ಭಾನುವಾರ, ಜನವರಿ 17, 2021
16 °C

ಐದು ವರ್ಷಗಳಲ್ಲಿ 125 ತಾಯಿ-ಮಕ್ಕಳ ಆಸ್ಪತ್ರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: 'ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 125 ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ರೂ. 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಹಾಗೂ ಇತರ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

"ಗರ್ಭಿಣಿ ಹಾಗೂ ನವಜಾತ ಶಿಶುಗಳ ಮರಣ ಅನುಪಾತ ತಗ್ಗಿಸುವುದು ಮತ್ತು ತಾಯಿ ಹಾಗೂ ಮಕ್ಕಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ' ಎಂದು ತಿಳಿಸಿದರು.

"ಸರ್ವರಿಗೂ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. 2018 ರ ನೀತಿ ಆಯೋಗದ ಶ್ರೇಯಾಂಕದ ಪ್ರಕಾರ ಕೇರಳ ಹಾಗೂ ತಮಿಳುನಾಡು ಹೊರತುಪಡಿಸಿದರೆ ಕರ್ನಾಟಕವೇ ಅತ್ಯುತ್ತಮ ವೈದ್ಯಕೀಯ ಸೇವೆ ಲಭ್ಯ ಇರುವ ರಾಜ್ಯವಾಗಿದೆ. ದೇಶದ ಆರೋಗ್ಯ ಕ್ಷೇತ್ರದ ಸರಾಸರಿ ಅಂಕಗಳಿಗಿಂತಲೂ ರಾಜ್ಯದ ಸರಾಸರಿ ಅಂಕಗಳು ಹೆಚ್ಚಾಗಿವೆ' ಎಂದು ಹೇಳಿದರು.

"ಅಭಿವೃದ್ಧಿಯಲ್ಲಿ ರಾಜ್ಯವನ್ನು ದೇಶದಲ್ಲೇ ಮಾದರಿಯನ್ನಾಗಿ ಮಾಡುವ ಗುರಿ ಇದೆ. ಕೋವಿಡ್, ಪ್ರವಾಹ, ಅತಿವೃಷ್ಟಿ ಹಾಗೂ ಹಣಕಾಸಿನ ಸಮಸ್ಯೆಗಳಿಂದ ಈ ವರ್ಷ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಬರುವ ದಿನಗಳಲ್ಲಿ ಬೀದರ್ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಬೀದರ್ ಧಾರ್ಮಿಕ ಹಾಗೂ ಐತಿಹಾಸಿಕ ಪ್ರಾಮುಖ್ಯ ಪಡೆದ ಸ್ಥಳಗಳನ್ನು ಹೊಂದಿದೆ. ಇಲ್ಲಿ ಜನಿಸಿದ ಶರಣ ಸಂಸ್ಕೃತಿ ವಿಶ್ವದಾದ್ಯಂತ ಪಸರಿಸಿ ರಾಜ್ಯಕ್ಕೆ ಮಹತ್ವ ತಂದಿದೆ ಎಂದು ನುಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ ಮಾತನಾಡಿದರು. ಇದೇ ಸಂದರ್ಭದಲ್ಲಿ ₹ 5.22 ಕೋಟಿ ವೆಚ್ಚದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ವಸತಿ ನಿಲಯ, ₹. 4.90 ಕೋಟಿ ವೆಚ್ಚದ ಸರ್ಕಾರಿ ಶುಶ್ರೂಷ ಶಾಲೆ, ಕಾಲೇಜು ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ, ಮನ್ನಳ್ಳಿ, ಕಮಠಾಣ ಹಾಗೂ ಬೆನಕನಳ್ಳಿಯಲ್ಲಿ ₹ 2.50 ಕೋಟಿ ವೆಚ್ಚದ ಗ್ರಾಮೀಣ ಸಂತೆಗಳ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಮಿಸ್ತಾನಪುರದ ಉಪ ಪ್ರಾಂಗಣದಲ್ಲಿ ಮನೆ ನಿರ್ಮಾಣಕ್ಕಾಗಿ ಹಮಾಲರಿಗೆ ನಿವೇಶನ ಹಕ್ಕುಪತ್ರಗಳ ವಿತರಣೆಯೂ ನಡೆಯಿತು.

ಉಪಮುಖ್ಯಮಂತ್ರಿ ಲಕ್ಷಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಬೀದರ್ ಶಾಸಕ ರಹೀಂ ಖಾನ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್, ಜಿ.ಎನ್. ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಬೀದರ್ ಎಪಿಎಂಸಿ ಅಧ್ಯಕ್ಷ ಅನಿಲಕುಮಾರ ಪನಾಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜಕುಮಾರ್ ಪಾಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ, ಈಶ್ವರಸಿಂಗ್ ಠಾಕೂರ್ ಇದ್ದರು.

ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಸ್ವಾಗತಿಸಿದರು. ಚನ್ನಬಸವ ಹೇಡೆ ಹಾಗೂ ಟಿ.ಎಂ. ಮಚ್ಚೆ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು