ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಾಮಗಾರಿಗೆ ಫಿಲ್ಟರ್ ಮರಳು!

Last Updated 29 ಡಿಸೆಂಬರ್ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಾಗಾಲೋಟದಿಂದ ಬೆಳೆಯುತ್ತಿರುವ ಉದ್ಯಾನ ನಗರಿಗೆ ಗುಣಮಟ್ಟದ ಮೂಲಸೌಕರ್ಯ ಕಲ್ಪಿಸುವ ಮಹತ್ವದ ಹೊಣೆಗಾರಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹೆಗಲ ಮೇಲಿದೆ. ಆದರೆ, ಬಿಬಿಎಂಪಿ ಕಾಮಗಾರಿಗಳಲ್ಲೇ ಫಿಲ್ಟರ್ ಮರಳು ಬಳಕೆಯಾಗುತ್ತಿರುವುದು ಪರೀಕ್ಷೆಯಿಂದ ಪತ್ತೆಯಾಗಿದ್ದು, `ಮರಳು ಜಾಲ~ ಪಾಲಿಕೆಯ ಯೋಜನೆಗಳ ಬುಡವನ್ನೇ ಅಲ್ಲಾಡಿಸುತ್ತಿರುವುದು ಬೆಳಕಿಗೆ ಬಂದಿದೆ.

ಪಾಲಿಕೆಯ ಗುಣನಿಯಂತ್ರಣ ಘಟಕವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 355 ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ನಡೆಸಿದೆ. ಇದರ ಪೈಕಿ 287 ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿರುವುದು ದೃಢಪಟ್ಟಿದೆ. ಅಲ್ಲದೇ 24 ಕಾಮಗಾರಿಗಳಲ್ಲಿ ಫಿಲ್ಟರ್ ಮರಳು ಬಳಕೆಯಾಗಿರುವ ಅಪಾಯಕಾರಿ ಅಂಶ ಬಯಲಾಗಿದೆ. ಮೇಯರ್ ಪಿ. ಶಾರದಮ್ಮ ಅವರು ಪ್ರತಿನಿಧಿಸುವ ಶೆಟ್ಟಿಹಳ್ಳಿ ವಾರ್ಡ್‌ನ ಕಾಮಗಾರಿಯೊಂದರಲ್ಲೂ ಫಿಲ್ಟರ್ ಮರಳು    ಬಳಕೆಯಾಗಿದೆ.

2011ರ ಏಪ್ರಿಲ್ 1ರಿಂದ ಡಿಸೆಂಬರ್ 24ರವರೆಗಿನ ಅವಧಿಯಲ್ಲಿ ನಗರದ ವಿವಿಧೆಡೆ ಆರಂಭವಾಗಿರುವ ಕಾಮಗಾರಿಗಳಲ್ಲಿ ಬಳಕೆಯಾಗುತ್ತಿರುವ ಸಾಮಗ್ರಿಗಳ ಗುಣಮಟ್ಟವನ್ನು ಗುಣ ನಿಯಂತ್ರಣ ಘಟಕವು ಪರಿಶೀಲನೆ ನಡೆಸಿದೆ. ಇದರಲ್ಲಿ ಸಾಕಷ್ಟು ಲೋಪಗಳು ಉಂಟಾಗಿರುವುದನ್ನು ಘಟಕ ಪತ್ತೆ ಹಚ್ಚಿದೆ.

ಚರಂಡಿ ನಿರ್ಮಾಣದಲ್ಲಿ ಉದ್ದ, ಅಗಲ, ಎತ್ತರ ಇತರೆ ವಿಸ್ತೀರ್ಣವನ್ನು ಸಮರ್ಪಕವಾಗಿ ಕಾಯ್ದುಕೊಳ್ಳದಿರುವುದು, ಚರಂಡಿ ನಿರ್ಮಾಣಕ್ಕೆ ಬಳಸುವ ಸೈಜು ಕಲ್ಲುಗಳ ಗಾತ್ರದಲ್ಲಿ ಏರಿಳಿತವಿರುವುದು, ಚರಂಡಿ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತೆ ಇಳಿಜಾರು ವ್ಯವಸ್ಥೆ ಕಲ್ಪಿಸದಿರುವುದು (ಗ್ರೇಡಿಯಂಟ್), ಹೂಳನ್ನೇ ತೆರವುಗೊಳಿಸದೆ ಚರಂಡಿ ನಿರ್ಮಿಸಿರುವುದು ಕಂಡು ಬಂದಿದೆ.

ಚರಂಡಿ ನಿರ್ಮಾಣದಲ್ಲಿ ಹಳೆಯ ಹಾಗೂ ಹೊಸ ಕಲ್ಲುಗಳನ್ನು ಬಳಸುತ್ತಿರುವುದು, ಗುಣಮಟ್ಟದ ಬಾಂಡ್ ಕಲ್ಲುಗಳನ್ನು ಬಳಕೆ ಮಾಡದಿರುವುದು, ಕಳಪೆ ಮಟ್ಟದ ಸಿಮೆಂಟ್ ಗಾರೆ ಕೆಲಸ ನಡೆದಿರುವುದು, ಕಾಂಕ್ರಿಟ್ ಕಾಮಗಾರಿಗೆ ಸಮರ್ಪಕವಾಗಿ ಜಲಸಂಸ್ಕರಣೆ (ಕ್ಯೂರಿಂಗ್) ಮಾಡದಿರುವುದು. ಡಾಂಬರೀಕರಣಕ್ಕೂ ಮುನ್ನ ರಸ್ತೆಯ ಮೇಲ್ಮೈಯನ್ನು ಸ್ವಚ್ಛಗೊಳಿಸದೇ ಹಾಗೆಯೇ ಡಾಂಬರು ಹಾಕಿರುವುದು, ಡಾಂಬರಿನ ಮಿಶ್ರಣದಲ್ಲೂ ಲೋಪಗಳಿರುವುದು ಬಯಲಾಗಿದೆ.

ಮೇಯರ್ ವಾರ್ಡ್‌ನಲ್ಲಿ ಅಕ್ರಮ:     ಶೆಟ್ಟಿಹಳ್ಳಿ ವಾರ್ಡ್ ವ್ಯಾಪ್ತಿಯ ಚಿಕ್ಕಸಂದ್ರ, ಜನತಾ ಕಾಲೊನಿ, ವಿಘ್ನೇಶ್ವರ ಲೇಔಟ್‌ನಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಫಿಲ್ಟರ್ ಮರಳು ಬಳಸಿರುವುದು ಕಂಡುಬಂದಿದೆ. ವಿವಿಧ ವಾರ್ಡ್‌ಗಳಲ್ಲಿ ವಾರ್ಡ್ ಕಚೇರಿ ಹಾಗೂ ಶಾಸಕರ ಕಚೇರಿ ಕಟ್ಟಡ ನಿರ್ಮಾಣ, ಕಾಂಕ್ರಿಟ್ ರಸ್ತೆ ನಿರ್ಮಾಣ, ಒಳಚರಂಡಿ ಮತ್ತು ಪಾದಚಾರಿ ಮಾರ್ಗ ನಿರ್ಮಾಣ ಸೇರಿದಂತೆ ಒಟ್ಟು 24 ಕಾಮಗಾರಿಗಳಲ್ಲಿ ಫಿಲ್ಟರ್ ಮರಳು ಬಳಕೆಯಾಗಿರುವುದು ದೃಢಪಟ್ಟಿದೆ.

ಭಾರತಿನಗರ, ಮಡಿವಾಳ, ಸರ್ವಜ್ಞನಗರ, ನಾಯಂಡನಹಳ್ಳಿ, ಕೆಂಗೇರಿ, ಶೆಟ್ಟಿಹಳ್ಳಿ, ನೀಲಸಂದ್ರ, ಜಯನಗರ ಪೂರ್ವ, ಶಾಕಂಬರಿನಗರ, ನಾಗಪುರ, ರಾಜಮಹಲ್ ಗುಟ್ಟಹಳ್ಳಿ, ಅರಮನೆನಗರ, ಹನುಮಂತನಗರ, ಜಯನಗರ, ಮಾರೇನಹಳ್ಳಿ, ದೇವರಜೀವನಹಳ್ಳಿ, ಸುಂಕೇನಹಳ್ಳಿ, ದೊಮ್ಮಲೂರು, ಕೋನೇನ ಅಗ್ರಹಾರ, ಅಗರಂ ವಾರ್ಡ್‌ಗಳ ಕಾಮಗಾರಿಗಳಲ್ಲಿ ಫಿಲ್ಟರ್ ಮರಳು ಬಳಸಿರುವುದು ದೃಢಪಟ್ಟಿದೆ.

ನಗರದಲ್ಲಿ ಆರಂಭವಾದ ಕಾಮಗಾರಿಯ ಗುಣಮಟ್ಟವನ್ನು ಗುಣ ನಿಯಂತ್ರಣ ಘಟಕ ತಪಾಸಣೆ ನಡೆಸಬಹುದು. ಅದರಂತೆ ಘಟಕವು ಈವರೆಗೆ 355 ಕಾಮಗಾರಿಗಳ ಗುಣಮಟ್ಟ ತಪಾಸಣೆ ನಡೆಸಿದೆ. ಇದರಲ್ಲಿ 287 ಕಾಮಗಾರಿಗಳು ಕಳಪೆಯಾಗಿರುವುದು ದೃಢಪಟ್ಟಿದೆ. ದಕ್ಷಿಣ ವಲಯದಲ್ಲಿ ಪರೀಕ್ಷೆ ನಡೆಸಿದ 105 ಕಾಮಗಾರಿಗಳ ಪೈಕಿ 84 ಕಾಮಗಾರಿಗಳು ಕಳಪೆಯಾಗಿರುವುದು ಗೊತ್ತಾಗಿದೆ.

ನಿಯಮ ಪಾಲನೆ ಇಲ್ಲ: ನಗರದ ಯಾವುದೇ ಭಾಗದಲ್ಲಿ ಕಾಮಗಾರಿ ಆರಂಭವಾದಾಗ ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಕಾರ್ಯನಿರ್ವಾಹಕ ಎಂಜಿನಿಯರ್/ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಗುಣನಿಯಂತ್ರಣ ಘಟಕಕ್ಕೆ ಮಾಹಿತಿ ನೀಡಬೇಕು. ಆದರೆ ಬಹುಪಾಲು ಅಧಿಕಾರಿಗಳು ಘಟಕಕ್ಕೆ ಮಾಹಿತಿ ನೀಡದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪರಿಣಾಮ ಕಳಪೆ ಕಾಮಗಾರಿಗಳಿಗೂ ಹಣ ಬಿಡುಗಡೆಯಾಗುವ ಅಪಾಯ ಎದುರಾಗಿದೆ.

ಗುಣಮಟ್ಟದ ಕೊರತೆ: `ಪಾಲಿಕೆ ವ್ಯಾಪ್ತಿಯಲ್ಲಿ ಈಚಿನ ವರ್ಷಗಳಲ್ಲಿ ಕೈಗೊಳ್ಳುತ್ತಿರುವ ಬಹುಪಾಲು ಕಾಮಗಾರಿಗಳಲ್ಲಿ ಗುಣಮಟ್ಟವೇ ಕಾಣದಾಗಿದೆ. ಕಳಪೆ ಸಾಮಗ್ರಿಗಳನ್ನು ಬಳಸಿ ಕಾಮಗಾರಿ ನಡೆಸುವುದು ನಡೆಯುತ್ತಲೇ ಇದೆ. ಜನಪ್ರತಿನಿಧಿಗಳು ಆಯ್ಕೆಯಾಗಿ ಬಂದ ನಂತರವೂ ಈ ಅಕ್ರಮಗಳು ಮುಂದುವರಿದಿದೆ~ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ ಗೆ ತಿಳಿಸಿದರು.

`ಕಳಪೆ ಸಾಮಗ್ರಿ ಜತೆಗೆ ಫಿಲ್ಟರ್ ಮರಳು ಬಳಸುವುದು ಕೂಡ ಹೆಚ್ಚಾಗಿದೆ. ಇದರಿಂದ ಹತ್ತಾರು ವರ್ಷ ಬಾಳಿಕೆ ಬರಬೇಕಾದ ಕಾಮಗಾರಿ ಕೆಲವೇ ವರ್ಷಗಳಲ್ಲಿ ಹಾಳಾಗುತ್ತವೆ. ಪರಿಣಾಮವಾಗಿ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಭವಿಷ್ಯದಲ್ಲಿ ಮತ್ತೆ ಇದೇ ಕಾಮಗಾರಿಗಳಿಗೆ ಹಣ  ವಿನಿಯೋಗಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ~ ಎಂದರು.

`ಗುಣನಿಯಂತ್ರಣ ಘಟಕವು ಪತ್ತೆ ಹಚ್ಚಿರುವ ಕಳಪೆ ಕಾಮಗಾರಿಗಳನ್ನು ಸರಿಪಡಿಸುವುದು ಕಾರ್ಯನಿರ್ವಾಹಕ ಎಂಜಿನಿಯರ್ ವಿಭಾಗದ ಜವಾಬ್ದಾರಿ. ಆದರೆ, ಬಹುಪಾಲು ಸಂದರ್ಭಗಳಲ್ಲಿ ಅಧಿಕಾರಿಗಳು ನ್ಯೂನತೆಯನ್ನು ಸರಿಪಡಿಸುವುದಿಲ್ಲ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳದೆ, ಹಣ ಪಾವತಿಗೆ ಅನುಮೋದನೆ ನೀಡಿದರೆ ಸಂಬಂಧಪಟ್ಟವರನ್ನೇ ಹೊಣೆ ಮಾಡಬೇಕು ಎಂಬ ಆದೇಶ ಕೂಡ ಸರಿಯಾಗಿ ಪಾಲನೆಯಾಗುತ್ತಿಲ್ಲ~ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT