ಬುಧವಾರ, ಜನವರಿ 22, 2020
18 °C
179 ಕಾರು, ₹ 90.46 ಲಕ್ಷ ನಗದು ಜಪ್ತಿ

‘ಯಲ್ಲೊ ಎಕ್ಸ್‌ಪ್ರೆಸ್ ಇಂಡಿಯಾ’ ವಂಚನೆ ಪ್ರಕರಣ: ನಿರ್ದೇಶಕರು ಸಿಐಡಿ ಬಲೆಗೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪದಡಿ ‘ಯಲ್ಲೊ ಎಕ್ಸ್‌ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಎಂಟು ನಿರ್ದೇಶಕರು ಕೊನೆಗೂ ಸಿಐಡಿ ಬಲೆಗೆ ಬಿದ್ದಿದ್ದಾರೆ.

ನೆಲಮಂಗಲ ಹಾಗೂ ಬೆಂಗಳೂರಿನ ಹಲವು ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರ
ಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಆರ್ಥಿಕ ವಿಭಾಗದ ಎಸ್ಪಿ ಚಂದ್ರಗುಪ್ತ ನೇತೃತ್ವದ ತಂಡ, ಹೊರ ರಾಜ್ಯದಲ್ಲಿದ್ದ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.

ದೆಹಲಿಯ ಹರಿದಾಸ್ ನಾಯರ್, ರುಮಿತ್ ಮಲ್ಹೋತ್ರ, ಕೇರಳದ ಜುಜು ಥಾಮಸ್, ಸೆಬಿ ಥಾಮಸ್, ತಮಿಳುನಾಡಿನ ಮನು ಕುಟ್ಟನ್, ರವಿಶಂಕರ್, ಕರ್ನಾಟಕದ ರಶ್ಮಿ ಮಂಚಯ್ಯ, ಆಯಿಷಾ ಸಿದ್ಧಿಕಿ ಬಂಧಿ
ತರು. ಜನರ ಜೊತೆ ನೇರ ಸಂಪರ್ಕದಲ್ಲಿದ್ದು ವಂಚಿಸಿರುವ ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಸಿಐಡಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.

‘ಕಾರು ಹೊಂದಿ ಮತ್ತು ಗಳಿಸಿ’ ಎಂಬ ಘೋಷವಾಕ್ಯ ಹೊಂದಿದ್ದ ಕಂಪನಿ ಕೇರಳ ಹಾಗೂ ಕರ್ನಾಟಕದಲ್ಲಿ ಕಚೇರಿ ತೆರೆದಿತ್ತು. ಆಯಾ ರಾಜ್ಯಗಳ ವ್ಯಕ್ತಿಗಳನ್ನೇ ನಿರ್ದೇಶಕರನ್ನಾಗಿ ನೇಮಿಸಿಕೊಂಡಿತ್ತು. ಅವರ ಮೂಲಕವೇ ಹೂಡಿಕೆದಾರರ ಜೊತೆ ಒಪ್ಪಂದ ಪತ್ರ ಮಾಡಿಸಲಾಗಿತ್ತು. ಕಂಪನಿಯ ವಹಿವಾಟು ಬಗ್ಗೆ ಹೆಚ್ಚು ಗೊತ್ತಿರಲಿಲ್ಲವೆಂದು ನಿರ್ದೇಶಕರು ಹೇಳುತ್ತಿದ್ದಾರೆ’ ಎಂದು ಸಿಐಡಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರು ಖರೀದಿಸಿ ಟ್ರಾವೆಲ್ಸ್ ಸಂಸ್ಥೆಗಳಿಗೆ ಬಾಡಿಗೆಗೆ ಕೊಟ್ಟು ಹೆಚ್ಚಿನ ಲಾಭಾಂಶ ನೀಡುವುದಾಗಿ ಹೂಡಿಕೆದಾರರಿಗೆ ಆಮಿಷವೊಡ್ಡಿದ್ದ ಕಂಪನಿಯು ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ವಹಿವಾಟು ನಡೆಸುತ್ತಿತ್ತು. ಕಂಪನಿ ವಿರುದ್ಧ ‘ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ (ಬಿಯುಡಿಎಸ್‌) ಕಾಯ್ದೆ 2019’ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೂಡಿಕೆದಾರರಿಂದ ₹ 60 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿರುವುದು ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ಹೇಳಿದರು.

179 ಕಾರು, ₹90.46 ಲಕ್ಷ ಜಪ್ತಿ: ‘ಹೂಡಿಕೆದಾರರ ಹಣದಲ್ಲಿ ಖರೀದಿಸಿದ್ದ 179 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ 78 ಕಾರುಗಳು ಕಂಪನಿ ಪ್ರತಿನಿಧಿ
ಗಳ ಬಳಿ ಇದ್ದವು. ಉಳಿದ 101 ಕಾರುಗಳನ್ನು ಟ್ರಾವೆಲ್ಸ್ ಸಂಸ್ಥೆಗಳಿಗೆ ಬಿಡಲಾಗಿತ್ತು’ ಎಂದು ಅಧಿಕಾರಿ ತಿಳಿಸಿದರು.

‘ಕೆಲವರು ಕಂಪನಿಯಿಂದ ಪಡೆದಿದ್ದ ಕಾರುಗಳನ್ನು ಇಂದಿಗೂ ಓಡಿಸುತ್ತಿದ್ದರು. ಅವುಗಳನ್ನೂ ಜಪ್ತಿ ಮಾಡಲಾಗಿದೆ. ಕಂಪನಿ ಕಚೇರಿ ಮೇಲೆ ಕಳೆದ ತಿಂಗಳು ದಾಳಿ ನಡೆಸಲಾಗಿತ್ತು. ₹ 90.46 ಲಕ್ಷ ನಗದು ಸಿಕ್ಕಿತ್ತು. ಕಂಪನಿಗೆ ಸೇರಿದ್ದ ₹ 24.30 ಲಕ್ಷ ಹಣವಿರುವ ವಿವಿಧ ಬ್ಯಾಂಕ್‌ನ ಖಾತೆಗಳನ್ನೂ ಇದೀಗ ಜಪ್ತಿ ಮಾಡಿಸಲಾಗಿದೆ. ಗ್ರಾಹಕರಿಂದ ಸಂಗ್ರಹಿಸಿದ್ದ ₹ 24 ಲಕ್ಷವನ್ನು ಬೇರೆ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ. ಅದು ವಂಚನೆ ಹಣವೆಂದು ಆಯಾ ಕಂಪನಿಗಳಿಗೆ ಈಗಾಗಲೇ ತಿಳಿಸಲಾಗಿದ್ದು, ಅದರ ವಹಿವಾಟು ಸಹ ಸ್ಥಗಿತಗೊಳಿಸಲಾಗಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ನಿವೃತ್ತ ಅಧಿಕಾರಿ ಶಾಮೀಲು
‘ಕಾನೂನು ಸಲಹೆ ಹಾಗೂ ದಾಖಲಾತಿಗಳ ನಿರ್ವಹಣೆಗಾಗಿ ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಕಂಪನಿ ನೇಮಕ ಮಾಡಿಕೊಂಡಿತ್ತು. ಅವರ ಮೂಲಕವೂ ಜನರನ್ನು ಸಂಪರ್ಕಿಸಿ ಒಪ್ಪಂದ ಪತ್ರಗಳನ್ನು ಸಿದ್ಧಪಡಿಸಿತ್ತು. ವಂಚನೆ ಪ್ರಕರಣದಲ್ಲಿ ನಿವೃತ್ತ ಅಧಿಕಾರಿಯೂ ಶಾಮೀಲಾಗಿರುವ ಅನುಮಾನವಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರಧಾನ ಕಾರ್ಯದರ್ಶಿಗೆ ವರದಿ 
‘ಪ್ರಕರಣದ ತನಿಖಾ ವರದಿಯನ್ನು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗಿದೆ. ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಲಾದ ವಸ್ತುಗಳ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ’ ಎಂದು ಸಿಐಡಿ ಅಧಿಕಾರಿ ಹೇಳಿದರು.

‘ಪ್ರಧಾನ ಕಾರ್ಯದರ್ಶಿಯವರು ವರದಿಯನ್ನು ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಿದ್ದಾರೆ. ನಂತರವೇ ಉಪವಿಭಾಗಾಧಿಕಾರಿ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ’ ಎಂದು ತಿಳಿಸಿದರು.

*
ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಹೂಡಿಕೆದಾರರನ್ನು ವಂಚಿಸಲಾಗಿದೆ. ತನಿಖೆ ಅಂತಿಮ ಹಂತದಲ್ಲಿದ್ದು, ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆದಿದೆ
-ಪ್ರವೀಣ್ ಸೂದ್, ಸಿಐಡಿ ವಿಭಾಗದ ಡಿಜಿಪಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು