ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧಾರ್ಮಿಕ ಅಜೆಂಡವಿರುವ ಪಕ್ಷಗಳನ್ನು ನಿಷೇಧಿಸಬೇಕು’

ಸ್ವಾತಂತ್ರ್ಯ ಹೋರಾಟಗಾರರಾದ ಎಚ್‌.ಎಸ್‌.ದೊರೆಸ್ವಾಮಿ ಅಭಿಪ್ರಾಯ
Last Updated 9 ಆಗಸ್ಟ್ 2018, 18:47 IST
ಅಕ್ಷರ ಗಾತ್ರ

ಬೆಂಗಳೂರು: ‘ಧಾರ್ಮಿಕ ಅಜೆಂಡವನ್ನು ಪ್ರಧಾನವಾಗಿ ಇಟ್ಟುಕೊಂಡು ಬರುವ ಎಲ್ಲಾ ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕು’ ಎಂದು ಸ್ವಾತಂತ್ರ್ಯ ಹೋರಾಟಗಾರರಾದ ಎಚ್‌.ಎಸ್‌.ದೊರೆಸ್ವಾಮಿ ಅಭಿಪ್ರಾಯಪಟ್ಟರು.

ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ‘ಆಗಸ್ಟ್‌ ಕ್ರಾಂತಿ ಟ್ರಸ್ಟ್‌’ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕವಲುದಾರಿಯಲ್ಲಿ ಪ್ರಜಾಪ್ರಭುತ್ವ’ ಕುರಿತ ಚರ್ಚಾಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದೂ, ಮುಸ್ಲಿಂ, ಸಿಖ್ಖರು... ಹೀಗೆ ಯಾರಾಗಿದ್ದರೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು, ಆಡಳಿತ ನಡೆಸಲು ಯೋಗ್ಯರಲ್ಲ. ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದೇವೆ ಎನ್ನುವ ದೃಷ್ಟಿಯಿಂದ ಆ ಪಕ್ಷಗಳು ಇಲ್ಲಿವೆ. ಚುನಾವಣಾ ಆಯೋಗವೂ ಒಪ್ಪಿಕೊಂಡಿದೆ. ಚುನಾವಣೆಗೆ ಸ್ಪರ್ಧಿಸುತ್ತಾರೆ, ಬಹುಮತ ಬರುತ್ತದೆ. ಅಧಿಕಾರದಲ್ಲಿರುವ ಕಾರಣ ಅನಿವಾರ್ಯವಾಗಿ ನಾವು ಒಪ್ಪಿಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ಕರ್ನಾಟಕ ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಅಮಿತ್‌ ಶಾ, ಮೋದಿ ಈ ಚುನಾವಣೆಯಲ್ಲಿ ಹರಸಾಹಸ ಪಟ್ಟರು. ನಾವೆಲ್ಲ ಹಿಂದೂಗಳೇ. ಆದರೆ, ನಾವು ಹಿಂದೂಗಳಲ್ಲ ಎನ್ನುವ ರೀತಿಯಲ್ಲಿ ಮಾತನಾತ್ತಿದ್ದೇವೆ. ಅದನ್ನು ಅವರು ಪ್ರಯೋಜನ ಪಡೆಯುತ್ತಿದ್ದಾರೆ. ನಾವು ಶೇ 90ರಷ್ಟು ಹಿಂದೂಗಳು. ನೀವು ಶೇ 10ರಷ್ಟು ಹಿಂದೂವಾಗಿದ್ದೀರಿ’ ಎಂದು ಟೀಕಿಸಿದರು.

ಸ್ವರಾಜ್‌ ಅಭಿಯಾನದ ಸದಸ್ಯೆ ಪುಷ್ಪ, ‘ ಹಿಂದುತ್ವದ ಹೆಸರಿನಲ್ಲಿ ದ್ವೇಷದ ಭಾವನೆಯನ್ನು ಸಾರಲಾಗುತ್ತಿದೆ. ಪ್ರೀತಿ, ತಾಳ್ಮೆ, ಸಹಿಷ್ಣುತೆ, ಸಹಭಾಗಿತ್ವ ಹಿಂದುತ್ವದ ತತ್ವಗಳೇ ಹೊರತು ದ್ವೇಷವಲ್ಲ. ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿರುವ ಹಿಂದೂ ಭಯೋತ್ಪಾದನೆಯನ್ನು ತಡೆಯುವುದು ನಮ್ಮ ಈಗಿನ ಅನಿವಾರ್ಯವಾಗಿದೆ’ ಎಂದು ಹೇಳಿದರು.

ಟ್ರಸ್ಟ್‌ನ ಸದಸ್ಯ ಮಂಗಳೂರು ವಿಜಯ, ‘ಸ್ವಾತಂತ್ರ್ಯದಿನ, ಗಣರಾಜ್ಯೋತ್ಸವದ ದಿನ..ಹೀಗೆ ವರ್ಷದಲ್ಲಿ ಕೆಲವು ದಿನಗಳಲ್ಲಿ ಸಭೆ ಸೇರಿ, ನಮ್ಮ ಅಸ್ತಿತ್ವ ಅಪಾಯದಲ್ಲಿದೆ ಎಂದು ಚರ್ಚಿಸಿ ಹೊರಟು ಹೋಗುತ್ತಿದ್ದೇವೆ. ಕೋಮುವಾದಿಗಳನ್ನು ಸಮರ್ಥವಾಗಿ ಎದುರಿಸಬೇಕೆಂದರೆ ಇನ್ನೊಂದು ವರ್ಷದಲ್ಲಿ ಒಂದು ಲಕ್ಷ ಯುವಜನತೆಯನ್ನು ಸಂಘಟಿಸುವ ಸಂಕಲ್ಪ ಮಾಡಬೇಕು’ ಎಂದರು.

‘ಟೈಮ್‌ ಬಾಂಬ್‌ಗಳನ್ನು ಸಿದ್ಧಪಡಿಸಿದ್ದೇನೆ’

‘ಸ್ವಾತಂತ್ರ್ಯ ಚಳವಳಿಯ ಕಾವು ಎಲ್ಲೆಡೆ ಹಬ್ಬಿದ ಸಂದರ್ಭದಲ್ಲಿ ಹೆಚ್ಚು ಅಪಾಯವಿಲ್ಲದ ಟೈಮ್‌ ಬಾಂಬ್‌ಗಳನ್ನು ನಾವು ಸಿದ್ಧಪಡಿಸುತ್ತಿದ್ದೆವು’ ಎಂದು ದೊರೆಸ್ವಾಮಿ ನೆನಪುಗಳನ್ನು ಹಂಚಿಕೊಂಡರು.

‘ಟೈಮ್‌ ಬಾಂಬ್‌ಗಳನ್ನು ಸಿದ್ಧಪಡಿಸಿ ಮೂಟೆಗಳನ್ನು ತುಂಬಿ, ಕಚೇರಿಗಳ ಬಳಿ ತೆಗೆದುಕೊಂಡು ಹೋಗಿ ಇಡುತ್ತಿದ್ದೆವು.ಇಲಿ, ಹೆಗ್ಗಣಗಳ ಬಾಲಕ್ಕೆ ಬಾಂಬ್‌ಗಳನ್ನು ಕಟ್ಟುತ್ತಿದ್ದೆವು. ಅದರಿಂದ ಬ್ರಿಟಿಷರ ಸರ್ಕಾರಿ ಕಡತಗಳು ಸುಟ್ಟುಹೋಗುತ್ತಿದ್ದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT