ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಂಜಾದಲ್ಲಿ 5 ಟಿಎಂಸಿ ಅಡಿ ನೀರು ಭರ್ತಿ

ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ಮಾಂಜ್ರಾ ನದಿ; ದಿನವಿಡೀ ಬಿಡುವು ಕೊಡದ ಮಳೆ
Last Updated 13 ಅಕ್ಟೋಬರ್ 2020, 13:46 IST
ಅಕ್ಷರ ಗಾತ್ರ

ಬೀದರ್: ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆದರೂ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದಲ್ಲಿ ಒಂದೂ ವರೆ ಟಿಎಂಸಿ ಅಡಿ ಸಹ ನೀರು ಸಂಗ್ರಹ ವಾಗಿರಲಿಲ್ಲ. ನಗರದ ಜನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಗಂಡಾಂತರ ಕಾದಿದೆ ಎನ್ನುವ ಆತಂಕದಲ್ಲೇ ಇದ್ದರು. ಆದರೆ, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದಾಗಿ ಜಲಾಶಯ ದಲ್ಲಿ 5 ಟಿಎಂಸಿ ಅಡಿ ನೀರು ಸಂಗ್ರಹವಾಗಿರುವುದು ಜನರಿಗೆ ನೆಮ್ಮದಿ ತಂದಿದೆ.

7.691 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕಾರಂಜಾ ಜಲಾಶಯದಲ್ಲಿ ಕಳೆದ ಆಗಸ್ಟ್‌ 20ರಂದು ಕೇವಲ 1.128 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಮಂಗಳವಾರ 5 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 24 ಗಂಟೆಗಳ ಅವಧಿಯಲ್ಲಿ 439.86 ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯ ಶೇಕಡ 65.06ರಷ್ಟು ಭರ್ತಿಯಾಗಿದೆ.

ಬಸವಕಲ್ಯಾಣದ ಮುಲ್ಲಾಮಾರಿ ಜಲಾಶಯ ತುಂಬಿದ್ದು, 0.749 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 24 ಗಂಟೆಗಳಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ 465 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. 0.9 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಚುಳಕಿನಾಲಾ ಜಲಾಶಯವೂ ಭರ್ತಿಯಾಗಿದೆ. ಏಳು ಕ್ರಸ್ಟ್‌ ಗೇಟ್‌ಗಳ ಪೈಕಿ ಎರಡು ಗೇಟ್‌ಗಳಿಂದ ನೀರು ಹೊರಗೆ ಹರಿಸಲಾಗುತ್ತಿದೆ.

ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಉಮರ್ಗಾ ಹಾಗೂ ಉದಗಿರ ತಾಲ್ಲೂಕಿನಲ್ಲಿರುವ ತಗರಖೇಡಾ, ಔರಾದ್‌ (ಎಸ್‌), ಗಂಜರಗಾದ ಬ್ಯಾರೇಜ್‌ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಮಾಂಜ್ರಾ ಹಾಗೂ ತೇರಣಾ ನದಿಗಳು ತುಂಬಿ ಹರಿಯುತ್ತಿವೆ.

ಲಾತೂರ್‌ ಜಿಲ್ಲೆಯಲ್ಲಿ ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಎಲ್ಲ ಬ್ಯಾರೇಜ್‌ಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ತುಂಬಿರುವ ಬ್ಯಾರೇಜ್‌ಗಳಿಂದ ಯಾವುದೇ ಸಂದರ್ಭದಲ್ಲಿ ನೀರು ಹರಿ ಬಿಡುವ ಸಾಧ್ಯತೆ ಇದೆ. ನದಿ ದಂಡೆಯ ಗ್ರಾಮಗಳ ನಿವಾಸಿಗಳು ನದಿಗಳಿಗೆ ತೆರಳಬಾರದು. ಜೀವ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮಹಾರಾಷ್ಟ್ರದ ಕಂದಾಯ ಇಲಾಖೆಯ ಅಧಿಕಾರಿಗಳು ಕಮಲನಗರ ತಾಲ್ಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT