ಭಾನುವಾರ, ಫೆಬ್ರವರಿ 28, 2021
20 °C

‘ಸಚಿವರಿಗೆ ಬೇಡವಾದ ಯುವಜನ–ಕ್ರೀಡಾ ಖಾತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ’ಸಚಿವ ಸಂಪುಟ ವಿಸ್ತರಣೆಯಾಗುವ ಪ್ರತಿ ಸಲವೂ ಯಾವ ರಾಜಕಾರಣಿ ಸಹ ಯುವಜನ ಮತ್ತು ಕ್ರೀಡಾ ಇಲಾಖೆಯ ಜವಾಬ್ಧಾರಿ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ. ಇದು, ಈ ಸಂಪುಟ ವಿಸ್ತರಣೆಯಲ್ಲೂ ಪುನರಾವರ್ತನೆಯಾಗಿದೆ’ ಎಂದು ಹಿರಿಯ ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸಂವಾದ ಯುವ ಸಂಪನ್ಮೂಲ ಕೇಂದ್ರ, ಯುವ ಮುನ್ನಡೆ ಹಾಗೂ ಲಲನಾ ಮಹಿಳಾ ವೇದಿಕೆಯ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುಜವನರ ಹಕ್ಕುಗಳ ಯುವಾಂದೋಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುವಜನರು ದೇಶದ ಸಂಪತ್ತು’ ಎಂಬ ವಾಕ್ಯವನ್ನು ರಾಜಕಾರಣಿಗಳು ಹೆಚ್ಚಾಗಿ ಬಳಸಿ, ಅದಕ್ಕೆ ಅರ್ಥವಿಲ್ಲದಂತೆ ಮಾಡಿದ್ದಾರೆ. ಯುವಜನರು ನಿಜವಾಗಿಯೂ ಮಹತ್ವದ ಸಂಪತ್ತು ಎಂಬ ಅರಿವು ಇದ್ದಿದ್ದರೆ, ಯುವಜನ ಖಾತೆಗಾಗಿ ಮುಗಿಬೀಳಬೇಕಿತ್ತು. ವಾಕ್ಯಗಳು ಕೇವಲ ಭಾಷಣಕ್ಕೆ ಸೀಮಿತವಾಗಿರುವುದರಿಂದ ರಾಜ್ಯದ ಯುವ ಸಂಪನ್ಮೂಲ ಕಡೆಗಣಿಸಲ್ಪಟ್ಟಿದೆ’ ಎಂದರು.

‘ರಾಜಕಾರಣಿಗಳು ಯುವಜನರನ್ನು ಕೇವಲ ದುಡಿಯುವ ಕೈಗಳನ್ನಾಗಿ ನೋಡಿದರೆ ಸಾಲದು. ಅವರಿಗೆ ಮಿಡಿಯುವ ಹೃದಯವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂದಿನ ಶಿಕ್ಷಣವೂ ಯುವ ವಿದ್ಯಾರ್ಥಿಗಳನ್ನು ಉತ್ಪಾದನಾ ಯಂತ್ರಗಳನ್ನಾಗಿ ಸಿದ್ಧಪಡಿಸುತ್ತಿದೆ’ ಎಂದು ಹೇಳಿದರು.

ಯುವಾಂದೋಲನದ ಕಾರ್ಯಕರ್ತೆ ಪೂಜಾ ನಾರಾಯಣ, ‘ಯುವಜನರ ಸಬಲೀಕರಣ ಇಲಾಖೆ ಮೂಲಕ ಕೇವಲ ಕ್ರೀಡಾ ಸಾಮಗ್ರಿ ಹಂಚಿದರೆ ಸಾಲದು. ಯುವಜನರಿಗಾಗಿ ನಿಗಮ ಸ್ಥಾಪಿಸುವುದಾಗಿ 2013ರಲ್ಲೇ ಬಿಜೆಪಿ ಹೇಳಿತ್ತು. ಆ ಮಾತಿನಂತೆ ಈಗ ನಡೆದುಕೊಳ್ಳಲಿ. ಯುವ ನೀತಿ ಜಾರಿಗೆ ತಂದು ಯುವಜನರ ಹಕ್ಕುಗಳನ್ನು ಘೊಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ದಿಲೀಪ್, ಅವಿನಾಶ್ ಅವರು ಸಂವಾದ ನಡೆಸಿದರು. ಆರ್.ಸಿ.ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಣ ಕುಲಗೋಡು, ಉಪನ್ಯಾಸಕರಾದ ಸಂಚಿತಾ ಭೋಪಯ್ಯ, ಪ್ರೇಮಾವತಿ , ಲಕ್ಷ್ಮಿ, ಸಂವಾದ ಯುವಜನ ಕಾರ್ಯಕರ್ತರಾದ ಶ್ರೀಕಾಂತ ರಾಮಕ್ಕ, ಜ್ಯೋತಿ, ಹನುಮಂತ ಹಾಲಿಗೇರಿ ಹಾಗೂ ಇತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು