ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಿರೇನಹಳ್ಳಿ ಅಂಡರ್‌ಪಾಸ್ ಶೀಘ್ರ ಬಳಕೆಗೆ

Last Updated 1 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಮಾರು ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಕದಿರೇನಹಳ್ಳಿ ಅಂಡರ್‌ಪಾಸ್ ಕಾಮಗಾರಿ ಕೊನೆಗೂ ಮುಗಿಯುವ ಹಂತ ತಲುಪಿದೆ. ಶೀಘ್ರವಾಗಿ ಕಾಮಗಾರಿ ನಡೆದರೆ ಜೂನ್ ತಿಂಗಳ ಅಂತ್ಯಕ್ಕೆ ಅಂಡರ್‌ಪಾಸ್ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜಯನಗರ, ಜೆ.ಪಿ.ನಗರ ಭಾಗಗಳಿಗೆ ದಟ್ಟಣೆ ಮುಕ್ತ ಸಂಚಾರ ಸಾಧ್ಯವಾಗುವ ದೃಷ್ಟಿಯಿಂದ ಕದಿರೇನಹಳ್ಳಿ ಹೊರ ವರ್ತುಲ ರಸ್ತೆಯ ಸಮೀಪದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ 2008 ರ ಮಾರ್ಚ್‌ನಲ್ಲಿ ಬಿಬಿಎಂಪಿ ವತಿಯಿಂದ ಚಾಲನೆ ದೊರೆತಿತ್ತು.

ನಾಲ್ಕು ವರ್ಷಗಳ ಹಿಂದೆ ಆರಂಭವಾದ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಇಲ್ಲಿಯವರೆಗೂ ಕುಂಟುತ್ತಲೇ ಸಾಗುತ್ತಿತ್ತು. ಇದೀಗ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಕಾಮಗಾರಿ ವಿಳಂಬ ಕಾರಣಕ್ಕೆ ಗುತ್ತಿಗೆ ಕಂಪೆನಿಗೆ 80 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ದಂಡದ ಹಣವೂ ಪಾವತಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

`ಹತ್ತು ತಿಂಗಳ ಕಾಲಾವಧಿಯೊಳಗೆ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ, 28.72 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಖಾಸಗಿ ಗುತ್ತಿಗೆ ಕಂಪೆನಿಗೆ ವಹಿಸಲಾಗಿತ್ತು. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿದೆ. ಈ ಕಾರಣಕ್ಕೆ ಗುತ್ತಿಗೆ ಕಂಪೆನಿಗೆ ದಂಡ ವಿಧಿಸಿದ್ದು, ದಂಡ ವಸೂಲಿಯೂ ನಡೆದಿದೆ. ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಮಾನವ ಶಕ್ತಿಯಿಂದ ನಡೆಯಬೇಕಾದ ಕೆಲಸಗಳು ವಿಳಂಬವಾದ ಕಾರಣದಿಂದ ಕಾಮಗಾರಿ ಸ್ವಲ್ಪ ಕಾಲ ವಿಳಂಬವಾಗಿತ್ತು. ಮಂದಗತಿಯಿಂದ ಕಾಮಗಾರಿ ನಡೆಸಿರುವುದು ವಿಳಂಬಕ್ಕೆ ಮುಖ್ಯ ಕಾರಣ. ಇದೇ 15 ರೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ ಸೂಚನೆ ನೀಡಲಾಗಿತ್ತು. ಆದರೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ~ ಎಂದು ಬಿಬಿಎಂಪಿಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ನಾಲ್ಕು ವರ್ಷಗಳ ಕಾಲ ಕಾಮಗಾರಿ ವಿಳಂಬವಾದ ಕಾರಣ ಗುತ್ತಿಗೆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಉದ್ದೇಶ ಪಾಲಿಕೆಯ ಮುಂದಿದ್ದು, ಅಂಡರ್‌ಪಾಸ್ ಕಾಮಗಾರಿ ಮುಗಿದ ನಂತರ ಈ ಬಗ್ಗೆ ಹಿರಿಯ ಅಧಿಕಾರಿಗಳು ಚಿಂತನೆ ನಡೆಸಲಿದ್ದಾರೆ. ಗುತ್ತಿಗೆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಉದ್ದೇಶ ಪಾಲಿಕೆಗಿದ್ದರೂ, ಪ್ರಭಾವಿ ರಾಜಕಾರಣಿಗಳ ಕಾರಣದಿಂದ ಅದು ಸಾಧ್ಯವಾಗುವುದು ಅನುಮಾನ~ ಎಂದು ಹೆಸರು ಹೇಳಲಿಚ್ಚಿಸದ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಗುತ್ತಿಗೆ ಕಂಪೆನಿ ಕಪ್ಪು ಪಟ್ಟಿಗೆ : `ಅಂಡರ್‌ಪಾಸ್ ಕಾಮಗಾರಿಯನ್ನು ವಿಳಂಬ ಮಾಡಿ, ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡಿದ ಗುತ್ತಿಗೆ ಕಂಪೆನಿಯ ವಿರುದ್ಧ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಲಿದೆ~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಹೇಳಿದ್ದಾರೆ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಕಾಮಗಾರಿಗೆ ಹಲವು ತೊಡಕುಗಳು ಎದುರಾಗಿದ್ದು ನಿಜ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯವೂ ಕಾಮಗಾರಿ ವಿಳಂಬವಾಗಲು ಮುಖ್ಯ ಕಾರಣ. ಕಾಮಗಾರಿಯನ್ನು ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಆಮೆಗತಿಯಲ್ಲಿ ಸಾಗುತ್ತಾ ಬಂದಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಇಂತಹ ಗುತ್ತಿಗೆದಾರರ ಅಗತ್ಯ ಪಾಲಿಕೆಗಿಲ್ಲ. ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ತಿಳಿಸಿದರು.

ಆತುರ ಬೇಡ: `ಅಂಡರ್‌ಪಾಸ್‌ನ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳದ ಹೊರತು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಆತುರದ ನಿರ್ಧಾರ ಬೇಡ. ಇದರಿಂದ ಮುಂದೆ ಜನರಿಗೆ ತೊಂದರೆಯಾಗುವುದು ಖಚಿತ~ ಎಂದು ಬನಶಂಕರಿ ವಾರ್ಡ್‌ನ ಬಿಬಿಎಂಪಿ ಸದಸ್ಯ ಎ.ಎಚ್.ಬಸವರಾಜು ತಿಳಿಸಿದರು.

`ಬಿಬಿಎಂಪಿಯ ಅಧಿಕಾರಿಗಳಿಗೂ ಗುತ್ತಿಗೆದಾರರಿಗೂ ಸಾಮರಸ್ಯವಿಲ್ಲದ ಕಾರಣ ಕಾಮಗಾರಿ ವಿಳಂಬವಾಗುತ್ತಲೇ ಬಂದಿದೆ. ಕಾಮಗಾರಿ ಸ್ಥಳದ ಸುಮಾರು 40 ಮನೆಗಳ ಭೂ ಸ್ವಾಧೀನ ಪ್ರಕ್ರಿಯೆಯನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಿಲ್ಲ. ಕಾಮಗಾರಿ ಸ್ಥಳದಲ್ಲಿ ಬೃಹತ್ ಬಂಡೆಯಿದ್ದ ಕಾರಣ ಅದರ ತೆರವಿಗೂ ಸಮಯ ಹಿಡಿದಿದೆ. ಕಾಮಗಾರಿ ಸಂಪೂರ್ಣವಾಗಿ ಮುಗಿಯಲು ಇನ್ನೂ ಕನಿಷ್ಠ ಸುಮಾರು ಎರಡು ತಿಂಗಳಾದರೂ ಬೇಕು. ಸರ್ವೀಸ್ ರಸ್ತೆ ಹಾಗೂ ನೀರಿನ ಪೈಪ್ ಲೈನ್‌ಗಳ ಸಂಪರ್ಕ ಕಾರ್ಯ ಪೂರ್ಣವಾಗಬೇಕಿದೆ. ಹೀಗಾಗಿ ಆತುರಾತುರವಾಗಿ ಉದ್ಘಾಟನೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ~ ಅವರು ಹೇಳಿದರು.

ನಿತ್ಯವೂ ಸಂಕಷ್ಟ: `ಕದಿರೇನಹಳ್ಳಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಆರಂಭವಾದ ದಿನದಿಂದಲೂ ಇಲ್ಲಿನ ಜನರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ. ನೀರಿನ ಪೈಪ್‌ಗಳು, ಒಳಚರಂಡಿ ಪೈಪ್‌ಗಳ ಸಂಪರ್ಕ ಶೀಘ್ರವಾಗಿ ಮುಗಿಯದೇ ಜನರು ತೀವ್ರ ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಕಾಮಗಾರಿ ಆರಂಭವಾದಾಗಿನಿಂದಲೂ ಜನರು ಪಾಲಿಕೆಗೆ ಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದೂ ಕಾಮಗಾರಿ ವಿಳಂಬಕ್ಕೆ ಕಾರಣ. ಪಾಲಿಕೆಯ ಭ್ರಷ್ಟ ಅಧಿಕಾರಿಗಳು ಪಾಲಿಕೆಯಿಂದ ಹೊರ ಹೋಗುವವರೆಗೂ ಪಾಲಿಕೆಯಲ್ಲಿ ಇಂತಹ ವಿಳಂಬ ಇದ್ದಿದ್ದೇ~ ಎಂದು ಅವರು ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT