ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೂ ಟ್ಯೂಬ್‌ ಕಲಿಕೆಯೇ ಲೇಸು’

ಐಐಎಸ್ಸಿಯಲ್ಲಿ ಓಪನ್‌ ಡೇ: ತುಂಬಿ ತುಳುಕಿದ ತರುಣ–ತರುಣಿಯರು...!
Last Updated 29 ಫೆಬ್ರುವರಿ 2020, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪಠ್ಯ ಕ್ರಮಕ್ಕೂ ಹೊರ ಪ್ರಪಂಚದಲ್ಲಿ ವಿಜ್ಞಾನದ ನಾಗಾಲೋಟಕ್ಕೂ ಭೂಮ್ಯಾಕಾಶದ ಅಂತರವಿದೆ. ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಯ ಮಧ್ಯೆ ನಾವು ಕಾಲೇಜುಗಳಲ್ಲಿ ಕಲಿಯುತ್ತಿರುವ ಗತಿ ತುಂಬಾ ಹಿಂದಿದೆ ಎನಿಸುತ್ತದೆ. ಇದನ್ನು ನೋಡಿದರೆ ಯೂ ಟ್ಯೂಬ್‌ ಕಲಿಕೆಯೇ ಲೇಸು...!’

ನಗರದ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಓಪನ್‌ ಡೇ-2020’ ಮೇಳದಲ್ಲಿ ವಿಜ್ಞಾನದ ಅನ್ವೇಷಣೆ, ಅನುಭವಗಳನ್ನು ಕಣ್ತುಂಬಿಕೊಂಡ ನಂತರ ಹೆಸರು ಹೇಳಲು ಇಚ್ಛಿಸದ ತುಮಕೂರಿನ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ವಿದ್ಯಾರ್ಥಿಗಳ ಸಮೂಹ, ‘ನಾವು ಕಲಿಯುತ್ತಿರುವ ಪಠ್ಯಕ್ರಮಕ್ಕೂ ಹೊರಜಗತ್ತಿನಲ್ಲಿನ ವಿಜ್ಞಾನದ ಬೆಳವಣಿಗೆಳಿಗೂ ಎಷ್ಟೊಂದು ಅಂತರವಿದೆ ಎಂಬುದು ಇಲ್ಲಿಗೆ ಬಂದ ಮೇಲೆ ಅರಿವಾಗಿದೆ’ ಎಂದರು.

ಇಂತಹುದೇ ಅಭಿಪ್ರಾಯವನ್ನು ಮೈಸೂರಿನ ಜಿಎಸ್‌ಎಸ್‌ಎಸ್‌ ತಾಂತ್ರಿಕ ಕಾಲೇಜಿನ ಟೆಲಿಕಮ್ಯುನಿಕೇಷನ್‌ ವಿಭಾಗದ ವಿದ್ಯಾರ್ಥಿನಿಯರು, ‘ಇಲ್ಲಿ ಬಂದು ವಿಜ್ಞಾನದ ವಿಶಾಲ ಪ್ರಪಂಚವನ್ನು ನೋಡಿದಾಗ ನಾವಿನ್ನೂ ಓಬೀರಾಯನ ಕಾಲದ ಅಭ್ಯಾಸ ಕ್ರಮದಲ್ಲಿದ್ದೇವಲ್ಲಾ, ವಿಟಿಯು ಮುಚ್ಚಿಬಿಡುವುದೇ ಒಳ್ಳೆಯದು’ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮೇಳದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ಮೇಳದ ಮಳಿಗೆಗಳನ್ನು ಮನದಣಿಯೆ ಸುತ್ತಿದರು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸಂಶೋಧನಾ ಆಸಕ್ತರು; ಭೌತವಿಜ್ಞಾನ, ರಸಾಯನವಿಜ್ಞಾನ, ‌ ಮೆಕ್ಯಾನಿಕಲ್‌ ವಿಜ್ಞಾನ, ಗಣಿತ, ಎಲೆಕ್ಟ್ರಿಕಲ್‌ ವಿಜ್ಞಾನವೂ ಸೇರಿದಂತೆ 40ಕ್ಕೂ ಹೆಚ್ಚು ವಿಭಾಗಗಳಿಗೆ ಭೇಟಿ ಕೊಟ್ಟರು. ಕ್ವಿಜ್‌ ಸ್ಪರ್ಧೆ, ಪ್ರಾತ್ಯಕ್ಷಿಕೆ, ಜನಪ್ರಿಯ ಬೋಧಕರಿಂದ ಪ್ರಯೋಗಗಳ ವಿವರಣೆಯ ರಸದೌತಣ ಸವಿದರು.

6ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಪ್ರತ್ಯೇಕ ಮಕ್ಕಳ ವಿಭಾಗಕ್ಕೂ ಸಹಸ್ರಾರು ವಿದ್ಯಾರ್ಥಿಗಳು ಭೇಟಿ ನೀಡಿದರು. 400 ಎಕರೆಗೂ ಹೆಚ್ಚು ವಿಸ್ತೀರ್ಣವುಳ್ಳ ಕ್ಯಾಂಪಸ್‌ನ ದಶದಿಕ್ಕುಗಳಲ್ಲಿ 5–ಜಿ ತಂತ್ರಜ್ಞಾನ, ಏರೋಸ್ಪೇಸ್‌ ಮತ್ತು ನ್ಯಾನೋ ತಂತ್ರಜ್ಞಾನದ ವಿಭಾಗಗಳು ಹೆಚ್ಚಿನ ಆಕರ್ಷಣೆ ಹೊಂದಿದ್ದವು.

50 ಸಾವಿರ ಮಂದಿ: ಈ ಬಾರಿ ತುಂಬಾ ಶಾಂತಿಯುತವಾಗಿ ನಡೆದಿದ್ದು, 50 ಸಾವಿರಕ್ಕೂ ಅಧಿಕಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT