ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕೊಡಿಸಿದ್ದು ನಾನೇ: ಲಾರಾ ಎವಿಸನ್‌

ಆಟೋ ಚಾಲಕ ಸುಬ್ರಮಣಿಗೆ ಸಾಲ ಕೊಟ್ಟ ಅಮೆರಿಕದ ಮಹಿಳೆ
Last Updated 4 ಮೇ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಆಟೋ ರಿಕ್ಷಾ ಚಾಲಕ ಸುಬ್ರಮಣಿಗೆ ವೈಟ್‌ಫೀಲ್ಡ್‌ನಲ್ಲಿರುವ ಜತ್ತಿ ಎಂಜಿನಿಯರಿಂಗ್‌ ಇಂಡಿಯಾ ಪ್ರೈವೇಟ್‌ ಲಿ’. ಅವರಿಂದ ದ್ವಾರಕಾಮಯಿಯಲ್ಲಿ ವಿಲ್ಲಾ ಕೊಡಿಸಿದ್ದು ನಾನೇ’ ಎಂದು ಅಮೆರಿಕ ಮೂಲದ ಮಹಿಳೆ ಲಾರಾ ಎವಿಸನ್‌ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

₹ 1.6 ಕೋಟಿ ಮೌಲ್ಯದ ವಿಲ್ಲಾ ಖರೀದಿಯ ಮೂಲ ಬಹಿರಂಗಪಡಿಸುವಂತೆ ಆದಾಯ ತೆರಿಗೆ ಇಲಾಖೆ ಸುಬ್ರಮಣಿಗೆ ನೋಟಿಸ್‌ ಜಾರಿ ಮಾಡಿತ್ತು. ಹಣ ಪಾವತಿಗೆ ಸಂಬಂಧಿಸಿದ ದಾಖಲೆ ಒದಗಿಸುವಂತೆ ಮಾಲೀಕರಿಗೂ ಸೂಚಿಸಿತ್ತು. ಅದರಂತೆ ಆಟೋ ಚಾಲಕ ಆದಾಯ ತೆರಿಗೆ ಇಲಾಖೆಗೆ ವಿವರಣೆ ನೀಡಿದ್ದಾರೆ.

ಲಾರಾ ಅವರೂ ಐ.ಟಿ ಅಧಿಕಾರಿಗಳ ಮುಂದೆ ಸುಬ್ರಮಣಿ ಪರವಾಗಿ ಹೇಳಿಕೆ ನೀಡಿದ್ದಾರೆ. ವೈಟ್‌ಫೀಲ್ಡ್‌ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸುಬ್ರಮಣಿ ಪರಚಯವಾಯಿತು. ಆನಂತರಪ್ರತಿನಿತ್ಯ ಲಾರಾ ಅವರನ್ನು ಆಟೋದಲ್ಲಿ ಕಚೇರಿಗೆ ಕರೆದೊಯ್ದು, ಸಂಜೆ ವಾಪಸ್‌ ಕರೆತಂದು ಮನೆಗೆ ಬಿಡುವ ಕೆಲಸ ಮಾಡುತ್ತಿದ್ದರು. ಅನೇಕ ವರ್ಷ ಈ ಕೆಲಸ ಮಾಡಿದ್ದರಿಂದ ಪರಿಚಯ ಗಾಢವಾಗಿ ಸುಬ್ರಮಣಿ ಕುಟುಂಬದ ಜೊತೆ ಬಾಂಧವ್ಯವೂ ಬೆಳೆಯಿತು.

ಈ ಕಾರಣಕ್ಕೆ ಲಾರಾ ಆಗಿಂದಾಗ್ಗೆ ಇಂಡಿಯಾಕ್ಕೆ ಬರುತ್ತಾರೆ. ಕೆಲವು ಸಮಯ ಅವರ ಮನೆಯಲ್ಲೇ ಉಳಿದು, ಎಲ್ಲರ ಜತೆ ಕಾಲ ಕಳೆದು ವಾಪಸ್‌ ಹೋಗುತ್ತಾರೆ. ಇದೇ ಬಾಂಧವ್ಯದಿಂದಾಗಿ ಸುಬ್ರಮಣಿ ಅವರಿಗೆ ವಿಲ್ಲಾ ಖರೀದಿಸಲು ಲಾರಾ ₹ 1.6 ಕೋಟಿ ಸಾಲ ನೀಡಿದ್ದಾರೆ. ತಮ್ಮ ಬ್ಯಾಂಕ್‌ ಖಾತೆಯಿಂದ ಸುಬ್ರಮಣಿ ಖಾತೆಗೆ ಹಣ ವರ್ಗಾವಣೆ ಆಗಿರುವ ದಾಖಲೆಗಳನ್ನು ಐ.ಟಿ ಅಧಿಕಾರಿಗಳಿಗೆ ಅವರು ನೀಡಿದ್ದಾರೆ.

72 ವರ್ಷದ ಲಾರಾ ಅವಿವಾಹಿತರಾಗಿದ್ದು, ಸುಬ್ರಮಣಿ ಅವರು ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಸುಬ್ರಮಣಿ ಅವರನ್ನೂ ಅಮೆರಿಕಕ್ಕೆ ಕರೆದುಕೊಂಡು ಹೋಗಿ ತಿರುಗಾಡಿಸಿದ್ದಾರೆ. ಈ ವಿಷಯವನ್ನು ಸ್ವತಃ ಲಾರಾ ‘ಪ್ರಜಾವಾಣಿ’ ಜತೆ ಹಂಚಿಕೊಂಡರು. ‘ನಾನೂ ಸುಬ್ರಮಣಿ ಕುಟುಂಬದ ಸದಸ್ಯೆಯೇ ಆಗಿಬಿಟ್ಟಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

ಬಿಲ್ಡರ್‌ ಕಿರುಕುಳ: ‘ನನ್ನ ಬಗ್ಗೆ ಮಾಧ್ಯಮಗಳಲ್ಲಿ ಇಲ್ಲಸಲ್ಲದ ವರದಿಗಳು ಪ್ರಕಟವಾಗುತ್ತಿವೆ. ಅದರಲ್ಲಿ ಹುರುಳಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ. ವಿಲ್ಲಾ ಖರೀದಿಸಿರುವುದು ನಿಜ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಐ.ಟಿ ಅಧಿಕಾರಿಗಳಿಗೆ ನೀಡಿದ್ದೇನೆ. ಅವರು ಕರೆದಾಗ ಹೋಗಿ ಅಗತ್ಯ ಮಾಹಿತಿ ನೀಡುತ್ತೇನೆ’ ಎಂದೂ ಸುಬ್ರಮಣಿ ತಿಳಿಸಿದರು.

‘ವಿಲ್ಲಾದ ಬಿಲ್ಡರ್‌ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ವೈಯಕ್ತಿಕ ದ್ವೇಷದಿಂದ ದೂರು ದಾಖಲಿಸುತ್ತಿದ್ದಾರೆ. ವಿಲ್ಲಾ ಮಾಲೀಕರ ಸಂಘ ಸ್ಥಾಪಸಿದ್ದರಿಂದ ತೊಂದರೆ ಕೊಡುತ್ತಿದ್ದಾರೆ. ನಾನೇ ಸಂಘದ ಕಾರ್ಯದರ್ಶಿ. ನನಗೆ ನೀಡುತ್ತಿರುವ ಕಿರುಕುಳದಿಂದ ಬೇಸತ್ತು ವಿಲ್ಲಾ ಖರೀದಿಗಿದೆ ಎಂದು ಮನೆ ಮುಂದೆ ಫಲಕ ಹಾಕಿದ್ದೇನೆ’ ಎಂದರು. ಈ ಕುರಿತ ಪ್ರತಿಕ್ರಿಯೆಗೆ ಬಿಲ್ಡರ್‌ ಡಿ.ಬಿ. ಜತ್ತಿ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT