ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿ ಕೋಟಿ ಕುಳಗಳು

Last Updated 19 ನವೆಂಬರ್ 2019, 2:52 IST
ಅಕ್ಷರ ಗಾತ್ರ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಧಿಪತಿಗಳೇ ವಿವಿಧ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಸ್ಪರ್ಧಿಸಿರುವ ಎಲ್ಲರೂ ಕೋಟಿಗಟ್ಟಲೆ ಆಸ್ತಿ ಹೊಂದಿದ್ದು, ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ಹೆಚ್ಚು ಶ್ರೀಮಂತ: ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಇತರರಿಗಿಂತ ಹೆಚ್ಚು ಶ್ರೀಮಂತರಾಗಿದ್ದು, ಸಾಲದಲ್ಲೂ ಎಲ್ಲರಿಗಿಂತ ಮುಂದಿದ್ದಾರೆ. ಜವರಾಯಿಗೌಡ, ಅವರ ಪತ್ನಿ ಹಾಗೂ ಸಂತೋಷ್ ಎಂಟರ್‌ಪ್ರೈಸಸ್‌ನಲ್ಲಿ ಹೂಡಿಕೆ ಮಾಡಿರುವುದು ಸೇರಿದಂತೆ ಸುಮಾರು ₹ 167 ಕೋಟಿ ಮೊತ್ತದ ಆಸ್ತಿ ಹೊಂದಿದ್ದರೆ, ₹55 ಕೋಟಿ ಸಾಲವೂ ಇದೆ. 2018ರ ಚುನಾವಣೆ ಸಮಯದಲ್ಲಿ ₹278 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಸುಮಾರು ₹100 ಕೋಟಿ ಸಾಲ ಮಾಡಿರುವುದಾಗಿ ನಮೂದಿಸಿದ್ದರು. ಆದರೆ ಈ ಸಲ ಆಸ್ತಿ ಮೊತ್ತವೂ ಕಡಿಮೆಯಾಗಿದ್ದು, ಸಾಲದ ಪ್ರಮಾಣವೂ ಇಳಿಕೆಯಾಗಿದೆ.

₹16.25 ಕೋಟಿ ಮೊತ್ತದ ಚರಾಸ್ತಿ, ₹29.18 ಕೋಟಿ ಬೆಲೆ ಬಾಳುವ ಕೃಷಿ ಭೂಮಿ, ₹15.19 ಕೋಟಿ ಮೌಲ್ಯದ ಕೃಷಿಯೇತರ ಜಮೀನು, ₹5.65 ಕೋಟಿ ಮೊತ್ತದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಪತ್ನಿ ಟಿ.ಎ.ಗಾಯತ್ರಿ ಹೆಸರಿನಲ್ಲಿ ₹8.33 ಕೋಟಿ ಮೊತ್ತದ ಚರಾಸ್ತಿ, ₹86 ಕೋಟಿ ಬೆಲೆ ಬಾಳುವ ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಗಳು ಇವೆ.

ನಾಗರಾಜ್ ಬಳಿಯೂ ಕೋಟಿ: ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ್ ಸುಮಾರು ₹ 39 ಕೋಟಿ ಮೊತ್ತದ ಆಸ್ತಿ ಹೊಂದಿದ್ದಾರೆ. ₹13.14 ಕೋಟಿ ಮೊತ್ತದ ಸ್ಥಿರಾಸ್ತಿ, ₹10 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, ₹2 ಕೋಟಿಯ ಕೃಷಿ ಭೂಮಿ ಇದೆ. ಪತ್ನಿ ಬಳಿ ₹11.61 ಕೋಟಿ ಮೊತ್ತದ ಚರಾಸ್ತಿ, ಮಗನ ಬಳಿ ₹1.34 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ನಾಗರಾಜ್ ಆಸ್ತಿ ಸಂಪಾದನೆಯಲ್ಲಿ ಮುಂದಿದ್ದು, ಇವರು ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾಗಿದ್ದಾರೆ.

ಸೋಮಶೇಖರ್ ಆಸ್ತಿ ಹೆಚ್ಚಳ: ಬಿಜೆಪಿಯಿಂದ ಕಣಕ್ಕಿಳಿದಿರುವ ಎಸ್.ಟಿ.ಸೋಮಶೇಖರ್ ಆಸ್ತಿ ಮೌಲ್ಯದಲ್ಲಿ ಏರಿಕೆಯಾಗಿದ್ದು, ಸ್ಥಿರಾಸ್ತಿ, ಚರಾಸ್ತಿ ಸೇರಿದಂತೆ ₹10.23 ಕೋಟಿ, ಅವರ ಪತ್ನಿ ಎನ್.ರಾಧಾ ಬಳಿ ₹4.27 ಕೋಟಿ, ಮಗನ ಬಳಿ ₹3.82 ಕೋಟಿ ಮೌಲ್ಯದ ಆಸ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT