ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌, ಕಲಬುರಗಿಗೆ ಶೀಘ್ರ 100 ಹೊಸ ಬಸ್: ಸಚಿವ ಶ್ರೀರಾಮುಲು

ಆರ್‌ಟಿಒ ಕಚೇರಿ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ
Last Updated 19 ಜುಲೈ 2022, 14:45 IST
ಅಕ್ಷರ ಗಾತ್ರ

ಬೀದರ್: ‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ಬಸ್‌ ಖರೀದಿಸಲು ಮುಖ್ಯಮಂತ್ರಿ ₹ 100 ಕೋಟಿ ಕೊಡುವ ಭರವಸೆ ನೀಡಿದ್ದಾರೆ. ಮೊದಲ ಹಂತವಾಗಿ ಬೀದರ್‌–ಕಲಬುರಗಿ ವಿಭಾಗಕ್ಕೆ 100 ಹೊಸ ಬಸ್‌ ಕೊಡಲಾಗುವುದು. ಎರಡನೇ ಹಂತದಲ್ಲಿ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ವಿಭಾಗಕ್ಕೆ ಹೊಸ ಬಸ್‌ ಕೊಡಲಾಗುವುದು’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಇಲ್ಲಿಯ ಪ್ರತಾಪನಗರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಿಎಂಟಿಸಿಯಿಂದ 560 ಬಿಎಸ್‌6 ಹೊಸ ಬಸ್‌ಗಳನ್ನು ಖರೀದಿ ಮಾಡಲಾಗಿದೆ. 9 ಮೀಟರ್‌ನ 90 ಎಲೆಕ್ಟ್ರಿಕ್‌ ಬಸ್ ಹಾಗೂ 12 ಮೀಟರ್‌ನ 300 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಆದೇಶ ನೀಡಲಾಗಿದೆ. ಈಗಾಗಲೇ 95 ಬಸ್‌ಗಳು ಬಂದಿವೆ. ಇನ್ನುಳಿದ ಬಸ್‌ಗಳೂ ಶೀಘ್ರದಲ್ಲೇ ಬರಲಿವೆ ಎಂದು ತಿಳಿಸಿದರು.

ರಸ್ತೆ ಅಪಘಾತ ತಡೆಯಲು ಹೆಚ್ಚಿನ ಒತ್ತು ಕೊಡಲಾಗಿದೆ. ಸರಿಯಾಗಿ ಚಾಲನಾ ತರಬೇತಿ ಹಾಗೂ ಪರೀಕ್ಷೆಗೆ ಎಲ್ಲ ಕಡೆ ಡ್ರೈವಿಂಗ್‌ ಟೆಸ್ಟಿಂಗ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ರಸ್ತೆ ಸುರಕ್ಷತೆಗಾಗಿಯೇ ₹ 171 ಕೋಟಿ ಕಾಯ್ದಿರಿಸಲಾಗಿದೆ. ಡ್ರೈವಿಂಗ್‌ ಟೆಸ್ಟಿಂಗ್ ಟ್ರ್ಯಾಕ್‌ಗೆ ₹ 80 ಕೋಟಿ ತೆಗೆದಿರಿಸಲಾಗಿದೆ ಎಂದರು.

ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳು ಸಿಮ್ಯುಲೇಟರ್‌ಗಳನ್ನು ಪಡೆಯಲು ಸಿದ್ಧವಾಗಿವೆ. ಶಿಸ್ತುಬದ್ಧ ತರಬೇತಿ ಕೊಡುವುದೇ ಇದರ ಉದ್ದೇಶವಾಗಿದೆ. ಕಟ್ಟಡಗಳ ದುರಸ್ತಿಗೆ ₹ 15 ಕೋಟಿ ಕಾಯ್ದಿರಿಸಲಾಗಿದೆ. ಕಚೇರಿಗಳನ್ನು ಕಾಗದ ರಹಿತ ಮಾಡಲಾಗಿದೆ. ಆನ್‌ಲೈನ್ ಮೂಲಕ ಸೇವೆ ಕೊಡಲಾಗುತ್ತಿದೆ ಎಂದು ಹೇಳಿದರು.

ಬೀದರ್‌ ಸಾರಿಗೆ ಅಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹ 7.5 ಕೋಟಿ ಕಾಯ್ದಿರಿಸಲಾಗಿದೆ. ಸ್ವಯಂ ಚಾಲಿತ ಚಾಲನಾ ಪಥ ನಿರ್ಮಾಣಕ್ಕೆ ಜಿಲ್ಲಾಡಳಿತ ಬೀದರ್‌ ತಾಲ್ಲೂಕಿನ ಆಯಾಸಪುರದಲ್ಲಿ 7.32 ಎಕರೆ ಜಾಗ ಮಂಜೂರು ಮಾಡಿದೆ. 2022–23ನೇ ಸಾಲಿನಲ್ಲಿ ಚಾಲನಾ ಪಥ ನಿರ್ಮಾಣಕ್ಕೆ ₹ 8.89 ಕೋಟಿ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

ಸಾರಿಗೆ ಆಯುಕ್ತ ಕೆ.ಎಚ್.ಕುಮಾರ, ಹೆಚ್ಚುವರಿ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಸಿ.ಮಲ್ಲಿಕಾರ್ಜುನ, ಬಿ.ಪಿ. ಉಮಾಶಂಕರ, ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ನೂರ್‌ಅಹಮ್ಮದ್‌ ಬಾಷಾ, ಬೀದರ್‌ ಸಾರಿಗೆ ಪ್ರಾದೇಶಿಕ ಅಧಿಕಾರಿ ನಾರಾಯಣಸ್ವಾಮಿ ನಾಯ್ಕ, ಮುಖ್ಯ ಎಂಜಿನಿಯರ್‌ ಮೆಹಬೂಬಸಾಬ್‌ ಇದ್ದರು.

ಮಾನಸಾ ಪಾಂಚಾಳ ಹಾಗೂ ಶಿವಕುಮಾರ ಪಾಂಚಾಳ ಪ್ರಾರ್ಥನೆ ಹಾಡಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT