ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಝಿಯು ಹೋಮ್ಸ್‌ ಹಗರಣ: ಸಂತ್ರಸ್ತರ ಪ್ರತಿಭಟನೆ

ಕಂಪನಿ ನಾಪತ್ತೆ * ವಂಚನೆಗೆ ಒಳಗಾದ ಮನೆ ಮಾಲೀಕರು, ಭೋಗ್ಯಕ್ಕೆ ಪಡೆದವರು
Published 24 ಜೂನ್ 2024, 14:55 IST
Last Updated 24 ಜೂನ್ 2024, 14:55 IST
ಅಕ್ಷರ ಗಾತ್ರ

ಬೆಂಗಳೂರು: ‘ಝಿಯು ಹೋಮ್ಸ್‌’ ಕಂಪನಿ ಹೆಸರಲ್ಲಿ ಬಾಡಿಗೆಗೆ ಪಡೆದ ಮನೆಗಳನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಭೋಗ್ಯಕ್ಕೆ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತರು ಸೋಮವಾರ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.

‘ಬಾಡಿಗೆ ನಿರ್ವಹಣಾ ಕಂಪನಿ ‘ಝಿಯು ಹೋಮ್ಸ್‌’ ಚೇರ್‌ಮನ್‌ ಎಂದು ಹೇಳಿಕೊಂಡಿದ್ದ ಅಹಮ್ಮದ್‌ ಅಲಿ ಬೇಗ್‌ 2022ರಲ್ಲಿ ನಮ್ಮನ್ನು ಸಂಪರ್ಕಿಸಿದ್ದರು. ಅವರು ಹೆಣ್ಣೂರಿನಲ್ಲಿರುವ ನಮ್ಮ ಕ್ಲಾಸಿಕ್ ರಾಯಲ್‌ ಗಾರ್ಡನ್‌ ಫ್ಲ್ಯಾಟ್‌ ಅನ್ನು ₹35 ಸಾವಿರ ಬಾಡಿಗೆಗೆ ಪಡೆದುಕೊಂಡಿದ್ದರು. ಅವರು ನಮಗೆ ಮಾಹಿತಿ ನೀಡದೇ ನಕಲಿ ದಾಖಲೆ ಸೃಷ್ಟಿಸಿ ‘ಝಿಯು ಹೋಮ್ಸ್‌’ನವರ ಮನೆ ಎಂದು ಬೇರೆಯವರಿಗೆ ಭೋಗ್ಯಕ್ಕೆ ನೀಡಿದ್ದಾರೆ. ನಮಗೆ ಆರು ತಿಂಗಳು ಬಾಡಿಗೆ ನೀಡಿದ್ದು, ಬಳಿಕ ಪಾವತಿಸಿಲ್ಲ. ಫ್ಲ್ಯಾಟ್‌ ಅನ್ನು ಲೀಸ್‌ಗೆ ಪಡೆದವರು ಬಿಟ್ಟುಕೊಡುತ್ತಿಲ್ಲ. ಈಗ ಝಿಯು ಕಂಪನಿಯವರು ಪರಾರಿಯಾಗಿದ್ದಾರೆ’ ಎಂದ ಸಂತ್ರಸ್ತೆ ಸಾರಮ್ಮ ಜೇಕಬ್‌ ಅಳಲು ತೋಡಿಕೊಂಡರು.

‘ಆರು ತಿಂಗಳ ಹಿಂದೆ ಝಿಯು ಹೋಮ್ಸ್‌ನವರು ಆರ್‌.ಟಿ.ನಗರದಲ್ಲಿ ಮನೆ ತೋರಿಸಿದ್ದರು. ₹ 20 ಲಕ್ಷ ನೀಡಿ ಭೋಗ್ಯಕ್ಕೆ ಬರೆಸಿಕೊಳ್ಳಲಾಗಿತ್ತು. ಎಲ್ಲ ಪ್ರಕ್ರಿಯೆ ಮುಗಿದು ಅಲ್ಲಿಗೆ ಹೋದರೆ, ಅದೇ ಮನೆಯನ್ನು ಹಿಂದೆಯೇ ಭೋಗ್ಯಕ್ಕೆ ಪಡೆದು ಬೇರೆಯವರು ವಾಸ ಇದ್ದರು. ಕೇಳಲು ಹೋದರೆ ಝಿಯು ಹೋಮ್ಸ್‌ ಕಚೇರಿಯೇ ಬಂದ್‌ ಆಗಿತ್ತು’ ಎಂದು ಮೊಹಮ್ಮದ್‌ ಫಕ್ರುದ್ದೀನ್‌ ವಿವರಿಸಿದರು.

‘ಕಲ್ಯಾಣನಗರ ಬಾಬುಸ ಪಾಳ್ಯದಲ್ಲಿ ಎಸ್‌.ಕೆ. ಹೋಮ್ಸ್‌ನಲ್ಲಿ 41 ಮನೆಗಳಿವೆ. ಒಂದು ಮನೆಯನ್ನು ನಾನು ಝಿಯು ಹೋಮ್ಸ್‌ ಪ್ರೈವೆಟ್‌ ಲಿಮಿಟೆಡ್‌ನಿಂದ ಲೀಸ್‌ಗೆ ಪಡೆದಿದ್ದೇನೆ. ಅದೇ ರೀತಿ ಉಳಿದವರೂ ಲೀಸ್‌ಗೆ ಪಡೆದಿದ್ದಾರೆ. ಆರಂಭದಲ್ಲಿ ನಮಗೆ ಏನೂ ಸಮಸ್ಯೆ ಇರಲಿಲ್ಲ. ಆನಂತರ ‘ನಾವು ಮಾಲೀಕರು‘ ಎಂದು ಕೆಲವರು ಬಂದಾಗ ನಾವು ಮೋಸ ಹೋಗಿರುವುದು ಗೊತ್ತಾಯಿತು. ಈಗ ಬಂದವರೇ ನಿಜವಾದ ಮಾಲೀಕರು ಎಂಬುದು ನಮಗೆ ಅರ್ಥವಾಗಿದೆ. ಆದರೆ, ನಾವು ಕೊಟ್ಟಿರುವ ಹಣ ವಾಪಸ್‌ ಬಾರದೇ ಮನೆ ಬಿಟ್ಟು ಕೊಡುವುದು ಹೇಗೆ’ ಎಂದು ಸಂತ್ರಸ್ತ ಮಲ್ಲಿಕಾರ್ಜುನ ಪ್ರಶ್ನಿಸಿದರು.

ಝಿಯು ಹೋಮ್ಸ್‌ನಿಂದ ಈ ರೀತಿ ಮೋಸ ಹೋದ ಮಾಲೀಕರು, ಲೀಸ್‌ಗೆ ಪಡೆದು ವಾಸ ಇರುವವರು, ಲೀಸ್‌ ಹಣ ನೀಡಿದರೂ ಮನೆ ಸಿಗದ ಕುಟುಂಬಗಳ ಸಂಖ್ಯೆ 450ಕ್ಕೂ ಅಧಿಕ ಎಂದು ಸಂತ್ರಸ್ತರು ತಿಳಿಸಿದರು.

‘ನಾವು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಸಿಸಿಬಿ ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇಲ್ಲ. ಕೂಡಲೇ ತನಿಖೆ ನಡೆಸಿ, ಮನೆ ಮಾಲೀಕರಿಗೆ ಮನೆ ವಾಪಸ್ ಕೊಡಿಸಬೇಕು. ಲೀಸ್‌ಗೆ ಹಣ ನೀಡಿದವರಿಗೆ ಹಣ ವಾಪಸ್‌ ಮಾಡಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT