ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಪತಿಯ ಚುಚ್ಚಿ ಕೊಂದ ಪತ್ನಿ

ಆಡುಗೋಡಿ ಪೊಲೀಸರಿಂದ ಮಹಿಳೆ, ಆಕೆಯ ಸ್ನೇಹಿತ ಬಂಧನ
Last Updated 3 ಮೇ 2019, 20:31 IST
ಅಕ್ಷರ ಗಾತ್ರ

ಬೆಂಗಳೂರು: ಆಡುಗೋಡಿಯ ಎಲ್.ಆರ್.ನಗರದಲ್ಲಿ ನಡೆದಿದ್ದ ರೌಡಿ ಎಡ್ವಿನ್ (34) ಕೊಲೆ ಪ್ರಕರಣ ಸಂಬಂಧ, ಆತನ ಪತ್ನಿ ಸುಜಾತಾ ಹಾಗೂ ಆಕೆಯ ಸ್ನೇಹಿತಶ್ರೀಧರ್‌ ಅಲಿಯಾಸ್‌ ಅಪ್ಪುನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಆಡುಗೋಡಿ ಠಾಣೆಯ ರೌಡಿಶೀಟರ್ ಆಗಿದ್ದ ಎಡ್ವಿನ್, ನಿತ್ಯವೂ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಅದರಿಂದ ಬೇಸತ್ತ ಸುಜಾತಾ, ಶ್ರೀಧರ್ ಜೊತೆ ಸೇರಿ ಗುರುವಾರ ರಾತ್ರಿ ಎಡ್ವಿನ್‌ನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಳು’ ಎಂದು ಪೊಲೀಸರು ಹೇಳಿದರು.

ಚೆನ್ನೈಗೆ ಬರುವಂತೆ ಒತ್ತಾಯಿಸಿದ್ದ: ‘ಸುಲಿಗೆ, ಕೊಲೆ, ಜೀವ ಬೆದರಿಕೆ ಆರೋಪದಡಿ ಎಡ್ವಿನ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಬಂಧನದ ಭೀತಿಯಲ್ಲಿ ಆತ, ತಲೆಮರೆಸಿಕೊಂಡು ಓಡಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ನಗರ ತೊರೆದು ಚೆನ್ನೈಗೆ ಹೋಗಿದ್ದ ಎಡ್ವಿನ್, ಅಲ್ಲಿಯೇ ಕೆಲಸ ಮಾಡುತ್ತಿದ್ದ. ಪತ್ನಿಯನ್ನು ತವರು ಮನೆಯಲ್ಲೇ ಬಿಟ್ಟು ಹೋಗಿದ್ದ. ಗುರುವಾರ ರಾತ್ರಿ ಏಕಾಏಕಿ ನಗರದ ಮನೆಗೆ ಬಂದಿದ್ದ ಆತ,‘ನನ್ನ ಜೊತೆ ನೀನು ಚೆನ್ನೈಗೆ ಬಾ’ ಎಂದು ಪತ್ನಿಯನ್ನು ಒತ್ತಾಯಿಸಿದ್ದ.’

‘ಆತನ ವರ್ತನೆಯಿಂದ ಬೇಸತ್ತಿದ್ದ ಪತ್ನಿ, ಚೆನ್ನೈಗೆ ಹೋಗಲು ನಿರಾಕರಿಸಿದ್ದಳು. ಅದೇ ವಿಚಾರವಾಗಿ ದಂಪತಿ ನಡುವೆ ಜಗಳ ಶುರುವಾಗಿತ್ತು. ಗಲಾಟೆ ಕಂಡು ಶ್ರೀಧರ್‌ ಮನೆಗೆ ಬಂದಿದ್ದ. ಇಬ್ಬರೂ ಸೇರಿ ಎಡ್ವಿನ್‌ಗೆ ಚಾಕುವಿನಿಂದ ಚುಚ್ಚಿದ್ದರು. ತೀವ್ರ ರಕ್ತಸ್ರಾವದಿಂದ ರೌಡಿ ಸ್ಥಳದಲ್ಲೇ ಮೃತಪಟ್ಟ. ಈ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಹೊಸ ಚಾಕು ಖರೀದಿಸಿದ್ದ: ‘ದಿನಗೂಲಿ ಕೆಲಸ ಮಾಡುವ ಶ್ರೀಧರ್, ಆರು ತಿಂಗಳ ಹಿಂದಷ್ಟೇಎಲ್.ಆರ್.ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ. ಪಕ್ಕದ ಮನೆಯಲ್ಲೇ ಇದ್ದ ಸುಜಾತಾ ಅಲಿಯಾಸ್ ಬುಡ್ಡೊ ಪರಿಚಯವಾಗಿತ್ತು. ನಂತರ, ಇಬ್ಬರ ನಡುವೆ ಸಲುಗೆ ಬೆಳೆದಿತ್ತು’ ಎಂದು ಹೇಳಿದರು.

‘ಎಡ್ವಿನ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಸುಜಾತಾ, ಶ್ರೀಧರ್‌ಗೆ ನಿತ್ಯವೂ ಹೇಳುತ್ತಿದ್ದಳು. ಕೊಲೆ ಮಾಡಲು ಸಮಯಕ್ಕಾಗಿ ಕಾಯುತ್ತಿದ್ದ ಶ್ರೀಧರ್, ಹೊಸ ಚಾಕು ಖರೀದಿಸಿಟ್ಟುಕೊಂಡಿದ್ದ. ಅದೇ ಚಾಕುವಿನಿಂದಲೇ ಈಗ ರೌಡಿಯನ್ನು ಕೊಲೆ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT