾಸಿ ಹೊಸಮನೆ ಕೃಷ್ಣಪ್ಪ ತಿಳಿಸಿದರು.

‘ಕುಡಿಯುವುದಕ್ಕೆ ಮತ್ತು ಮನೆ ಬಳಕೆಗೆ ಈ ಬಾವಿಯ ನೀರನ್ನೇ ಉಪಯೋಗಿಸುತ್ತಿದ್ದೇವೆ. ಬಾವಿ ನೀರು ಕಲುಷಿತಗೊಳ್ಳಲು ಅವಕಾಶ ನೀಡಿಲ್ಲ. ಬಾವಿ ನೀರು ತಣ್ಣಗಿರುತ್ತದೆ. ಕುಡಿಯಲು ಯೋಗ್ಯವಾಗಿದೆ‘ ಎಂದು ಸೊಣ್ಣಪ್ಪನಹಳ್ಳಿಯ ಸುಧಾ ಹೇಳಿದರು.

‘ಮಳೆಗಾಲದಲ್ಲಿ ಬಾವಿ ತುಂಬಿ ತುಳುಕುತ್ತದೆ. ದೇವಸ್ಥಾನ, ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಇದೇ ಬಾವಿಯಿಂದ ನೀರನ್ನು ಸೇದಿಕೊಂಡು ಬಳಸುತ್ತಾರೆ’ ಎಂದು ವಿವರಿಸಿದರು.

ಈ ಊರುಗಳ ಸಮೀಪವಿರುವ ಬೆಟ್ಟಹಲಸೂರು ಬಂಡೆಯ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿದೆ. ಅದರ ಜೊತೆಗೆ ಸೊಣ್ಣಪ್ಪನಹಳ್ಳಿ–ಬೆಟ್ಟಹಲಸೂರು ಕೆರೆಯಲ್ಲಿ ನೀರು ತುಂಬಿದೆ. ಹಾಗಾಗಿ ಈ ಬಾವಿಗಳಲ್ಲಿ ಅಲ್ಪ ಪ್ರಮಾಣದಲ್ಲಾದರೂ ವರ್ಷ ಪೂರ್ತಿ ನೀರು ಇರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಬಾವಿಯಲ್ಲಿ ಬಿಂದಿಗೆಗೆ ನೀರು ತುಂಬಿಸುತ್ತಿರುವ ದೃಶ್ಯ
ಬಾವಿಯಲ್ಲಿ ಬಿಂದಿಗೆಗೆ ನೀರು ತುಂಬಿಸುತ್ತಿರುವ ದೃಶ್ಯ
ಹುಣಸಮಾರನಹಳ್ಳಿ ಪುರಸಭೆಯ ಮೂಲಕ ಈ ಬಾವಿಯಿಂದ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. 
ಹುಣಸಮಾರನಹಳ್ಳಿ ಪುರಸಭೆಯ ಮೂಲಕ ಈ ಬಾವಿಯಿಂದ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. 
ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿರುವ ಸೊಣ್ಣಪ್ಪನಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ
ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿರುವ ಸೊಣ್ಣಪ್ಪನಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ
ಬಾವಿಗಳ ಸಂಸ್ಕೃತಿಗೆ ಮರಳಬೇಕು. ಕೆರೆ ಮತ್ತು ಬಾವಿಗಳನ್ನು ಪುನಶ್ಚೇತನಗೊಳಿಸಿ ಕಾಪಾಡಿಕೊಂಡರೆ ಬೆಂಗಳೂರು ನಗರದಲ್ಲಿ ಉಂಟಾಗುತ್ತಿರುವ ನೀರಿನ ಸಮಸ್ಯೆಗೆ ನಿಶ್ಚಿತವಾಗಿ ಪರಿಹಾರ ಸಿಗುತ್ತದೆ.
ಎಸ್. ವಿಶ್ವನಾಥ್ ಬಯೋಮ್ ಟ್ರಸ್ಟ್‌

ಮನೆಗಳಿಗೆ ನೀರು ಪೂರೈಕೆ

ಹುಣಸಮಾರನಹಳ್ಳಿ ಟಿಎಂಸಿಯಿಂದ ಎರಡು ತೆರೆದ ಬಾವಿಗಳಿಗೆ ಪಂಪ್‌ ಅಳವಡಿಸಿ ಶಕ್ತಿನಗರ ಜನತಾ ಕ್ವಾಟ್ರಸ್‌ ಗುಡಿಸಲು ರಸ್ತೆ ಸುಭಾಷ್‌ ನಗರ ಮಾರಿಯಮ್ಮ ಕ್ಯಾಂಪ್‌ ಮುನೇಶ್ವರ ಕ್ಯಾಂಪ್‌ ಮತ್ತಿತರ ಬಡಾವಣೆಗಳ 600ಕ್ಕೂ ಹೆಚ್ಚು ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಮಳೆಗಾಲದಲ್ಲಿ 30 ಅಡಿಗಳಿಷ್ಟಿದ್ದ ನೀರು ಇಂದು 10ರಿಂದ 15 ಅಡಿಗಳಷ್ಟು ಕುಸಿದಿದೆ’ ಎಂದು ವಾಟರ್‌ಮೆನ್‌ ಶಶಿಕುಮಾರ್‌ ತಿಳಿಸಿದರು.

ಮಳೆ ನೀರು ಸಂಗ್ರಹ ಪದ್ಧತಿ

ಸೊಣ್ಣಪ್ಪನಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬಯೋಂ ಎನ್ವಿರಾನ್ಮೆಂಟ್ ಟ್ರಸ್ಟ್‌ನವರು ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿದ್ದಾರೆ. ಈ ಶಾಲೆಯ ಪಕ್ಕದಲ್ಲಿ ಒಂದು ತೆರೆದಬಾವಿ ಇದ್ದು ಅದರಲ್ಲಿ ಸದಾಕಾಲ ನೀರು ಇರುತ್ತದೆ. ‘ಸಂಪ್‌ನಲ್ಲಿ ಶೇಖರಣೆಯಾಗುವ ಮಳೆ ನೀರನ್ನು ಶಾಲೆಯ ನಿತ್ಯದ ಕಾರ್ಯಗಳಿಗೆ ಬಳಸಲಾಗುತ್ತಿದೆ. ಮಳೆಗಾಲದಲ್ಲಿ ಸಂಪ್‌ ತುಂಬಿ ಹರಿಯುವ ನೀರು ವ್ಯರ್ಥವಾಗದಂತೆ ಭೂಮಿಯಲ್ಲಿ ಇಂಗಲು ಶಾಲಾ ಆವರಣದಲ್ಲಿ ಎರಡು ಇಂಗುಗುಂಡಿಗಳನ್ನು ಮಾಡಲಾಗಿದೆ. ಬಾವಿಯ ಸ್ವಚ್ಛತೆ ಮತ್ತು ಸುರಕ್ಷತೆಗೂ ಆದ್ಯತೆ ನೀಡಿದ್ದೇವೆ‘ ಎಂದು ಮುಖ್ಯಶಿಕ್ಷಕ ಎಚ್‌.ವೆಂಕಟೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT