ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ರೈತ ಸಂಘದ 45 ಕಾರ್ಯಕರ್ತರು ವಶಕ್ಕೆ

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಬೀಗಕ್ಕೆ ಯತ್ನ
Last Updated 2 ಸೆಪ್ಟೆಂಬರ್ 2021, 13:33 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರಿಗೆ ಬಾಕಿ ಹಣ ಕೊಡಿಸಬೇಕು ಎಂದು ಒತ್ತಾಯಿಸಿ ಗುರುವಾರ ಇಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಕರ್ನಾಟಕ ರಾಜ್ಯ ರೈತ ಸಂಘದ 45 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಕಚೇರಿಗೆ ಬೀಗ ಹಾಕುವ ಬಗ್ಗೆ ರೈತ ಸಂಘದ ಮುಖಂಡರು ಮೊದಲೇ ಘೋಷಣೆ ಮಾಡಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಬಳಿ ಬೆಳಿಗ್ಗೆಯಿಂದಲೇ ಜೀಪ್, ವ್ಯಾನ್‍ಗಳೊಂದಿಗೆ ನೂರಾರು ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ರೈತ ಸಂಘದ ಕಾರ್ಯಕರ್ತರು ಘೋಷಣೆ ಕೂಗುತ್ತ ಬಂದು ಕಚೇರಿಗೆ ಬೀಗ ಹಾಕಲು ಯತ್ನಿಸಿದಾಗ, ಪೊಲೀಸರು ಅವರನ್ನು ತಡೆದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.

ನಂತರ ಪೊಲೀಸರು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಮುಖಂಡರಾದ ಶೇಷರಾವ್ ಕಣಜಿ, ನಾಗಯ್ಯ ಹಿರೇಮಠ, ಬಾಬುರಾವ್ ಜೋಳದಾಪಕಾ, ಪ್ರಕಾಶ ಬಾವಗೆ, ಪ್ರವೀಣ್ ಕುಲಕರ್ಣಿ, ಸತ್ಯವಾನ್ ಪಾಟೀಲ, ಸಿದ್ದಣ್ಣ ಭೂಶೆಟ್ಟಿ, ಗುರುಲಿಂಗಪ್ಪ ಮೇಲ್ದೊಡ್ಡಿ, ಸುಮಂತ ಗ್ರಾಮಲೆ, ರಿಯಾಜ್ ಪಟೇಲ್, ಸಿದ್ರಾಮಪ್ಪ ಬಾಲಕುಂದಾ ಸೇರಿ 45 ಜನರನ್ನು ವಶಕ್ಕೆ ಪಡೆದು ವ್ಯಾನ್‍ಗಳಲ್ಲಿ ಜಿಲ್ಲಾ ಪೊಲೀಸ್ ಕವಾಯತು ಮೈದಾನಕ್ಕೆ ಕರೆದುಕೊಂಡು ಹೋದರು. ಸಂಜೆ ಅವರನ್ನು ಬಿಡುಗಡೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಜಿಲ್ಲೆಯ ಜನಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು/ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹ 2,400 ಬೆಲೆ ನಿಗದಿಪಡಿಸಲಾಗಿತ್ತು. ಆದರೆ, ಜಿಲ್ಲೆಯ ಕಾರ್ಖಾನೆಗಳು ಟನ್‍ಗೆ ₹ 1,950 ಮಾತ್ರ ಪಾವತಿಸಿವೆ. ಹೀಗಾಗಿ ₹ 450 ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ 18 ದಿನಗಳಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸಿದ್ರಾಮಪ್ಪ ಆಣದೂರೆ ಹಾಗೂ ದಯಾನಂದ ಸ್ವಾಮಿ ಸಿರ್ಸಿ ತಿಳಿಸಿದರು.

ಸಚಿವರು ಬೇಡಿಕೆಗೆ ಸ್ಪಂದಿಸದ ಕಾರಣ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಕಚೇರಿಗೆ ಬೀಗ ಹಾಕಲು ಯತ್ನಿಸಿದಾಗ ಪೊಲೀಸರು ತಡೆದು ವಶಕ್ಕೆ ಪಡೆದರು. ಆದರೆ, ಸಕ್ಕರೆ ಕಾರ್ಖಾನೆಗಳು ಕಬ್ಬು ಬಾಕಿ ಹಣ ಪಾವತಿ ಮಾಡುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಸಚಿವೆ ಕರಂದ್ಲಾಜೆ ಧರಣಿ ಸ್ಥಳಕ್ಕೆ ಭೇಟಿ ನೀಡಲಿ

ಬೀದರ್‌ಗೆ ಶುಕ್ರವಾರ ಭೇಟಿ ನೀಡಲಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ರೈತರ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಅಳಲು ಆಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಒತ್ತಾಯಿಸಿದ್ದಾರೆ. ಸಚಿವೆ ಧರಣಿ ಸ್ಥಳಕ್ಕೆ ಭೇಟಿ ಕೊಡದಿದ್ದರೆ, ಅವರು ಸಭೆ ನಡೆಸಲಿರುವ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT