ಶನಿವಾರ, ಜನವರಿ 29, 2022
19 °C
ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಶಿಫಾರಸು

‘ಯುವ ಸಮೃದ್ಧಿ’ ಕಾರ್ಯಪಡೆ ಮಧ್ಯಂತರ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ಐದು ವರ್ಷಗಳಲ್ಲಿ 1 ಕೋಟಿ  ಉದ್ಯೋಗಗಳನ್ನು ಸೃಷ್ಟಿಸುವ ಸಂಬಂಧ ರಚಿಸಲಾಗಿರುವ ‘ಯುವ ಸಮೃದ್ಧಿ’ ಕಾರ್ಯಪಡೆಯು ಸರ್ಕಾರಕ್ಕೆ ಬುಧವಾರ ಮಧ್ಯಂತರ ವರದಿ ಸಲ್ಲಿಸಿದ್ದು, ‘ಕರ್ನಾಟಕ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ’ ವನ್ನು ಸ್ಥಾಪಿಸಲು ಶಿಫಾರಸು ಮಾಡಿದೆ.

ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಪಡೆ ಮಧ್ಯಂತರ ವರದಿ ಸಲ್ಲಿಸಿತು. ‘ಇನ್ನು 10 ದಿನಗಳಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ’ ಎಂದೂ ತಿಳಿಸಿತು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ ಮಾದರಿಯಲ್ಲೇ ಈ ವೃತ್ತಿ ಮಾರ್ಗದರ್ಶನ ಉತ್ಕೃಷ್ಟತಾ ಕೇಂದ್ರ ಕೂಡಾ ಸರ್ಕಾರಿ– ಖಾಸಗಿ ಪಾಲುದಾರಿಕೆಯಲ್ಲಿ ಅಸ್ತಿತ್ವಕ್ಕೆ ಬಂದು ಸೆಕ್ಷನ್‌ 8 ರ ಅಡಿ ಕಂಪನಿಯಾಗಿರಬೇಕು ಎಂದು ಕಾರ್ಯಪಡೆ ಅಭಿಪ್ರಾಯಪಟ್ಟಿದೆ. ರಾಜ್ಯದಲ್ಲೀಗ ಯಾವುದೇ ಏಕೀಕೃತ ವೃತ್ತಿ ಮಾರ್ಗದರ್ಶನ ಕೇಂದ್ರ ಇಲ್ಲ. ಆದರೆ, ಶಾಲಾ ಹಂತದಿಂದ ಉದ್ಯೋಗ ಗಳಿಸುವ ಹಂತದವರೆಗೆ ಮಾರ್ಗದರ್ಶನ ನೀಡಲು ಸಾಮಾನ್ಯ ರೂಪರೇಷೆ ಸಿದ್ಧಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಡಿಜಿಟಲ್‌ ಕೌಶಲ್ಯಗಳನ್ನು ಮೈಗೂಡಿಸಿ ಉದ್ಯಮಶೀಲತಾ ಧೋರಣೆ ಬೆಳೆಸುವುದು, ವೃತ್ತಿ ಮಾಹಿತಿ ನೀಡುವುದು ಹಾಗೂ ಮಾರ್ಗದರ್ಶನ, ಜಿಲ್ಲೆಗಳಲ್ಲಿ ಉದ್ಯಮಶೀಲ ಪರಿಸರ ನಿರ್ಮಾಣ, ಕೃಷಿ ಹಾಗೂ ಕೃಷಿ ತಾಂತ್ರಿಕತೆಗೆ ಉತ್ತೇಜನ ನೀಡುವ ಬಗ್ಗೆ ಗಮನ ಕೇಂದ್ರೀಕರಿಸಲು ಸಲಹೆ ನೀಡಿದೆ. 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಕೌಶಲ್ಯಗಳನ್ನು ಮತ್ತು 21ನೇ ಶತಮಾನದ ಕೌಶಲಗಳನ್ನು ಕಲಿಸುವುದಕ್ಕಾಗಿ  ‘ವೈಡಬ್ಲು ಎನ್‌ಎಕ್ಸ್‌ ಟಿ ಮತ್ತು ಯುವಾ’ ಕಾರ್ಯಕ್ರಮ ಜಾರಿಗೊಳಿಸಬೇಕೆಂದು ಸಲಹೆ ಕೊಡಲಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ, ಪಿಯು ಮಂಡಳಿ, ಐಟಿಐಗಳು ಯುನಿಸೆಫ್‌ ಜತೆ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು. ಎನ್‌ಇಪಿ ಅಡಿ ಪದವಿ ಮಟ್ಟದಲ್ಲಿ 8 ಕ್ರೆಡಿಟ್‌ ಕೋರ್ಸ್‌ ಪ್ರಾರಂಭಿಸಬೇಕು. ಪಠ್ಯಕ್ರಮ ಸಿದ್ಧಪಡಿಸಲು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಇದನ್ನು ಅಳವಡಿಸಲು ಕಾರ್ಯತಂಡ ರಚಿಸಬೇಕೆಂಬ ಸಲಹೆ ವರದಿಯಲ್ಲಿದೆ ಎಂದೂ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು