ಶುಕ್ರವಾರ, ಏಪ್ರಿಲ್ 3, 2020
19 °C
ವಿಧವೆಯರು, ವಿಚ್ಛೇದಿತ ಮಹಿಳೆಯರಿಗೆ ವಂಚನೆ

ಮದುವೆ ಆಮಿಷ: ಸಿಕ್ಕಿಬಿದ್ದ ‘ಆನ್‌ಲೈನ್ ವರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈವಾಹಿಕ ಜಾಲತಾಣ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಮದುವೆ ಆಮಿಷವೊಡ್ಡಿ ವಂಚಿಸುತ್ತಿದ್ದ ಆರೋಪದಡಿ ಮಂಜುನಾಥ್ (34) ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

‘ರಾಮನಗರ ಜಿಲ್ಲೆಯ ಮಾಯಗಾನಹಳ್ಳಿಯ ಮಂಜುನಾಥ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಕಾಮಾಕ್ಷಿಪಾಳ್ಯದ ವೃಷಭಾವತಿನಗರದಲ್ಲಿ ನೆಲೆಸಿದ್ದ. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ನಿರುದ್ಯೋಗಿಯಾಗಿದ್ದರೂ ತಾನೊಬ್ಬ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೆಂದು ಸುಳ್ಳು ಹೇಳಿಕೊಂಡು ವೈವಾಹಿಕ ಜಾಲತಾಣದಲ್ಲಿ ಪ್ರೊಫೈಲ್ ತೆರೆದಿದ್ದ. ಅದನ್ನು ನಂಬಿದ್ದ ವೈದ್ಯೆಯೊಬ್ಬರು ಆತನನ್ನು ಸಂಪರ್ಕಿಸಿ ವಂಚನೆಗೀಡಾಗಿದ್ದಾರೆ.’

‘ವೈದ್ಯೆ ನೀಡಿದ್ದ ದೂರು ಆಧರಿಸಿಯೇ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ಮತ್ತಷ್ಟು ಮಹಿಳೆಯರಿಗೆ ವಂಚನೆ ಆಗಿರುವ ಮಾಹಿತಿ ಇದೆ’ ಎಂದು ತಿಳಿಸಿದರು.

ಹಣ, ಮೊಬೈಲ್ ಪಡೆದಿದ್ದ: ‘ಮ್ಯಾಟ್ರಿಮೋನಿ ಡಾಟ್ ಕಾಮ್‌ ಜಾಲತಾಣದಲ್ಲಿ ಖಾತೆ ತೆರೆದಿದ್ದ ಆರೋಪಿ, ‘ಮದುವೆಯಾಗಲು ಹೆಣ್ಣು ಬೇಕು. ವಿಧವೆ ಹಾಗೂ ವಿಚ್ಛೇದಿತೆ ಆದರೂ ಪರವಾಗಿಲ್ಲ’ ಎಂದು ಬರೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯೆ ಆರೋಪಿಯನ್ನು ಸಂಪರ್ಕಿಸಿದ್ದರು. ನಂತರ, ಇಬ್ಬರೂ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ಮದುವೆ ಆಗುವುದಾಗಿ ಆರೋಪಿ ಒಪ್ಪಿಕೊಂಡಿದ್ದರಿಂದ ಸಲುಗೆಯೂ ಬೆಳೆದಿತ್ತು.’

‘ಆರೋಪಿ ತನ್ನನ್ನೇ ಮದುವೆ ಆಗುತ್ತಾನೆಂದು ತಿಳಿದ ವೈದ್ಯೆ, ₹5 ಲಕ್ಷ ಹಣ ಹಾಗೂ ಬೆಲೆಬಾಳುವ ಮೊಬೈಲ್‌ ನೀಡಿದ್ದರು. ಇತ್ತೀಚೆಗೆ ಆರೋಪಿಯ ನೈಜಬಣ್ಣ ಬಯಲಾಗಿತ್ತು. ಬಳಿಕ ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು