ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಂಡಲ್ಲಿ ಅಮಾನತು

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜಧಾನಿಯ ಹಳೆಯ ಪ್ರದೇಶಗಳಲ್ಲಿ ಬೃಹತ್ ಮಾಲ್, ಮಲ್ಟಿಫ್ಲೆಕ್ ನಿರ್ಮಾಣಕ್ಕೆ ಅವಕಾಶ ನಿರಾಕರಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ. ಹಾಗೆಯೇ ಭವಿಷ್ಯದ ಬೆಂಗಳೂರಿಗೆ ಪೂರಕವಾದ ಯೋಜನೆ ರೂಪಿಸಲು ತಜ್ಞರ ಸಮಿತಿ ರಚಿಸುವ ಯೋಚನೆಯೂ ಇದೆ~.

-ಬಿಬಿಎಂಪಿಯ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ರಾಮಮೂರ್ತಿ ಅವರ ನುಡಿಗಳಿವು. ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಕುರಿತು `ಪ್ರಜಾವಾಣಿ~ ಸರಣಿ ಲೇಖನ ಪ್ರಕಟಿಸಿದ ಬಳಿಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ನೀಡಿದ ಸಂದರ್ಶನದ ಸಂಕ್ಷಿಪ್ತ ವಿವರ ಹೀಗಿದೆ.

ಪ್ರಶ್ನೆ: ನಗರ ಯೋಜನೆ ವಿಭಾಗದ ಸದ್ಯದ ಕಾರ್ಯನಿರ್ವಹಣೆ ಉತ್ತಮವಾಗಿದೆಯೇ?
ರಾ: ನಗರ ಇಂದು ವಿಸ್ತಾರವಾಗಿ ಬೆಳೆಯುತ್ತಿದೆ. ಆದರೆ ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಗರವನ್ನು ವಿನ್ಯಾಸಗೊಳಿಸುವ ಕೆಲಸ ಆಗುತ್ತಿಲ್ಲ. ಸದ್ಯ ನಗರ ಯೋಜನೆ ವಿಭಾಗದಲ್ಲಿ ನಕ್ಷೆ ಮಂಜೂರಾತಿ ನೀಡಲಾಗುತ್ತಿದೆಯೇ ಹೊರತು ನಗರವನ್ನು ಸುಂದರವಾಗಿ ವಿನ್ಯಾಸಗೊಳಿಸುವ ಯಾವುದೇ ಚಿಂತನೆ, ಕೆಲಸ ನಡೆಯುತ್ತಿಲ್ಲ. ಸುಂದರ ನಗರ ರೂಪಿಸುವತ್ತ ಯಾರೊಬ್ಬರು ಗಮನ ಹರಿಸುತ್ತಿಲ್ಲ.

ಪ್ರಶ್ನೆ: ನಗರ ಯೋಜನೆ ವಿಭಾಗದ ಸುಧಾರಣೆ ಹೇಗೆ?
ರಾ: ನಗರ ಯೋಜನೆ ವಿಭಾಗವನ್ನು ವಿಭಜಿಸುವ ಚಿಂತನೆ ಇದೆ. ನಕ್ಷೆ ಮಂಜೂರಾತಿ, ಆರಂಭಿಕ ಪ್ರಮಾಣಪತ್ರ, ಸ್ವಾಧೀನ ಪತ್ರ ವಿತರಣೆ ಜವಾಬ್ದಾರಿಯನ್ನು ಒಂದು ವಿಭಾಗಕ್ಕೆ ವಹಿಸುವುದು. ಭವಿಷ್ಯದ ಬೆಳವಣಿಗೆಗೆ ಅನುಗುಣವಾಗಿ ಅಂಡರ್‌ಪಾಸ್, ಉದ್ಯಾನ, ಆಟದ ಮೈದಾನ, ಪಾದಚಾರಿ ಮಾರ್ಗ ಇತರೆ ಸೌಲಭ್ಯ ಕಲ್ಪಿಸುವ ಕುರಿತು ಸಲಹೆ ನೀಡುವ ತಜ್ಞರ ಸಮಿತಿ ರಚಿಸುವ ಚಿಂತನೆ ಇದೆ.

ಪ್ರಶ್ನೆ: ಜನಸಂದಣಿ ಪ್ರದೇಶಗಳಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಸೂಕ್ತವೇ?
ರಾ: ನಗರದ ಹಳೆಯ ಪ್ರದೇಶಗಳಲ್ಲಿ ಮಾಲ್ ಇಲ್ಲವೇ ಮಲ್ಟಿಫ್ಲೆಕ್ಸ್‌ಗಳ ನಿರ್ಮಾಣಕ್ಕೆ ಅವಕಾಶ ನೀಡಿದರೆ ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಸಂಪಿಗೆ ರಸ್ತೆಯಲ್ಲಿ ಮಂತ್ರಿ ಸ್ಕ್ವೇರ್ ಮಾಲ್ ನಿರ್ಮಾಣದಿಂದ ಸ್ಥಳೀಯರು ಪರದಾಡುವುದು ಎಲ್ಲರಿಗೂ ತಿಳಿದ ಸಂಗತಿ. ಹಾಗಾಗಿ ಡೆವಲಪರ್ ಸಂಸ್ಥೆಗಳಿಗೆ ನಗರದ ಹಳೆಯ ಪ್ರದೇಶಗಳಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಟಿಡಿಆರ್ ಖರೀದಿಗೆ ಅವಕಾಶ ನೀಡದಂತೆ ಹಾಗೂ ಮಾಲ್, ಮಲ್ಟಿಫ್ಲೆಕ್ಸ್ ನಿರ್ಮಾಣಕ್ಕೂ ಅವಕಾಶ ನಿರಾಕರಿಸುವ ಕುರಿತು ಚಿಂತಿಸಲಾಗಿದೆ.

ಪ್ರಶ್ನೆ: ಅಕ್ರಮ ಕಟ್ಟಡಗಳ ಪತ್ತೆ ಹೇಗೆ?
ರಾ: ಬಿಬಿಎಂಪಿಯಲ್ಲಿ ಕಟ್ಟಡಗಳ ಮಾಹಿತಿ ಸಂಗ್ರಹಿಸಿಡುವ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಯಾವ ರಸ್ತೆಯಲ್ಲಿ ಎಷ್ಟು ಕಟ್ಟಡಗಳಿವೆ, ಇದರಲ್ಲಿ ಅಕ್ರಮ ಕಟ್ಟಡಗಳೆಷ್ಟು, ನಿಯಮ ಉಲ್ಲಂಘನೆಯಾದ ಕಟ್ಟಡಗಳೆಷ್ಟು ಎಂಬ ವಿವರ ಕೂಡ ಇಲ್ಲ. ಆ ಹಿನ್ನೆಲೆಯಲ್ಲಿ ಕಟ್ಟಡ ಮಾಹಿತಿ (ಬಿಲ್ಡಿಂಗ್ ಹಿಸ್ಟರಿ) ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಲು ಚಿಂತಿಸಲಾಗಿದೆ.

ಪ್ರಶ್ನೆ: ಎರವಲು ಸೇವೆ ಅಧಿಕಾರಿಗಳ ಬಗ್ಗೆ ಅಭಿಪ್ರಾಯವೇನು?
ರಾ: ನಗರ ಯೋಜನೆ ವಿಭಾಗ ಎರವಲು ಸೇವೆ ಅಧಿಕಾರಿಗಳಿಗೆ ಮಾವನ ಮನೆ ಇದ್ದಂತೆ. ಯಾವಾಗ ಬೇಕಾದರೂ ಬರಬಹುದು, ಏನಾದರೂ ಮಾಡಬಹುದು, ಯಾವಾಗ ಬೇಕಾದರೂ ವಾಪಸ್ ಹೋಗಬಹುದು ಎಂಬಂತಾಗಿದೆ. ಈ ಅಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಎರವಲು ಸೇವೆಯ ಕೆಲವು ಅದಕ್ಷ ಅಧಿಕಾರಿಗಳಿಂದ ಪಾಲಿಕೆ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ.

ಪ್ರಶ್ನೆ: ಎರವಲು ಸೇವೆ ಅಧಿಕಾರಿಗಳನ್ನು ಹೇಗೆ ನಿಯಂತ್ರಿಸುತ್ತೀರಿ?
ರಾ: ಕೆಪಿಟಿಸಿಎಲ್, ಕೊಳಚೆ ನಿರ್ಮೂಲನಾ ಮಂಡಳಿ, ರಾಜ್ಯ ಹಣಕಾಸು ನಿಗಮ ಇತರೆ ಇಲಾಖೆಗಳಿಂದ ನಗರ ಯೋಜನೆಗೆ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಇವರಿಂದ ಹೆಚ್ಚಿನ ಸೇವೆ ನಿರೀಕ್ಷಿಸುವಂತಿಲ್ಲ. ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ಇತರೆ ಇಲಾಖೆಗಳಿಂದ ನಿಯೋಜನೆಗೊಂಡವರನ್ನು ವಾಪಸ್ ಕಳುಹಿಸಲು ಸಮಿತಿ ಸಲಹೆ ನೀಡಿದೆ. ಆದರೂ ಕೆಲ ಅಧಿಕಾರಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಈ ಅಧಿಕಾರಿಗಳನ್ನು ಬೇರೆ ವಿಭಾಗಕ್ಕೆ ನಿಯೋಜಿಸಬೇಕಿದೆ.

ಪ್ರಶ್ನೆ: ಆನ್‌ಲೈನ್‌ನಲ್ಲಿ ನಕ್ಷೆ ಮಂಜೂರಾತಿ ನೀಡಿಕೆ ಪ್ರಕ್ರಿಯೆ ಹದಗೆಡಿಸುವ ಯತ್ನ ನಡೆದಿದೆಯೇ?
ರಾ: ಆನ್‌ಲೈನ್ ಮೂಲಕ ನಕ್ಷೆ ಮಂಜೂರಾತಿ ನೀಡುವ ವ್ಯವಸ್ಥೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಾಯವಾಗುತ್ತಿದೆ. ಆದರೆ, ಬಡ ಮತ್ತು ಮಧ್ಯಮ ಕೆಳ ವರ್ಗದ ಜನರ ಅನುಕೂಲಕ್ಕಾಗಿ 1,200 ಚದರ ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ವಾಸದ ಮನೆ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿಗೆ ಆನ್‌ಲೈನ್ ವ್ಯವಸ್ಥೆಯಿಂದ ರಿಯಾಯಿತಿ ನೀಡಲಾಗಿದೆ.

ಪ್ರಶ್ನೆ: ಅಕ್ರಮ ಕಟ್ಟಡ ನಿರ್ಮಾಣ ನಿಯಂತ್ರಣ ಹೇಗೆ?
ರಾ: ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗದಂತೆ ತಡೆಯುವುದು ಅಧಿಕಾರಿಗಳ ಜವಾಬ್ದಾರಿ. ಅವರು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗುವುದು. ಹಾಗೆಯೇ ಆಸ್ತಿದಾರರು ಸಹ ನಿಯಮ ಪ್ರಕಾರವೇ ಕಟ್ಟಡ ನಿರ್ಮಿಸಲು ಮುಂದಾದರೆ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ. ವಾಹನ ದಟ್ಟಣೆ ತೀವ್ರವಾಗಿದ್ದು, ನಿವೇಶನದಾರರು ತಮ್ಮ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಳ್ಳುವುದು ಒಳಿತು. ಜನರೂ ಸಹಕರಿಸಿದರೆ ಸುಂದರ ನಗರ ನಿರ್ಮಿಸಬಹುದು.

ಪ್ರಶ್ನೆ: ನಗರ ಯೋಜನೆ ವಿಭಾಗದಲ್ಲಿನ ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯ?
ರಾ: ನಗರ ಯೋಜನೆ ವಿಭಾಗದಲ್ಲಿನ ಭ್ರಷ್ಟಾಚಾರದ ಬಗ್ಗೆ `ಪ್ರಜಾವಾಣಿ~ ಪ್ರಕಟಿಸಿದ ಲೇಖನಗಳಲ್ಲಿ ಸತ್ಯಾಂಶವಿದೆ. ಈ ಬಗ್ಗೆ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಬಂದಿವೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ಪ್ರಶ್ನೆ: ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮವೇನು?
ರಾ: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಅದರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಅದು ಕರ್ತವ್ಯಲೋಪ. ಈ ಬಗ್ಗೆ ಜನತೆ ದೂರು ನೀಡಿದರೆ, ಅದನ್ನು ಪರಿಶೀಲಿಸಲಾಗುವುದು. ಆರೋಪದಲ್ಲಿ ಸತ್ಯಾಂಶ ಕಂಡು ಬಂದರೆ ಸಂಬಂಧಪಟ್ಟವರನ್ನು ಅಮಾನತುಪಡಿಸಲಾಗುವುದು.

(-ಮುಂದುವರಿಯುವುದು...)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT