ಬುಧವಾರ, ಜುಲೈ 28, 2021
21 °C
ಪ್ರಾಧಿಕಾರಕ್ಕೆ ಬಳಕೆ ಪ್ರಮಾಣಪತ್ರ ರವಾನಿಸಿದ ಜಿಲ್ಲಾಡಳಿತ

ಬೀದರ್ ಕನ್ಬಡ ಭವನದ ₹1 ಕೋಟಿ ಅನುದಾನ ಕಡಿತ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣ ಆಗುತ್ತಿರುವ ಕಾರಣ ಕನ್ನಡಿಗರು ಖುಷಿಯಲ್ಲಿರುವ ಸಂದರ್ಭದಲ್ಲೇ ಗಡಿ ಅಭಿವೃದ್ಧಿ ಪ್ರಾಧಿಕಾರ ಭವನದ ₹ 1 ಕೋಟಿ ಅನುದಾನ ಕಡಿತಗೊಳಿಸುವ ಮೂಲಕ ಗಡಿಭಾಗದ ಜನರ ಆಸೆಗಳಿಗೆ ತಣ್ಣಿರು ಎರಚಿದೆ.

ಹಿಂದಿ, ಉರ್ದು, ಮರಾಠಿ ಹಾಗೂ ತೆಲುಗು ಭಾಷೆಗಳ ಪ್ರಭಾವದ ಮಧ್ಯೆಯೂ ಜಿಲ್ಲೆಯ ಜನ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ, ಅನುದಾನ ಕಡಿತಗೊಳಿಸಿದ ಸರ್ಕಾರದ ನೀತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ನಗರದ ಚಿಕ್ಕಪೇಟೆ ಸಮೀಪ ₹ 2 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸಚಿವ ಸಿ.ಟಿ.ರವಿ ಒಪ್ಪಿಗೆ ಸೂಚಿಸಿದ್ದರು. ಭವನಕ್ಕೆ ಮಂಜೂರು ಮಾಡಲಾದ ₹ 2 ಕೋಟಿಯಲ್ಲಿ ಪ್ರಾಧಿಕಾರ ಮೊದಲ ಹಂತವಾಗಿ 2020ರ ಜನವರಿ 9ರಂದು ಬೀದರ್‌ ಜಿಲ್ಲಾಧಿಕಾರಿ ಖಾತೆಗೆ ₹ 1 ಕೋಟಿ ಜಮಾ ಮಾಡಿತ್ತು. ಭವನಕ್ಕೆ ಭೂಮಿ ಪೂಜೆಯನ್ನೂ ನೆರವೇರಿಸಲಾಗಿತ್ತು. ಇದಾದ ಬಳಿಕ ಪ್ರಾಧಿಕಾರದ ಅಧ್ಯಕ್ಷರು ಬೀದರ್‌ಗೆ ಬಂದಿದ್ದರು. ಆದರೆ, ಕಾಮಗಾರಿ ಆರಂಭವಾಗಿರಲಿಲ್ಲ. ನಂತರ ಕಟ್ಟಡದ ಮೊದಲ ಮಹಡಿ ಪೂರ್ಣಗೊಂಡರೂ ಪ್ರಾಧಿಕಾರಕ್ಕೆ ಮಾಹಿತಿ ಇರಲಿಲ್ಲ.

ಕಟ್ಟಡದ ಮೊದಲ ಅಂತಸ್ತು ನಿರ್ಮಾಣವಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಿರಲಿಲ್ಲ. ಜಿಲ್ಲಾಡಳಿತದಿಂದ ಅನುದಾನ ಬಳಕೆ ಪ್ರಮಾಣಪತ್ರ ಬಾರದ ಕಾರಣ ಪ್ರಾಧಿಕಾರ ಜಿಲ್ಲಾಧಿಕಾರಿಗೆ ಪತ್ರ ಕಳಿಸಿತ್ತು. ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಸೋಮವಾರ ಪ್ರಾಧಿಕಾರಕ್ಕೆ ಎಲ್ಲ ದಾಖಲೆಗಳನ್ನೂ ಕಳಿಸಿದ್ದು, ಲೋಕೋಪಯೋಗಿ ಇಲಾಖೆಗೆ ₹ 1 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ.

ಕಸಾಪ ಅಧ್ಯಕ್ಷರ ಅಸಮಾಧಾನ:

‘ಬೀದರ್‌ನಲ್ಲಿ ತಾಂತ್ರಿಕ ಕಾರಣಗಳಿಂದ ಕಟ್ಟಡ ಕಾಮಗಾರಿ ಆರಂಭವಾಗಲು ಸ್ವಲ್ಪ ವಿಳಂಬವಾಗಿದೆ. ಆದರೆ, ಮೊದಲ ಮಹಡಿ ಪೂರ್ಣಗೊಂಡಿದೆ. ಪ್ರಾಧಿಕಾರ ದಿಢೀರ್‌ ₹ 1 ಕೋಟಿ ವೆಚ್ಚದಲ್ಲೇ ಕಾಮಗಾರಿ ಪೂರ್ಣಗೊಳಿಸುವಂತೆ
ಸೂಚಿಸಿರುವುದು ಗಡಿನಾಡ ಕನ್ನಡಿಗರಿಗೆ ನೋವುಂಟು ಮಾಡಿದೆ’ ಎಂದು ಕನ್ನಢ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗಡಿನಾಡು ಕನ್ನಡಿಗರ 70 ವರ್ಷಗಳ ಹೋರಾಟದ ಫಲವಾಗಿ ಬೀದರ್‌ನಲ್ಲಿ ಇದೀಗ ಕನ್ನಡ ಭವನ ನಿರ್ಮಾಣಗೊಳ್ಳುತ್ತಿದೆ. ಸರ್ಕಾರದ ವ್ಯವಸ್ಥೆಯಿಂದಾಗಿ ವಿಳಂಬವಾಗಿದೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಅಥವಾ ಕನ್ನಡಿಗರು ಹೊಣೆ ಅಲ್ಲ. ಪ್ರಾಧಿಕಾರ ತನ್ನ ನಿರ್ಧಾರ ಬದಲಿಸಬೇಕು. ಉಳಿದ ಅನುದಾನವನ್ನೂ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡಿದೆ. ಜಿಲ್ಲಾಧಿಕಾರಿ ರಾಮಚಂದ್ರನ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಆಸಕ್ತಿ ಫಲವಾಗಿ ಕಟ್ಟಡದ ಮೊದಲ ಮಹಡಿ ಪೂರ್ಣಗೊಂಡಿದೆ’ ಎಂದು ಹೇಳಿದ್ದಾರೆ.

* * *
ಜಿಲ್ಲಾಡಳಿತಕ್ಕೆ ಪತ್ರ
‘ಸರ್ಕಾರ ವಿವಿಧ ಅಕಾಡೆಮಿಗಳಿಗೆ ನೀಡಿದ ಅನುದಾನ ಖರ್ಚು ಮಾಡದೇ ಇದಲ್ಲಿ ಮರಳಿಸುವಂತೆ ಸೂಚನೆ ನೀಡಲಾಗಿದೆ. ಬೀದರ್‌ ಕನ್ನಡ ಭವನದ ಅನುದಾನವನ್ನು ₹ 1 ಕೋಟಿಗೆ ಸೀಮಿತಗೊಳಿಸಲಾಗಿದೆ. ಈ ಕುರಿತು
ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ’ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ ತಿಳಿಸಿದ್ದಾರೆ.

‘ಪ್ರಾಧಿಕಾರಕ್ಕೆ ಅನುದಾನದ ಕೊರತೆಯಾಗಿರುವ ಕಾರಣ ಬೃಹತ್‌ ಮೊತ್ತದ ಕಾಮಗಾರಿಗಳಿಗೆ ಎರಡನೇ ಕಂತಿನ ಅನುದಾನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಭವನದ ಅನುದಾನವನ್ನು ಸೀಮಿತಗೊಳಿಸಲಾಗಿದೆ. ಪೂರ್ಣ ಅನುದಾನ ಬಳಸಿಕೊಳ್ಳದ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡದಂತೆ ಹಣಕಾಸು ಇಲಾಖೆ ನಿರ್ದೇಶನ ನೀಡಿದೆ. ಇಲಾಖೆ ಕಾರ್ಯಕ್ರಮಗಳಿಗೆ ಅನುದಾನದ ಕೊರತೆಯಾಗಲಿದೆ. ಹೀಗಾಗಿ ಅಕಾಡೆಮಿಗಳಿಗೂ ಪತ್ರ ಕಳಿಸಲಾಗಿದೆ’ ಎಂದು ಹೇಳಿದ್ದಾರೆ.

‘ಕನ್ನಡ ಭವನದ ಮೊದಲ ಮಹಡಿ ಪೂರ್ಣಗೊಂಡ ನಂತರ ಉಳಿದ ಅನುದಾನ ಕೊಡುವಂತೆ ನಾನೇ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುತ್ತೇನೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಪ್ರದೇಶ ಅಭಿವೃದ್ಧಿ ನಿಧಿಯಿಂದ ಅನುದಾನ ಪಡೆಯಲು ಅವಕಾಶ ಇದೆ’ ಎಂದು ತಿಳಿಸಿದ್ದಾರೆ.

ಪ್ರಾಧಿಕಾರ ಮಂಜೂರಾದ ₹ 2 ಕೋಟಿ ಅನುದಾನದಲ್ಲಿ ₹ 1 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಅದನ್ನು ಬಳಸಿಕೊಳ್ಳಲಾಗಿದೆ. ಮೊದಲ ಕಂತು ಬಿಡುಗಡೆಯಾದಾಗಿನಿಂದ ಲಾಕ್‌ಡೌನ್‌ ಜಾರಿಯಲ್ಲಿದೆ. ತಾಂತ್ರಿಕ ಕಾರಣಗಳಿಂದಾಗಿ ಬಳಕೆ ಪತ್ರ ಸಲ್ಲಿಸಲು ವಿಳಂಬವಾಗಿದೆ. ಅದನ್ನು ಕಳಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು