ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಅಪಹರಣ: ಕಾರು ಬೆನ್ನಟ್ಟಿ ಯುವಕನ ರಕ್ಷಣೆ

Last Updated 13 ಜನವರಿ 2023, 2:50 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ವಿಚಾರವಾಗಿ ತೌಹಿದ್ ಪಾಷಾ ಎಂಬುವವರನ್ನು ಅಪಹರಿಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬಂಡೆಪಾಳ್ಯ ಪೊಲೀಸರು ಬುಧವಾರ ರಾತ್ರಿ ಬೆನ್ನಟ್ಟಿ ಹಿಡಿದಿದ್ದಾರೆ.

‘ಕುಮಾರಸ್ವಾಮಿ ಲೇಔಟ್ ನಿವಾಸಿ ತೌಹಿದ್ ಅವರನ್ನು ಇತ್ತೀಚೆಗೆ ಅಪಹರಿಸಲಾಗಿತ್ತು. ಬುಧವಾರ ರಾತ್ರಿ ತೌಹಿದ್‌ನನ್ನು ಕಾರಿನಲ್ಲಿ ಕರೆದೊಯ್ಯಲಾಗುತ್ತಿತ್ತು. 2 ಕಿ.ಮೀವರೆಗೆ ಕಾರು ಬೆನ್ನಟ್ಟಿ ತೌಹಿದ್‌ ಅವರನ್ನು ರಕ್ಷಿಸಲಾಗಿದೆ. ಆರೋಪಿ ಗೋಪಿ ಎಂಬಾತನನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಶಬ್ಬೀರ್ ಸೇರಿ ಮೂವರು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ತೌಹಿದ್ ಅವರು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶಬ್ಬೀರ್ ಬಳಿ ಹಣಕಾಸು ವ್ಯವಹಾರವಿಟ್ಟುಕೊಂಡಿದ್ದರು. ಕೌಟುಂಬಿಕ ವಿಚಾರವಾಗಿಯೂ ಇಬ್ಬರ ನಡುವೆ ವೈಷಮ್ಯವಿತ್ತು. ಇದೇ ಕಾರಣಕ್ಕೆ ತೌಹಿದ್‌ ಅವರನ್ನು ಅಪಹರಿಸಲು ಶಬ್ಬೀರ್ ಸಂಚು ರೂಪಿಸಿದ್ದ. ಸ್ನೇಹಿತರ ಸಹಾಯ ಪಡೆದಿದ್ದ’ ಎಂದು ತಿಳಿಸಿದರು.

₹ 60 ಸಾವಿರಕ್ಕೆ ಬೇಡಿಕೆ: ‘ಶಬ್ಬೀರ್ ಹಾಗೂ ಸ್ನೇಹಿತರು, ಬಿರಿಯಾನಿ ತಿನ್ನಲು ಕರೆದು ಕಾರಿನಲ್ಲಿ ತೌಹಿದ್ ಅವರನ್ನು ಅಪಹರಿಸಿದ್ದರು. ಪೋಷಕರಿಗೆ ಕರೆ ಮಾಡಿ ₹ 60 ಸಾವಿರ ನೀಡುವಂತೆ ಬೇಡಿಕೆ ಇರಿಸಿದ್ದರು. ಹೆದರಿದ್ದ ಪೋಷಕರು ₹ 35 ಸಾವಿರ ನೀಡಿದ್ದರು. ಉಳಿದ ಹಣವಿಲ್ಲವೆಂದು ಹೇಳಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಬಾಕಿ ಹಣ ಕೊಡುವವರೆಗೂ ತೌಹಿದ್‌ ಅವರನ್ನು ಬಿಡುಗಡೆ ಮಾಡುವುದಿಲ್ಲವೆಂದು ಆರೋಪಿಗಳು ಹೇಳಿದ್ದರು. ಮತ್ತಷ್ಟು ಹೆದರಿದ ಪೋಷಕರು, ಬುಧವಾರ ರಾತ್ರಿ ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿದರು.

ಬ್ಯಾರಿಕೇಡ್‌ಗೆ ಗುದ್ದಿದ್ದ ಕಾರು: ‘ರಾತ್ರಿ ಗಸ್ತಿನಲ್ಲಿದ್ದ ಆಡುಗೋಡಿ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದರು. ಕೋರಮಂಗಲದ 100 ಅಡಿ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅತಿ ವೇಗವಾಗಿ ಬಂದಿದ್ದ ಹೊಂಡಾ ಸಿಟಿ ಕಾರು, ಬ್ಯಾರಿಕೇಡ್‌ಗೆ ಗುದ್ದಿತ್ತು. ಅದರೊಳಗಿದ್ದ ತೌಹಿದ್, ಕಾಪಾಡಿ... ಕಾಪಾಡಿ... ಎಂಬುದಾಗಿ ಕೂಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪೊಲೀಸರು ತಡೆಯಲು ಮುಂದಾದಾಗ ಆರೋಪಿಗಳು ಅತಿ ವೇಗದಲ್ಲಿ ಕಾರು ಚಲಾಯಿಸಿಕೊಂಡು ಹೋಗಿದ್ದರು. 2. ಕಿ.ಮೀ.ವರೆಗೂ ಕಾರು ಬೆನ್ನಟ್ಟಿದ್ದ ಪೊಲೀಸರು, ಕೋರಮಂಗಲ ವಾಟರ್ ಟ್ಯಾಂಕ್ ಬಳಿ ಕಾರು ಅಡ್ಡಗಟ್ಟಿ ಗೋಪಿಯನ್ನು ಬಂಧಿಸಿದರು. ಮೂವರು ಓಡಿಹೋದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT