ಮಂಗಳವಾರ, ಅಕ್ಟೋಬರ್ 20, 2020
27 °C
ಯೋಗ ವಿಶ್ವವಿದ್ಯಾಲಯ ಸ್ಥಾಪನೆಗೆ ವಿರೋಧ

ಗೌರವ ಡಾಕ್ಟರೇಟ್‌ ಹಿಂದಿರುಗಿಸಿದ ಯಲ್ಲಪ್ಪ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ಯೋಗ ವಿಶ್ವವಿದ್ಯಾಲಯ ಹಾಗೂ ಸಿಬಿಎಸ್‌ಇ ದಕ್ಷಿಣ ಭಾರತ ಕೇಂದ್ರ ನಿರ್ಮಾಣಕ್ಕೆ ಅನುಮತಿ ನೀಡಿರುವ ಬೆಂಗಳೂರು ವಿಶ್ವವಿದ್ಯಾಲಯದ ನಿರ್ಧಾರದಿಂದ ಜೀವವೈವಿಧ್ಯಕ್ಕೆ ಹಾನಿಯಾಗಲಿದೆ ಎಂದು ಹೇಳಿರುವ ಪರಿಸರ ತಜ್ಞ ಡಾ.ಅ.ನ ಯಲ್ಲಪ್ಪ ರೆಡ್ಡಿ, ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್‌ ಪದವಿಯನ್ನು ಹಿಂದಿರುಗಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. 

‘ಗುರುವಾರವೇ ಪದವಿಯನ್ನು ಹಿಂದಿರುಗಿಸಲಾಗಿದೆ’ ಎಂದು ಡಾ.ಯಲ್ಲಪ್ಪರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಜೀವವೈವಿಧ್ಯ ಉದ್ಯಾನ ನಿರ್ಮಾಣವಾಗುವಲ್ಲಿ ಯಲ್ಲಪ್ಪರೆಡ್ಡಿಯವರ ಪಾತ್ರ ಹಿರಿದು. ಆದರೆ, ಈ ಉದ್ಯಾನದ ವ್ಯಾಪ್ತಿಯಲ್ಲಿರುವ 15 ಎಕರೆ ಜಾಗದಲ್ಲಿ ಯೋಗ ವಿಶ್ವವಿದ್ಯಾಲಯ ಹಾಗೂ ಮತ್ತಿತರ ಕಟ್ಟಡಗಳು ತಲೆ ಎತ್ತಿದರೆ ಜೀವವೈವಿಧ್ಯಕ್ಕೆ ಹಾನಿಯಾಗಲಿದೆ. ಇದನ್ನು ಖಂಡಿಸಿ, ಯಲ್ಲಪ್ಪರೆಡ್ಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಗೌರವ ಪದವಿಯನ್ನು ರಾಜ್ಯಪಾಲರಿಗೆ ಹಿಂದಿರುಗಿಸಿದ್ದಾರೆ’ ಎಂದು ಎನ್ವಿರಾನ್‌ಮೆಂಟಲ್‌ ಸೊಸೈಟಿ ಆಫ್‌ ಇಂಡಿಯಾ ತಿಳಿಸಿದೆ. 

‘ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ (ಸೆಕ್ಟರ್‌ 1) 100 ಎಕರೆ ಜೈವಿಕ ಉದ್ಯಾನವನ್ನು 2001ರಿಂದ ಅಭಿವೃದ್ಧಿ ಪಡಿಸಲಾಗಿದೆ. ಜೈವಿಕವಾಗಿ ಸಮೃದ್ಧವಾದ ಇಂಥ ಪ್ರದೇಶದಲ್ಲಿ ವಿಶ್ವವಿದ್ಯಾಲಯ ನಿರ್ಮಾಣವಾದರೆ ಪರಿಸರಕ್ಕೆ ಹಾನಿಯಾಗುತ್ತದೆ’ ಎಂದು ಜೀವವೈವಿಧ್ಯ ಉದ್ಯಾನದ ಹಿಂದಿನ ಸಂಚಾಲಕ ಪ್ರೊ.ಟಿ.ಜೆ. ರೇಣುಕಾಪ್ರಸಾದ್‌ ಆತಂಕ ವ್ಯಕ್ತಪಡಿಸಿದ್ದಾರೆ. 

‘ದೇಶದಲ್ಲಿಯೇ ದೊಡ್ಡ ಪ್ರಮಾಣದ ಜೈವಿಕ ವೈವಿಧ್ಯವನ್ನು ಹೊಂದಿರುವ, ಪ್ರಾಕೃತಿಕವಾಗಿ ಹೆಚ್ಚು ಸಂಪದ್ಭರಿತವಾಗಿರುವ ವಿಶ್ವವಿದ್ಯಾಲಯದ ಪ್ರಾಂಗಣವಿದು. ಯಲ್ಲಪ್ಪ ರೆಡ್ಡಿಯವರ 25 ವರ್ಷಗಳ ಶ್ರಮದ ಫಲವಾಗಿ ವಿಶ್ವವಿದ್ಯಾಲಯದಲ್ಲಿ ಜೈವಿಕ ಉದ್ಯಾನ ತಲೆ ಎತ್ತಿದೆ. ಈ ಪ್ರದೇಶದಲ್ಲಿ ಮಾನವ ಚಟುವಟಿಕೆ ಹೆಚ್ಚಾದರೆ, ಪರಿಸರಕ್ಕೆ ಹೆಚ್ಚು ಹಾನಿಯಾಗಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು