ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನೋಪಯೋಗಿ ಸಂಶೋಧನೆಗೆ ಸಲಹೆ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಸಂಶೋಧನೆಗಳ ಫಲ  ಜನಸಾಮಾನ್ಯರ ಕೈಗೆಟುಕುವಂತಿರಬೇಕು  ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.

ಭಾರತೀಯ ಔಷಧೀಯ ಸಮಾಜ ಮತ್ತು ಕರ್ನಾಟಕ ಔಷಧ ಕಾಲೇಜಿನ ಸಹಯೋಗದಲ್ಲಿ ನಿಮ್ಹಾನ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಭಾರತೀಯ ಔಷಧೀಯ ಸಮಾಜದ 46ನೇ ವಾರ್ಷಿಕ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದ ಆರ್ಥಿಕತೆಗೆ ಅನುಗುಣವಾಗಿ ಸಂಶೋಧನೆಗಳು ನಡೆದರೆ ನಾವು ಜನಸಾಮಾನ್ಯರಿಗೆ ಉಚಿತವಾಗಿ
ಔಷಧ ಮತ್ತು ಚಿಕಿತ್ಸೆಗಳನ್ನು ಒದಗಿಸಬಹುದು. ಚಿಕಿತ್ಸೆಯ ಅವಧಿ ಮತ್ತು ವೆಚ್ಚವನ್ನು ತಗ್ಗಿಸುವ ಸಂಶೋಧನೆಗಳಿಗೆ ಸರ್ಕಾರದ ಬೆಂವಲವಿದ್ದೇ ಇರುತ್ತದೆ’ ಎಂದರು.

ಶಾಸಕ  ಎ.ಬಿ.ಮಾಲಕರೆಡ್ಡಿ ಅವರು ಮಾತನಾಡಿ, ‘ನಮ್ಮ ಪೂರ್ವಜರು ಸಸ್ಯಜನ್ಯ ಔಷಧಗಳನ್ನು ಹೇಗೆ ಬಳಸುತ್ತಿದ್ದರು ಎಂಬುದರ ಕಡೆಗೆ ಸಂಶೋಧನೆಗಳು ಬೆಳಕು ಚೆಲ್ಲಬೇಕಿದೆ.   ಕಾಯಿಲೆಗಳು ಬರದಂತೆ ತಡೆಯಲು ನಮಗೆ ಸಾಧ್ಯವಾಗದ್ದಿದ್ದರೆ ಅದನ್ನು ಗುಣಪಡಿಸಲು ಕೂಡ ಸಾಧ್ಯವಾಗುವುದಿಲ್ಲ. ವಾಸ್ತವಕ್ಕೆ ಹತ್ತಿರವಿರುವ ಸಂಶೋಧನೆಗಳು ಮಾತ್ರ ಉಪಯೋಗಕ್ಕೆ ಬರುತ್ತವೆ’ ಎಂದು ಅಭಿಪ್ರಾಯಪಟ್ಟರು. 

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಔಷಧೀಯ ವಿಜ್ಞಾನ ವಿಭಾಗದ ಮುಖ್ಯಸ್ಥರಾದ  ಡಾ.ವೈ.ಕೆ.ಗುಪ್ತ ಅವರು ಮಾತನಾಡಿ, ‘ಭಾರತದಲ್ಲಿ ಸಂಶೋಧನೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಆದರೆ ಅವುಗಳಲ್ಲಿ ಪ್ರಯೋಗಕ್ಕೆ ಬರುವುದು ಕೆಲವು
ಮಾತ್ರ. ಅವೂ ಸಹ ಜನರ ಬಳಕೆಗೆ ಲಭ್ಯವಿಲ್ಲ.

ಉತ್ಪನ್ನಗಳ ಅಭಿವೃದ್ಧಿಯ ನೆಲೆಯಲ್ಲಿ ಸಂಶೋಧನೆಗಳು ನಡೆಯದಿದ್ದರೆ ಅವುಗಳಿಂದಾಗುವ ಪ್ರಯೋಜನವಾದರೂ ಏನು’ ಎಂದು  ವಿದ್ಯಾರ್ಥಿಗಳನ್ನು  ಪ್ರಶ್ನಿಸಿದರು.

ಭಾರತೀಯ ಔಷಧೀಯ ಸಮಾಜದ ಅಧ್ಯಕ್ಷ ಡಾ. ಪ್ರಕಾಶ್ ದಿವಾನ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT