ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕನ ಅಪಹರಿಸಿ ₹ 2 ಕೋಟಿಗೆ ಬೇಡಿಕೆ: ಏಳು ಗಂಟೆಯಲ್ಲೇ ಆರೋಪಿಗಳ ಬಂಧನ

Last Updated 27 ಮಾರ್ಚ್ 2021, 1:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನರ್ಸಿಂಗ್ ಕಾಲೇಜು ಮುಖ್ಯಸ್ಥರೊಬ್ಬರ ಮಗನನ್ನು ಅಪಹರಿಸಿ, ಅವರ ಬಿಡುಗಡೆಗೆ ₹ 2 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಕೆ.ಜಿ.ಹಳ್ಳಿ ನಿವಾಸಿಯಾಗಿದ್ದ ರಬೀಜ್‌ ಅರಾಪತ್ (22) ಎಂಬುವರನ್ನು ಗುರುವಾರ (ಮಾ. 25) ಅಪಹರಣ ಮಾಡಲಾಗಿತ್ತು. ಆ ಸಂಬಂಧ ಅವರ ತಂದೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ ಏಳು ಗಂಟೆಯಲ್ಲೇ ಯುವಕನನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಇಲ್ಲಿ ತಿಳಿಸಿದರು.

‘ಸ್ಥಳೀಯ ನಿವಾಸಿಗಳಾದ ಅಬ್ದುಲ್ ಪಹಾದ್, ಜಬೀವುಲ್ಲಾ, ಕೊರೆವೆಲ್ ಸಲ್ಮಾನ್ ಹಾಗೂ ತೌಫಿಕ್ ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರು ತಲೆಮರೆಸಿಕೊಂಡಿದ್ದಾರೆ. ಮದುವೆ ಹಾಗೂ ಇತರೆ ಕೆಲಸಕ್ಕಾಗಿ ಆರೋಪಿಗಳು ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸುವುದಕ್ಕಾಗಿ, ಶ್ರೀಮಂತನ ಮಗನನ್ನು ಅಪಹರಿಸಿ ಹಣ ಸಂಪಾದಿಸಲು ಮುಂದಾಗಿದ್ದರು’ ಎಂದೂ ಹೇಳಿದರು.

ಕೈ, ಕಾಲು ಕತ್ತರಿಸುವ ಬೆದರಿಕೆ: ‘ಅಪಹರಣಕ್ಕೀಡಾಗಿದ್ದ ರಬೀಜ್ ಅವರ ತಂದೆ, ನರ್ಸಿಂಗ್ ಕಾಲೇಜು ಮುಖ್ಯಸ್ಥರು. ಅವರ ಬಳಿ ಹಣವಿರುವುದನ್ನು ತಿಳಿದುಕೊಂಡಿದ್ದ ಆರೋಪಿಗಳು ಸಂಚು ರೂಪಿಸಿದ್ದರು. ಗುರುವಾರ ಮಧ್ಯಾಹ್ನ ರಬೀಜ್ ಅವರನ್ನು ಅಪಹರಿಸಿದ್ದ ಆರೋಪಿಗಳು, ಎರಡು ಗಂಟೆ ಬಿಟ್ಟು ತಂದೆಗೆ ಕರೆ ಮಾಡಿದ್ದರು’ ಎಂದೂ ಕಮಲ್ ಪಂತ್ ತಿಳಿಸಿದರು.

‘₹ 2 ಕೋಟಿ ಕೊಟ್ಟರೆ ನಿಮ್ಮ ಮಗನನ್ನು ಬಿಟ್ಟು ಕಳುಹಿಸುತ್ತೇವೆ. ಇಲ್ಲದಿದ್ದರೆ, ಮಗನ ಕೈ–ಕಾಲು ಕತ್ತರಿಸುತ್ತೇವೆ’ ಎಂಬುದಾಗಿ ಆರೋಪಿಗಳು ಬೆದರಿಸಿದ್ದರು. ಪೊಲೀಸರಿಗೆ ದೂರು ನೀಡದಂತೆಯೂ ಎಚ್ಚರಿಕೆ ನೀಡಿದ್ದರು.’

‘ಅಪಹರಣ ಮಾಡಿದ ಜಾಗ ಹಾಗೂ ಇತರೆ ಪ್ರದೇಶಗಳಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದ ಪೊಲೀಸರ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸರ ತಂಡಕ್ಕೆ ₹ 40 ಸಾವಿರ ಬಹುಮಾನ ಘೋಷಿಸಲಾಗಿದೆ’ ಎಂದೂ ಕಮಲ್ ಪಂತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT