ಬೀದರ್: ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಸುಮಾರು 200 ಮನೆಗಳಿಗೆ ಹಾನಿಯಾಗಿದೆ. ಮತ್ತೆ ಮೂರು ದಿನಗಳಿಂದ ಮಳೆ ಮುಂದುವರಿದಿರುವುದು ಗ್ರಾಮಸ್ಥರು ಹಾಗೂ ರೈತರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.
ಈಗಾಗಲೇ ಭಾಲ್ಕಿ ತಾಲ್ಲೂಕಿನ ಕಾರಂಜಾ ಜಲಾಶಯ, ಬಸವಕಲ್ಯಾಣ ತಾಲ್ಲೂಕಿನ ಚುಳುಕಿನಾಲಾ, ಅಪ್ಪರ್ ಮುಲ್ಲಾಮಾರಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹರಿಯ ಬಿಡಲಾಗುತ್ತಿದೆ. ಗುರುವಾರದ ವರೆಗೂ ಮಳೆ ಮಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
‘ತೆಲಂಗಾಣದಲ್ಲೂ ಧಾರಾಕಾರ ಮಳೆ ಸುರಿದ ಕಾರಣ ಜಮೀರಾಬಾದ್ ಸಮೀಪ ಕೊತ್ತೂರಿನ ಚಿಕ್ಕ ಜಲಾಶಯದಿಂದ 1,500 ಕ್ಯೂಸೆಕ್ ನೀರು ಬಿಟ್ಟಿದ್ದಾರೆ. ಕಾರಂಜಾದ ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ತೆರೆದು 8,500 ಕ್ಯೂಸೆಕ್ ನೀರು ಹರಿಯ ಬಿಡಲಾಗಿದೆ’ ಎಂದು ಕಾರಂಜಾ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ ತಿಳಿಸಿದ್ದಾರೆ.
ಬೀದರ್, ಭಾಲ್ಕಿ, ಔರಾದ್, ಕಮಲನಗರ ಹಾಗೂ ಚಿಟಗುಪ್ಪ ತಾಲ್ಲೂಕಿನ ಕೆಲ ಗ್ರಾಮಗಳ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ಸೋಯಾ, ಉದ್ದು, ಹೆಸರು ಹಾಗೂ ಜೋಳದ ಬೆಳೆಗಳಲ್ಲಿ ನೀರು ಸಂಗ್ರಹವಾಗಿದೆ. ಇನ್ನು ಒಂದು ವಾರ ಮಳೆ ಇದೇ ರೀತಿ ಮುಂದುವರಿದರೆ ಕೀಟಬಾಧೆಯೂ ಕಾಣಿಸಿಕೊಳ್ಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಔರಾದ್ ಪಟ್ಟಣದ ಜನತಾ ಕಾಲೊನಿ, ಸಂತೋಷ ಕಾಲೊನಿ, ಶಿಕ್ಷಕರ ಕಾಲೊನಿಯ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಬೆಳಕುಣಿ– ನಾಗೂರ ಬಳಿ ಸಂಪರ್ಕ ಕಡಿತವಾಗಿ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗಿದೆ. ಸಂತಪುರ ಹೋಬಳಿಯಲ್ಲಿ ಹೊಲಗಳಿಗೆ ನೀರು ನುಗ್ಗಿದೆ.
ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಮಣ್ಣಿನ ಮನೆಗಳೇ ಅಧಿಕ ಸಂಖ್ಯೆಯಲ್ಲಿ ಇವೆ. ಕಮಲನಗರ ತಾಲ್ಲೂಕಿನ ಹೊಳಸಮುದ್ರ ಗ್ರಾಮದಲ್ಲಿ ಮೂರು ಮಣ್ಣಿನ ಮನೆಗಳು ಕುಸಿದಿವೆ. ಇನ್ನು ಕೆಲವು ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಹಸಿಯಾಗಿದ್ದು, ಅವು ಕುಸಿಯುವ ಭೀತಿ ಎದುರಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈಗಾಗಲೇ ಜಿಲ್ಲಾಡಳಿತಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
‘ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಮಳೆಗೆ ಸುಮಾರು 200 ಮನೆಗಳಿಗೆ ಹಾನಿಯಾಗಿರುವುದು ವರದಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸಮೀಕ್ಷೆ ನಡೆಸಿ ಈಗಾಗಲೇ ಸರ್ಕಾರಕ್ಕೆ ವರದಿ ಕಳಿಸಿಕೊಡಲಾಗಿದೆ. ಮಳೆ ಸುರಿಯುತ್ತಿರುವ ಕಾರಣ ಬೆಳೆ ಹಾನಿ ಸಮೀಕ್ಷೆಗೆ ತೊಡಕಾಗಿದೆ. ಮಳೆ ನಿಂತ ನಂತರ ಬೆಳೆ ಹಾನಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.