ಗುರುವಾರ , ಮೇ 26, 2022
28 °C
ಮತಾಂಧ, ಗೂಂಡಾ ಶಾಸಕನನ್ನು ಬಂಧಿಸಿ: ಬಿಜೆಪಿ ಶಾಸಕರ ಆಗ್ರಹ

ಮಸಿ ಬಳಿಯುವ ಯತ್ನ: ಜಮೀರ್‌ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆದಿದೆ’ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಶಾಸಕರು, ‘ಜಮೀರ್‌ ಒಬ್ಬ ಮತಾಂಧ ಮತ್ತು ಗೂಂಡಾ ಈತನ ವಿರುದ್ಧ ಕಠಿಣ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಮಂಗಳವಾರ ಸರಣಿ ಟ್ವೀಟ್‌ಗಳ ಮೂಲಕ ಸಮಜಾಯಿಷಿ ನೀಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ತಮಗೆ ಮಾಹಿತಿ ನೀಡಿ ಹೋಗಬೇಕಿತ್ತು ಎಂಬುದಾಗಿ ಸೋಮವಾರ ಹೇಳಿಕೆ ನೀಡಿದ್ದರು. ಇದು ಟೀಕೆಗೆ ಕಾರಣವಾಗಿತ್ತು.

ಜಮೀರ್‌ ಹೇಳಿದ್ದು

‘ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತದೆ. ನನ್ನ ಕ್ಷೇತ್ರದ ಜನ ಎಂದಿನಂತೆ ಮುಂದೆಯೂ ಸರ್ಕಾರ, ವೈದ್ಯಕೀಯ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ನಮ್ಮೆಲ್ಲರ ಗುರಿ ಕೊರೊನಾ ನಿರ್ಮೂಲನೆ ಆಗಿರಲಿ’ ಎಂದಿದ್ದಾರೆ.

‘ಈ ಘಟನೆಯಿಂದ ನನ್ನ ಹೆಸರಿಗೆ ಮಸಿ ಬಳಿಯಲು ಎಷ್ಟೇ ಪ್ರಯತ್ನ ನಡೆಸಿದರೂ ನಾನು ಜನ ಸೇವೆಯಿಂದ ಹಿಂದೆ ಸರಿಯುವವನಲ್ಲ. ಮಾನವೀಯತೆಯೇ ನನ್ನ ಧರ್ಮ. ಹಣ, ಅಧಿಕಾರ ಶಾಶ್ವತ ಅಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ನನ್ನ ಸಹೋದರ ಸಹೋದರಿ ಇದ್ದಂತೆ. ಅವರ ಜತೆ ಸದಾ ಇರುತ್ತೇನೆ’ ಎಂದು ಜಮೀರ್‌ ಹೇಳಿದ್ದಾರೆ.

‘ಈ ಘಟನೆ ಸಂಭವಿಸದಂತೆ ಕೈಗೊಳ್ಳಬಹುದಾಗಿದ್ದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಾನು ಆಡಿದ ಮಾತುಗಳಿಗೆ ಬೇರೆಯದೇ ಅರ್ಥ ನೀಡಿ ಕೆಲ ಸಚಿವರು ನನ್ನ ವಿರುದ್ಧ ಏನೇನು ಪದಗಳನ್ನು ಬಳಸಬಹುದೋ ಅವೆಲ್ಲವನ್ನೂ ಬಳಸಿ ನನ್ನನ್ನು ಹಾಡಿ ಹೊಗಳಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

‘ಜಮೀರ್‌, ಖಾದರ್‌ ಇಬ್ಬರನ್ನು ಬಂಧಿಸಿ’

‘ಶಾಸಕ ಜಮೀರ್‌ ಮತಾಂಧ ಮತ್ತು ಗೂಂಡಾ ಇವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ‘ಜಮೀರ್‌ ಅಹಮದ್‌ ಪಾಳೆಗಾರನಾ? ಕೊರೊನಾ ಇರುವವರ ಮನೆಗೆ ಹೋಗಿ ಚಿಕಿತ್ಸೆ ಕೊಟ್ಟು ಗೊತ್ತಿದೆಯೇ? ಈತ ಒಬ್ಬ ಮೂರ್ಖ ಮತ್ತು ಗೂಂಡಾ ಶಾಸಕ. ಈತನನ್ನು ಕೊರೊನಾ ಇರುವ ಪ್ರದೇಶಕ್ಕೆ ಕರೆದೊಯ್ದು ಬಿಡಿ, ಅಲ್ಲಿ ಕೆಲಸ ಮಾಡಲಿ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು