ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ | ಬೀದರ್‌: ಜಿಲ್ಲೆಗೆ ಬರ, ಬಿಜೆಪಿಗೆ ರಾಜಕೀಯ ಬಲ..

Published 31 ಡಿಸೆಂಬರ್ 2023, 5:35 IST
Last Updated 31 ಡಿಸೆಂಬರ್ 2023, 5:35 IST
ಅಕ್ಷರ ಗಾತ್ರ

ಬೀದರ್‌: 2023ನೇ ವರ್ಷ ಬೀದರ್‌ ಜಿಲ್ಲೆಯ ಪಾಲಿಗೆ ‘ಬರದ ವರ್ಷ’. ಸಕಾಲಕ್ಕೆ ಮಳೆ ಬಾರದೆ ರೈತರನ್ನು ಸಂಕಷ್ಟಕ್ಕೆ ದೂಡಿತು. ಇನ್ನೊಂದು ಪ್ರಮುಖ ವಿದ್ಯಮಾನ ವಿಧಾನಸಭೆ ಚುನಾವಣೆ. ಈ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸಿ ಜಿಲ್ಲೆಯಲ್ಲಿ ಅದಕ್ಕೆ ಹೆಚ್ಚಿನ ಬಲ ತಂದುಕೊಟ್ಟರು.

ಜೂನ್‌ನಲ್ಲಿ ಸಕಾಲಕ್ಕೆ ಮಳೆ ಆರಂಭಗೊಂಡಾಗ ಜಿಲ್ಲೆಯ ರೈತರು ಸಂಭ್ರಮ ಪಟ್ಟಿದ್ದರು. ಆದರೆ, ಅವರ ಸಂಭ್ರಮ ಹೆಚ್ಚು ದಿನಗಳ ಕಾಲ ಇರಲಿಲ್ಲ. ಆಗಸ್ಟ್‌ ತಿಂಗಳಿಡೀ ವರ್ಷಧಾರೆ ಆಗಲಿಲ್ಲ. ಇದರ ಪರಿಣಾಮ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೆಳೆದ ಬೆಳೆ ಹಾಳಾಯಿತು. ರೈತರು ಸಂಕಷ್ಟಕ್ಕೆ ಒಳಗಾದರು. ಆರಂಭದಲ್ಲಿ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿತು. ಆದರೆ, ರೈತರ ಹೋರಾಟಕ್ಕೆ ಮಣಿದು ನಂತರ ಜಿಲ್ಲೆಯ ಎಲ್ಲ ಎಂಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತು.

ಜಿಲ್ಲೆಯಲ್ಲಿ ಸರಾಸರಿಗಿಂತ ಶೇ 15ರಷ್ಟು ಕೊರತೆ ಮಳೆಯಾಗಿದೆ. ಬೆಳೆ ಬೆಳೆಯುವ ಹಂತದಲ್ಲಿ ಮಳೆ ಕೈಕೊಟ್ಟಿದ್ದರಿಂದ ಹೆಚ್ಚಿನ ರೈತರು ನಷ್ಟ ಅನುಭವಿಸಿದರು. ಆದರೆ, ಕಾರಂಜಾ ಜಲಾಶಯ ಭರ್ತಿಯಾಯಿತು. ಜಿಲ್ಲೆಯ ಬಹುತೇಕ ಕೆರೆ, ಕಟ್ಟೆಗಳು ತುಂಬಿದವು. ಎಲ್ಲೆಡೆ ಹಸಿರಿನ ವಾತಾವರಣ ಇದೆ. ಜಿಲ್ಲಾಡಳಿತದ ಪ್ರಕಾರ, ಸದ್ಯ ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವಿಗೆ ಕೊರತೆ ಇಲ್ಲ. ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಜಿಲ್ಲೆ ಉತ್ತಮ ಸ್ಥಿತಿಯಲ್ಲಿದೆ. ಇನ್ನು, ನವೆಂಬರ್‌, ಡಿಸೆಂಬರ್‌ನಲ್ಲಿ ಚಳಿ ಕಾಡಿತು.

ಬಿಜೆಪಿಗೆ ಬಲ:ರಾಜ್ಯದಲ್ಲಿ ಮೇ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಿತು. ಜನ ಬದಲಾವಣೆ ಬಯಸಿ ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸಿದರು. ಇದರ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜ್ಯದ ಇತರೆ ಭಾಗಗಳಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದರು. ಆ ಪಕ್ಷದ ಅನೇಕ ಘಟಾನುಘಟಿ ನಾಯಕರೇ ಸೋತು ಸುಣ್ಣವಾದರು. ಆದರೆ, ಬೀದರ್‌ ಜಿಲ್ಲೆಯ ಜನತೆ ಬಿಜೆಪಿಯನ್ನು ಬೆಂಬಲಿಸಿದರು. ಜಿಲ್ಲೆಯ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಗೆದ್ದು ವಿಧಾನಸಭೆ ಪ್ರವೇಶಿಸಿದರು. ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಹುಮನಾಬಾದ್‌ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮೊದಲ ಸಲ ವಿಧಾನಸಭೆ ಪ್ರವೇಶಿಸಿದರು. ಔರಾದ್‌ ಶಾಸಕ ಪ್ರಭು ಚವಾಣ್‌, ಹಿಂದೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶರಣು ಸಲಗರ ಬಸವಕಲ್ಯಾಣದಿಂದ ಪುನರಾಯ್ಕೆಯಾದರು. 1999ರ ಚುನಾವಣೆಯಲ್ಲಿ ಇದೇ ರೀತಿ ಬಿಜೆಪಿ ದೊಡ್ಡ ಗೆಲುವು ಜಿಲ್ಲೆಯಲ್ಲಿ ಸಾಧಿಸಿತ್ತು. ಇನ್ನು, ಭಾಲ್ಕಿಯಿಂದ ಈಶ್ವರ ಬಿ. ಖಂಡ್ರೆ, ಬೀದರ್‌ ಕ್ಷೇತ್ರದಿಂದ ರಹೀಂ ಖಾನ್‌ ಅವರು ಪುನರಾಯ್ಕೆಯಾದರು. ಇಷ್ಟೇ ಅಲ್ಲ, ಇಬ್ಬರಿಗೂ ಮಂತ್ರಿಗಿರಿ ಒಲಿಯಿತು.

ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬೀದರ್‌ ನಗರಸಭೆ, ಬೀದರ್‌ ಡಿಸಿಸಿ ಬ್ಯಾಂಕ್‌ ಅನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇನ್ನು, ಬಿಜೆಪಿ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಕಂಡರೂ ಅಲ್ಲಿ ಒಗ್ಗಟ್ಟು ಕಾಣಿಸಲಿಲ್ಲ. ಚುನಾವಣೆಯಲ್ಲಿ ಪರಸ್ಪರ ಒಬ್ಬರ ಕಾಲು ಒಬ್ಬರು ಎಳೆದುಕೊಂಡು ಮುನಿಸು ಹಾಗೆ ಉಳಿದುಕೊಂಡಿತು. ಅದರಲ್ಲೂ ಕೇಂದ್ರ ಸಚಿವ ಭಗವಂತ ಖೂಬಾ ಅವರ ಮೇಲೆ ಹೆಚ್ಚಿನ ಅಸಮಾಧಾನ ಇದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎನ್ನುವುದು ಅವರ ಮೇಲಿರುವ ಗಂಭೀರ ಆರೋಪ. ಅವರ ವಿರುದ್ಧ ಪಕ್ಷದ ಹಲವು ಮುಖಂಡರು ತಿರುಗಿ ಬಿದ್ದಿದ್ದಾರೆ. ಅವರ ಬದಲು ಬೇರೋಬ್ಬರಿಗೆ ಟಿಕೆಟ್‌ ನೀಡಬೇಕು. ಇಲ್ಲವಾದಲ್ಲಿ ಬಿಜೆಪಿ ಸೋಲುತ್ತದೆ ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದಕ್ಕೆ ಹೊಸ ವರ್ಷ 2024ರಲ್ಲಿ ಉತ್ತರ ಸಿಗಲಿದೆ. ಜಿಲ್ಲೆಯ ರಾಜಕೀಯ ಯಾವ ಕಡೆ ಸಾಗಲಿದೆ? ಯಾರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವರು? ಲೋಕಸಭೆ ಚುನಾವಣೆಯಲ್ಲಿ ಜನ ಯಾರ ಕೈ ಹಿಡಿಯುವರು? ಚುನಾವಣೆ ನಂತರ ಏನೇನು ಪಲ್ಲಟಗಳು ಆಗಲಿವೆ ಎನ್ನುವುದಕ್ಕೆ ಹೊಸ ವರ್ಷದ ಕೆಲವು ತಿಂಗಳು ಕಾಯಬೇಕಷ್ಟೇ.

ಪದ್ಮಶ್ರೀ ಪ್ರಶಸ್ತಿ ಗೌರವ: 2023ನೇ ಸಾಲಿನಲ್ಲಿ ಬೀದರ್‌ನ ಹೆಸರಾಂತ ಬಿದ್ರಿ ಕಲಾವಿದ ಷಾ ರಶೀದ್‌ ಅಹಮ್ಮದ್‌ ಖಾದ್ರಿ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಇದು ಜಿಲ್ಲೆಯ ಮಟ್ಟಿಗೆ ದೊಡ್ಡ ಗೌರವ. 2023ರ ಜನವರಿ 25ರಂದು ಪ್ರಶಸ್ತಿ ಘೋಷಿಸಲಾಗಿತ್ತು. ಏಪ್ರಿಲ್‌ 5ರಂದು ನವದೆಹಲಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಖಾದ್ರಿ ಅವರಿಗೆ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿದರು. ಖಾದ್ರಿ ಅವರು ನಾಲ್ಕು ದಶಕಗಳಿಂದ ಬಿದ್ರಿ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ.

ಮೂವರಿಗೆ ಪ್ರಶಸ್ತಿ: ಭೂತೇರ ನೃತ್ಯದ ಮೂಲಕ ಹೆಸರಾಗಿರುವ ನರಸಪ್ಪ ಭೂತೇರ ಅವರಿಗೆ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಇನ್ನು ಸಹಕಾರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗೆ ಪಂಡಿತರಾವ ಚಿದ್ರಿ ಅವರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇನ್ನು ವರ್ಷದ ಕೊನೆಯಲ್ಲಿ ಕಲ್ಲಪ್ಪ ಮಹಾರಾಜ ಅವರಿಗೆ ‘ಜಾನಪದ ಶ್ರೀ’ ಪ್ರಶಸ್ತಿ ಒಲಿಯಿತು.

ಸಿಪೆಟ್‌ ಆರಂಭ : ‘ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೊಕೆಮಿಕಲ್ಸ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ’ (ಸಿಪೆಟ್‌) ಕೋರ್ಸ್‌ ಅನ್ನು ಬೀದರ್‌ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಚಾಲನೆ ನೀಡಲಾಯಿತು. ಔರಾದ್‌ ತಾಲ್ಲೂಕಿನ ಬಲ್ಲೂರ ಗ್ರಾಮದಲ್ಲಿ ಸಿಪೆಟ್‌ ಆರಂಭಿಸಲು ಉದ್ದೇಶಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಅದಕ್ಕೆ ಜಾಗ ಕೊಡಬೇಕಿದೆ. ಬಳಿಕ ರಾಜ್ಯ ಹಾಗೂ ಕೇಂದ್ರದ ತಲಾ 50ರ ಅನುಪಾತದ ಅನುದಾನದಲ್ಲಿ ಕಟ್ಟಡ ನಿರ್ಮಿಸಬೇಕಿದೆ. ಅದುವರೆಗೆ ಕಾಯದೆ ಸಿಪೆಟ್‌ ಅನ್ನು ನೂತನ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅಕ್ಟೋಬರ್‌ನಲ್ಲಿ ಚಾಲನೆ ನೀಡಿದರು. ಇನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಿಸಿದ ಬೀದರ್‌ ನೂತನ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡವು.

ಸದ್ದು ಮಾಡಿದ ₹3.50 ಕೋಟಿ ದರೋಡೆ: ಬಸವಕಲ್ಯಾಣದಲ್ಲಿ ನವೆಂಬರ್‌ನಲ್ಲಿ ನಡೆದ ದರೋಡೆ ಡಕಾಯಿತಿ ಪ್ರಕರಣ ಸಾಕಷ್ಟು ಸದ್ದು ಮಾಡಿತು. ಜಿಪಂ ಮಾಜಿ ಸದಸ್ಯ ಕಾಂಗ್ರೆಸ್‌ ಮುಖಂಡ ಗುಂಡುರೆಡ್ಡಿ ಅವರನ್ನು ಪ್ರಕರಣ ಸಂಬಂಧ ಬಂಧಿಸಲಾಯಿತು. ಆನಂತರ ಅವರು ಜಾಮೀನಿನ ಮೇಲೆ ಹೊರಬಂದು ‘ನನ್ನ ವಿರುದ್ಧ ಷಡ್ಯಂತ್ರ ಮಾಡಿ ಸುಳ್ಳು ದೂರು ಕೊಡಿಸಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗಲಿದೆ’ ಎಂದು ಪ್ರತಿಪಾದಿಸಿದ್ದರು. ಉದ್ಯಮಿ ಉಮಾಶಂಕರ್‌ ಎಂಬುವರು ₹3.50 ಕೋಟಿ ನಗದು ಕೊಂಡೊಯ್ಯುವಾಗ ಗುಂಡುರೆಡ್ಡಿ ಸೇರಿದಂತೆ ಇತರೆ ಮೂವರು ಅವರನ್ನು ತಡೆದು ಗುಂಡು ಹಾರಿಸಿ ಡಕಾಯಿತಿ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.

ಡಿಸಿಸಿ ಬ್ಯಾಂಕ್‌ನಲ್ಲಿ ಬದಲಾವಣೆ ಪರ್ವ: 2023ನೇ ವರ್ಷದ ಇನ್ನೊಂದು ಪ್ರಮುಖ ಬೆಳವಣಿಗೆ ಎಂದರೆ ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಚುನಾವಣೆ. 38 ವರ್ಷಗಳಿಂದ ನಾಗಮಾರಪಳ್ಳಿ ಕುಟುಂಬದ ಹಿಡಿತದಲ್ಲಿದ್ದ ಡಿಸಿಸಿ ಬ್ಯಾಂಕ್‌ ಖಂಡ್ರೆ ಪರಿವಾರದ ತೆಕ್ಕೆಗೆ ಜಾರಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಸಹೋದರ ಅಮರಕುಮಾರ್‌ ಖಂಡ್ರೆಯವರ ಪೆನಾಲ್‌ ಜಯ ಗಳಿಸಿತು. ಬಳಿಕ ಅವರು ಅಧ್ಯಕ್ಷರಾದರು. ಉಮಾಕಾಂತ ನಾಗಮಾರಪಳ್ಳಿ ಪೆನಾಲ್‌ ಸೋಲು ಅನುಭವಿಸಿತು. 

ಖಂಡ್ರೆ ಜನ್ಮ ಶತಮಾನೋತ್ಸವ: ಭಾಲ್ಕಿಯಲ್ಲಿ ಡಿಸೆಂಬರ್‌ 2ರಂದು ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಆಚರಿಸಲಾಯಿತು. ನಾಡಿನ ವಿವಿಧ ಭಾಗದ ಮಠಾಧೀಶರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಜನ ಸಚಿವ ಶಾಸಕರು ಪಾಲ್ಗೊಂಡಿದ್ದರು. ಖಂಡ್ರೆ ಪರಿವಾರದ ಶಕ್ತಿ ಪ್ರದರ್ಶನಕ್ಕೂ ಕಾರ್ಯಕ್ರಮ ವೇದಿಕೆ ಒದಗಿಸಿಕೊಟ್ಟಿತು.

ವಿಮಾನ ಸ್ಥಗಿತ; ಓಡಿದ ಹೊಸ ರೈಲು: ಬೀದರ್‌–ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಏಕಮಾತ್ರ ನಾಗರಿಕ ವಿಮಾನ ಸೇವೆ ಡಿಸೆಂಬರ್‌ನಲ್ಲಿ ಸ್ಥಗಿತಗೊಂಡಿತು. ನಷ್ಟದ ನೆಪವೊಡ್ಡಿ ‘ಸ್ಟಾರ್‌ ಏರ್‌’ ಕಂಪನಿ ಸೇವೆ ನಿಲ್ಲಿಸಿತು. ವಿಮಾನ ಓಡಾಟದ ಸಮಯ ಸೂಕ್ತವಾಗಿರದ ಕಾರಣ ಜನರಿಂದ ಸ್ಪಂದನೆ ಸಿಗಲಿಲ್ಲ. ಆದರೆ ಇದೇ ವೇಳೆ ಬೀದರ್‌–ಯಶವಂತಪುರ ನಡುವೆ ಹೊಸ ರೈಲಿಗೆ ಚಾಲನೆ ನೀಡಲಾಯಿತು. ಇಷ್ಟೇ ಅಲ್ಲ ₹25 ಕೋಟಿಯಲ್ಲಿ ಬೀದರ್‌ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು. ಭರದಿಂದ ಕಾಮಗಾರಿ ನಡೆಯುತ್ತಿದೆ. ಬೀದರ್‌–ಜಹೀರಾಬಾದ್‌–ಪರಳಿನ ರೈಲ್ವೆ ಡಬಲ್‌ ಮಾರ್ಗದ ಸರ್ವೆ ಕಾರ್ಯ ಪೂರ್ಣಗೊಂಡಿದ್ದು ಇನ್ನಷ್ಟೇ ಅನುದಾನ ಬಿಡುಗಡೆಗೊಳಿಸಬೇಕಿದೆ. ಜಿಲ್ಲೆಯ ನೂರು ಉದ್ಯಾನಗಳಲ್ಲಿ ಓಪನ್‌ ಜಿಮ್‌ ಕಾಮಗಾರಿಗೂ ಖೂಬಾ ಭೂಮಿಪೂಜೆ ನೆರವೇರಿಸಿದರು.

ನನೆಗುದಿಗೆ ಜಿಲ್ಲಾಡಳಿತ ಸಂಕೀರ್ಣ ಭವನ : ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರದಿಂದ ಜಿಲ್ಲಾಡಳಿತ ಸಂಕೀರ್ಣ ಭವನದ ಕಾಮಗಾರಿ ಈ ವರ್ಷವಾದರೂ ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಕೈಗೂಡಲಿಲ್ಲ. ಈಗಿರುವ ಜಿಲ್ಲಾಧಿಕಾರಿ ಕಚೇರಿ ಇರುವ ಜಾಗದಲ್ಲಿಯೇ ಜಿಲ್ಲಾಡಳಿತ ಭವನ ನಿರ್ಮಿಸಲು ತೀರ್ಮಾನಕ್ಕೆ ಬರಲಾಯಿತು. ಕಟ್ಟಡದ ವಿನ್ಯಾಸ ಹೇಗಿರಬೇಕೆಂದು ಎಂಜಿನಿಯರ್‌ಗಳಿಂದ ಸಲಹೆ ಪಡೆಯಲಾಯಿತು. ಆದರೆ ಕಾಮಗಾರಿ ಮಾತ್ರ ಆರಂಭವಾಗಲಿಲ್ಲ.

ಮೂರು ಸಮ್ಮೇಳನ: 2023ನೇ ಸಾಲಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂರು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿತು. ವರ್ಷದ ಆರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ ಆರಂಭದಲ್ಲಿ ಹುಲಸೂರಿನಲ್ಲಿ ಕಲ್ಯಾಣ ಕರ್ನಾಟಕ ಸಾಹಿತ್ಯ ಸಮ್ಮೇಳನ ಕೊನೆಯಲ್ಲಿ ದಾಸ ಸಾಹಿತ್ಯ ಸಮ್ಮೇಳನವನ್ನು ಬೀದರ್‌ನಲ್ಲಿ ಸಂಘಟಿಸಿತು. ಜುಲೈ 8ರಿಂದ 10ರವರೆಗೆ ಬೀದರ್‌ನಲ್ಲಿ ರಾಷ್ಟ್ರೀಯ ಜಾನಪದ ಸಮ್ಮೇಳನವೂ ನಡೆಯಿತು. 

ಕಾರಂಜಾ ಸಂತ್ರಸ್ತರಿಗೆ ಭರವಸೆಯ ಮುಲಾಮು: ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ಕೊಡಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯವರು 550 ದಿನಗಳಿಂದ ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಮೀಪ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ರಾಜ್ಯ ಸರ್ಕಾರದಿಂದ ಭರವಸೆಯ ಮುಲಾಮು ಸಿಕ್ಕಿತು. ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಮಿತಿ ಮುಖಂಡರನ್ನು ಬೆಳಗಾವಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಿ ಉನ್ನತಮಟ್ಟದ ಪರಿಣತರ ಸಮಿತಿಯ ಅಭಿಪ್ರಾಯ ಪಡೆದು ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು. ಸರ್ಕಾರದ ಈ ಕ್ರಮದಿಂದ ಅವರಲ್ಲಿ ಆಶಾಭಾವ ಮೂಡಿದೆ. ಇದಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಬೆಂಬಲ ಸೂಚಿಸಿದ್ದು ವಿಶೇಷ.

ಕೊನೆಗೊಳ್ಳದ ಚವಾಣ್‌– ಖೂಬಾ ಮುನಿಸು: ಔರಾದ್‌ ಶಾಸಕ ಪ್ರಭು ಚವಾಣ್‌ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ನಡುವಿನ ಮುನಿಸು 2023ನೇ ಸಾಲಿನಲ್ಲಿ ಶಮನಗೊಳ್ಳಲಿಲ್ಲ. ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಖೂಬಾ ಅವರು ಬಿಜೆಪಿ ಕಾರ್ಯಕರ್ತರನ್ನು ತಮ್ಮ ವಿರುದ್ಧ ಎತ್ತಿ ಕಟ್ಟಿ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದರು ಎಂದು ಚವಾಣ್‌ ಆರೋಪಿಸಿದ್ದರು. ಆದರೆ ಖೂಬಾ ಅದನ್ನು ನಿರಾಕರಿಸಿದ್ದರು. ಬಳಿಕ ಇಬ್ಬರೂ ವೇದಿಕೆ ಹಂಚಿಕೊಳ್ಳಲಿಲ್ಲ. ‘ಬರುವ ಲೋಕಸಭೆ ಚುನಾವಣೆಯಲ್ಲಿ ಖೂಬಾ ಅವರಿಗೆ ಟಿಕೆಟ್‌ ಕೊಟ್ಟರೆ ಅವರ ಪರ ಕೆಲಸ ಮಾಡುವುದಿಲ್ಲ. ಬದಲಾಗಿ ಬೇರೆ ಕ್ಷೇತ್ರದ ಜವಾಬ್ದಾರಿ ನೀಡಬೇಕು’ ಎಂದು ಚವಾಣ್‌ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇದರಿಂದ ಇಬ್ಬರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದೆ. ಇಷ್ಟೇ ಅಲ್ಲ ಮಾಜಿ ಶಾಸಕರಾದ ಸುಭಾಷ ಕಲ್ಲೂರ ಗುಂಡಪ್ಪ ವಕೀಲ ಮುಖಂಡರಾದ ಗುರುನಾಥ ಕೊಳ್ಳೂರ ಚನ್ನಬಸವ ಬಳತೆ ನಾಗರಾಜ ಕರ್ಪೂರ ಪದ್ಮಾಕರ ಪಾಟೀಲ ಸೇರಿದಂತೆ ಹಲವರು ತಮಗೆ ಟಿಕೆಟ್‌ ಕೊಡಬೇಕು ಎಂದು ಬಹಿರಂಗವಾಗಿ ಹೇಳಿದರು. ಅಲ್ಲದೇ ಪರೋಕ್ಷವಾಗಿ ಖೂಬಾ ವಿರುದ್ಧ ಅಸಮಾಧಾನ ಹೊರಹಾಕಿದರು.

ಕಲ್ಯಾಣ ಶಾಸಕರ ವಿರುದ್ಧ ಪ್ರಕರಣ: ಬೆದರಿಕೆ ದ್ವೇಷದ ಮಾತು ಆಡಿದ ಬಸವಕಲ್ಯಾಣದ ಶಾಸಕ ಶರಣು ಸಲಗರ ವಿರುದ್ಧ ಜುಲೈ 5ರಂದು ಪ್ರಕರಣ ದಾಖಲಾಯಿತು. ಜು. 5ರಂದು ಶರಣು ಸಲಗರ ಹಾಗೂ ಇತರೆ ಎಂಟು ಜನರು ಹಿರೇಮಠ ಕಾಲೊನಿಯ ಇನಾಮುಲ್ಲಾ ಖಾನ್‌ ಎಂಬುವರ ಮನೆಗೆ ಹೋಗಿ ಅವರ ಕುಟುಂಬದವರಿಗೆ ಬೆದರಿಕೆ ಹಾಕಿದ್ದಾರೆ. ದ್ವೇಷದ ಮಾತುಗಳನ್ನು ಆಡಿದ್ದಾರೆ ಎಂಬ ದೂರಿನ ಮೇರೆಗೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ಮೂವರಿಂದ ಆತ್ಮಹತ್ಯೆ: ಹುಮನಾಬಾದ್‌ ತಾಲ್ಲೂಕಿನ ಧುಮ್ಮನಸೂರಿನಲ್ಲಿ ಜುಲೈ 5ರಂದು ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಘಟನೆ ಜಿಲ್ಲೆಯ ಜನರ ಹೃದಯ ಕಲಕಿತು. ಅಂಕುಶ್‌ ಹುಚ್ಚೇನೂರ್‌ ತನ್ನ ಇಬ್ಬರು ಮಕ್ಕಳಾದ ತನು ಸಾಯಿರಾಜ್‌ ಅವರೊಂದಿಗೆ ಹೊಲದಲ್ಲಿನ ಬಾವಿಗೆ ತಡರಾತ್ರಿ ಹಾರಿ ಪ್ರಾಣ ತ್ಯಜಿಸಿದರು.

ಗಾಂಜಾ ಪಡಿತರ ಅಕ್ಕಿ ಜಪ್ತಿ: ವರ್ಷದ ಆರಂಭದಿಂದ ಕೊನೆಯವರೆಗೆ ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಯಿತು. ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲೆಯೊಂದರಲ್ಲಿ ₹20 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಜಪ್ತಿ ಮಾಡಲಾಯಿತು. ಆಹಾರ ಇಲಾಖೆಯು ಸರಿಸುಮಾರು ₹5 ಕೋಟಿಗೂ ಹೆಚ್ಚು ಬೆಲೆಬಾಳುವ ಪಡಿತರ ಅಕ್ಕಿಯನ್ನು ಕಾಳಸಂತೆಯಿಂದ ಜಪ್ತಿ ಮಾಡಿದೆ. ಆದರೆ ಗಾಂಜಾ ಅಕ್ಕಿ ಸಾಗಣೆ ಮೇಲೆ ಸಂಪೂರ್ಣ ನಿಯಂತ್ರಣ ಬೀಳಲೇ ಇಲ್ಲ. ಪೊಲೀಸ್‌ ಇಲಾಖೆಯಿಂದ ವರ್ಷವಿಡೀ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜನಜಾಗೃತಿ ಮೂಡಿಸಲಾಯಿತು. ಬೃಹತ್‌ ಮ್ಯಾರಾಥಾನ್‌ ಕೂಡ ಜರುಗಿತು.

ಶೈಲೇಂದ್ರ ಸಿದ್ದಲಿಂಗಪ್ಪ ವಿಧಾನಸಭೆಗೆ: ಹುಮನಾಬಾದ್‌ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಕ್ತಿ ಕೇಂದ್ರ ಪ್ರವೇಶಿಸಿದರು. ಸಿದ್ದಲಿಂಗಪ್ಪ ಅವರು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದರು. ಅದು ಕೂಡ ಅವರ ಸೋದರ ಸಂಬಂಧಿ ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌ ವಿರುದ್ಧ. ಇನ್ನು ಶೈಲೇಂದ್ರ ಬೆಲ್ದಾಳೆ ಅವರು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್‌ ಮಾಜಿ ಶಾಸಕ ಅಶೋಕ ಖೇಣಿ ಅವರಂತಹ ಪ್ರಬಲ ಮುಖಂಡರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. ಇನ್ನು ಹುಮನಾಬಾದ್‌ನಲ್ಲಿ ಶಾಸಕ ಸಿದ್ದಲಿಂಗಪ್ಪ ಪಾಟೀಲ ಎಂಎಲ್‌ಸಿಗಳಾದ ಭೀಮರಾವ ಪಾಟೀಲ ಚಂದ್ರಶೇಖರ ಪಾಟೀಲ ಅವರ ನಡುವೆ ಹಲವು ಸಭೆಗಳಲ್ಲಿ ಜಟಾಪಟಿ ನಡೆದಿದೆ. ಪ್ರತಿ ಸಲ ಶಿಷ್ಟಾಚಾರದ ವಿಷಯದಲ್ಲಿ ಘರ್ಷಣೆಗಳಾಗುತ್ತಿದ್ದು ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

2023ರ ಪ್ರಮುಖ ಘಟನಾವಳಿಗಳು...

  • ಬೀದರ್‌ನಲ್ಲಿ ಬೀದರ್ ಉತ್ಸವ ಕಲ್ಯಾಣದಲ್ಲಿ ಬಸವ ಉತ್ಸವ

  • ಬಸವಕಲ್ಯಾಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ರಾಷ್ಟ್ರೀಯ ಲಿಂಗಾಯತ ಪ್ರಥಮ ಅಧಿವೇಶನ

  • ಗೋರಟಾ ಹುತಾತ್ಮ ಸ್ಮಾರಕ ಉದ್ಘಾಟಿಸಿ ಗೃಹಸಚಿವ ಅಮಿತ್‌ ಶಾ

  • ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ

  • ಬೀದರ್‌ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

  • ಹೊನ್ನಿಕೇರಿಯಲ್ಲಿ ಚಿರತೆ ಪ್ರತ್ಯಕ್ಷ * ಬೀದರ್‌ ರೈಲು ನಿಲ್ದಾಣ ಮೇಲ್ದರ್ಜೆ ಕಾಮಗಾರಿಗೆ ಚಾಲನೆ

  • ರಸ್ತೆ ಸುರಕ್ಷತಾ ನಿಯಮ ಜನಜಾಗೃತಿಗೆ ಪೊಲೀಸ್‌ ಇಲಾಖೆಯಿಂದ ಮ್ಯಾರಾಥಾನ್‌

  • ಡಿ.ಕೆ. ಸಿದ್ರಾಮ ಬಿಜೆಪಿಯಿಂದ ಉಚ್ಚಾಟನೆ * ಶಕ್ತಿ ಯೋಜನೆ ಗೃಹಲಕ್ಷ್ಮಿಗೆ ಚಾಲನೆ

  • ಕಾರಂಜಾ ಜಲಾಶಯದಿಂದ ನೀರು

  • ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಗೆ ಬೀದರ್‌ನಲ್ಲಿ ಹೊಳೆಯಂತೆ ಹರಿದು ನೀರು. ಅಪಾರ ಹಾನಿ.

ಸಮಯ ಸಿಕ್ಕಾಗಲೆಲ್ಲಾ ಪರಸ್ಪರ ನಿಂದಿಸುತ್ತ ರಾಜಕೀಯ ಬದ್ಧ ವೈರಿಗಳಂದೆ ಗುರುತಿಸಿಕೊಂಡಿರುವ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್‌ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾಗಿ ನಗು ನಗುತ್ತ ಮಾತನಾಡಿದ ಸಂದರ್ಭ. ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೀದರ್‌ ವಿಮಾನ ನಿಲ್ದಾಣದ ಮೂಲಕ ನವದೆಹಲಿಗೆ ಪಯಣ ಬೆಳೆಸಿದ ಸಂದರ್ಭದಲ್ಲಿ ಇಬ್ಬರು ಭೇಟಿಯಾಗಿದ್ದರು
ಸಮಯ ಸಿಕ್ಕಾಗಲೆಲ್ಲಾ ಪರಸ್ಪರ ನಿಂದಿಸುತ್ತ ರಾಜಕೀಯ ಬದ್ಧ ವೈರಿಗಳಂದೆ ಗುರುತಿಸಿಕೊಂಡಿರುವ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್‌ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾಗಿ ನಗು ನಗುತ್ತ ಮಾತನಾಡಿದ ಸಂದರ್ಭ. ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೀದರ್‌ ವಿಮಾನ ನಿಲ್ದಾಣದ ಮೂಲಕ ನವದೆಹಲಿಗೆ ಪಯಣ ಬೆಳೆಸಿದ ಸಂದರ್ಭದಲ್ಲಿ ಇಬ್ಬರು ಭೇಟಿಯಾಗಿದ್ದರು
ಕಾರಂಜಾ ಜಲಾಶಯದಿಂದ ನದಿಗೆ ನೀರು ಹರಿಸಿದ ಸಂದರ್ಭ
ಕಾರಂಜಾ ಜಲಾಶಯದಿಂದ ನದಿಗೆ ನೀರು ಹರಿಸಿದ ಸಂದರ್ಭ
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯವರು ಬೀದರ್‌ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯವರು ಬೀದರ್‌ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ
ಬೀದರ್‌ನ ಹಾರೂರಗೇರಿ ಸಮೀಪದ ಮುಖ್ಯರಸ್ತೆಯಲ್ಲಿ ನೀರು ಹರಿದದ್ದು
ಬೀದರ್‌ನ ಹಾರೂರಗೇರಿ ಸಮೀಪದ ಮುಖ್ಯರಸ್ತೆಯಲ್ಲಿ ನೀರು ಹರಿದದ್ದು
ಬೀದರ್‌ ವಿಮಾನ ನಿಲ್ದಾಣ
ಬೀದರ್‌ ವಿಮಾನ ನಿಲ್ದಾಣ
ಬೀದರ್‌ ಡಿಸಿಸಿ ಬ್ಯಾಂಕ್‌
ಬೀದರ್‌ ಡಿಸಿಸಿ ಬ್ಯಾಂಕ್‌
ಷಾ ರಶೀದ್‌ ಅಹಮ್ಮದ್‌ ಖಾದ್ರಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದರು
ಷಾ ರಶೀದ್‌ ಅಹಮ್ಮದ್‌ ಖಾದ್ರಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT