ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: 55 ಮಂದಿಗೆ ಪಾಸಿಟಿವ್ ದೃಢ, 8 ಜನ ಸಾವು

ಬ್ರಿಮ್ಸ್ ಕೋವಿಡ್ ಪ್ರಯೋಗಾಲಯಕ್ಕೆ ಬೀಗ
Last Updated 6 ಜುಲೈ 2020, 16:52 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಮತ್ತೆ ಎಂಟು ಮಂದಿ ಮೃತಪಟ್ಟಿದ್ದಾರೆ. ಬ್ರಿಮ್ಸ್‌ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ತಲಾ ಇಬ್ಬರು ಟೆಕ್ನಿಷಿಯನ್ ಸೇರಿ ಒಟ್ಟು 55 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಮವಾರ ಬ್ರಿಮ್ಸ್ ಆಸ್ಪತ್ರೆಯ ಕೋವಿಡ್ ಪ್ರಯೋಗಾಲಯಕ್ಕೆ ಬೀಗ ಹಾಕಲಾಗಿದೆ.

55 ಜನರಲ್ಲಿ ಬೀದರ್‌ನ 32, ಹುಮನಾಬಾದ್ ತಾಲ್ಲೂಕಿನ 11, ಬಸವಕಲ್ಯಾಣದ 5, ಔರಾದ್‌ ತಾಲ್ಲೂಕಿನಲ್ಲಿ 6 ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ಒಬ್ಬರು ಇದ್ದಾರೆ. 19 ಪುರುಷರು, 16 ಮಹಿಳೆಯರು, ನಾಲ್ವರು ಬಾಲಕಿಯರು ಹಾಗೂ ಇಬ್ಬರು ಬಾಲಕರಿಗೆ ಕೋವಿಡ್ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 799ಕ್ಕೆ ಏರಿದೆ. ಬ್ರಿಮ್ಸ್ ಆಸ್ಪತ್ರೆ ವಿಶೇಷ ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದ 561 ಜನ ಗುಣಮುಖರಾಗಿದ್ದಾರೆ. 238 ಪ್ರಕರಣಗಳು ಸಕ್ರೀಯವಾಗಿವೆ. ಜಿಲ್ಲೆಯಲ್ಲಿ ಕೋವಿಡ್ ವೈರಾಣುವಿನಿಂದ ಮೃತಪಟ್ಟವರ ಸಂಖ್ಯೆ 44ಕ್ಕೆ ತಲುಪಿದೆ. ಶನಿವಾರ ಆರು ಮಂದಿ, ಭಾನುವಾರ ಒಂಬತ್ತು ಹಾಗೂ ಸೋಮವಾರ ಎಂಟು ಮಂದಿ ಮೃತಪಟ್ಟಿದ್ದಾರೆ.

ಈವರೆಗೆ ಪ್ರಯೋಗಾಲಯಕ್ಕೆ ಕಳಿಸಿದ 41,086 ಪ್ರಕರಣಗಳ ಪೈಕಿ 37,408 ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. 2,879 ಜನರ ವೈದ್ಯಕೀಯ ಬರದಿ ಬರಬೇಕಿದೆ.

ಜೂನ್ 28 ರಂದು ಮೃತಪಟ್ಟ ಔರಾದ್‌ನ 90 ವರ್ಷದ ಪುರುಷ, ಜೂನ್ 28ರಂದು ಮೃತಪಟ್ಟ ಔರಾದ್ ತಾಲ್ಲೂಕಿನ 75 ವರ್ಷದ ಮಹಿಳೆ ಸಾವಿಗೆ ನಿಖರ ಕಾರಣ ಗೊತ್ತಾಗಿರಲಿಲ್ಲ. ಆದರೆ, ಇಂದಿನ ವರದಿಯಿಂದ ಕೋವಿಡ್ ಸೋಂಕಿನಿಂದಾಗಿಯೇ ಮೃತಪಟ್ಟಿರುವುದನ್ನು ಇಲಾಖೆ ದೃಢಪಡಿಸಿದೆ.

ಜೂನ್ 2 ರಂದು ಹೈದರಾಬಾದ್‌ನಿಂದ ಮರಳಿದ ಬೀದರ್‌ನ 70 ವರ್ಷದ ಪುರುಷ, 22 ವರ್ಷದ ಯುವಕ ಉಸಿರಾಟ ತೊಂದರೆಯಿಂದ ಹಾಗೂ 65 ವರ್ಷದ ಪುರುಷ ಅಧಿಕ ರಕ್ತದೊತ್ತಡದಿಂದ ಮೃತಪಟ್ಟಿದ್ದರು.
ಜುಲೈ 5 ರಂದು ಬೀದರ್‌ನ 64 ವರ್ಷದ ಪುರುಷ ಉಸಿರಾಟ ತೊಂದರೆಯಿಂದ, ಜುಲೈ 3ರಂದು 65 ವರ್ಷದ ಮಹಿಳೆ ಎದೆನೋವು, ಅಧಿಕ ರಕ್ತದೊತ್ತಡದಿಂದ ಸಾವಿಗೀಡಾಗಿದ್ದರು. ಬಸವಕಲ್ಯಾಣದ 40 ವರ್ಷದ ಪುರುಷ ಜೂನ್ 17ರಂದು ಕಲಬುರ್ಗಿಯಿಂದ ಬೀದರ್‌ಗೆ ಬಂದಿದ್ದರು. ಹೃದ್ರೋಗದಿಂದ ಜೂನ್ 25 ರಂದು ಮೃತಪಟ್ಟಿದ್ದರು.

ಮೃತರ ಅಂತ್ಯ ಸಂಸ್ಕಾರವನ್ನು ಕೋವಿಡ್ ನಿಯಮಾವಳಿ ಪ್ರಕಾರ ಮಾಡಲಾಗಿದೆಯೋ ಇಲ್ಲವೋ ಎನ್ನುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟಪಡಿಸಿಲ್ಲ. ಆದರೆ, ಮೃತರ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಎಲ್ಲರ ವರದಿ ಪಾಸಿಟಿವ್ ಬಂದಿದೆ.

ಸಮುದಾಯಕ್ಕೆ ಹರಡಿದ ಸೋಂಕು!

ಬೀದರ್: ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಈಗಲೂ ಕೆಲವರು ಖಾಸಗಿ ವಾಹನ ಹಾಗೂ ನಡೆದುಕೊಂಡು ಬರುತ್ತಿದ್ದಾರೆ. ಮದುವೆ ಸಮಾರಂಭಗಳಿಗೆ ಕಡಿವಾಣ ಬಿದ್ದಿಲ್ಲ. ಜಿಲ್ಲಾಡಳಿತ ಆದೇಶ ಹೊರಡಿಸಿ ಸುಮ್ಮನೆ ಕುಳಿತಿದೆ.

ಮದುವೆ ಸಮಾರಂಭಗಳಲ್ಲಿ ಜನ ಸಹಜವಾಗಿಯೇ ಪಾಲ್ಗೊಳ್ಳುತ್ತಿದ್ದಾರೆ. ಹೆಚ್ಚಿನವರು ಮಾಸ್ಕ್ ಸಹ ಧರಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಮದುವೆಗಳು ಅದ್ದೂರಿಯಾಗಿಯೇ ನಡೆದಿವೆ. ನಗರದಲ್ಲಿ ಕಲ್ಯಾಣ ಮಂಟಪಗಳು ಬಂದ್ ಆಗಿದ್ದರೂ ಮನೆಗಳ ಮುಂದೆ ಮಂಟಪಗಳನ್ನು ಹಾಕಿ ಮದುವೆ ಮಾಡಲಾಗುತ್ತಿದೆ.

ಬೀದರ್ ಗಡಿಯಲ್ಲಿ ಇರುವ ಕಾರಣ ನೆರೆಯ ರಾಜ್ಯಗಳಿಂದಲೂ ಜನ ಮದುವೆಗಳಿಗೆ ಬರುತ್ತಿದ್ದಾರೆ. ಒಬ್ಬ ಅಧಿಕಾರಿಯೂ ಮದುವೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಮೂವರಿಗೆ ಸೋಂಕು ತಗುಲಿದರೂ ಕಚೇರಿ ಬಂದ್ ಮಾಡಿಲ್ಲ.

ನಗರದಲ್ಲಿ ಈಚೆಗೆ ಮದುವೆ ಸಮಾರಂಭದಲ್ಲಿ ಕೋವಿಡ್ 19 ಸೋಂಕಿತ ವ್ಯಕ್ತಿಯೊಬ್ಬ ಪಾಲ್ಗೊಂಡಿದ್ದ. ಇದೇ ಸಮಾರಂಭದಲ್ಲಿ ಭಾಗವಹಿಸಿದ್ದ ಒಬ್ಬ ವೈದ್ಯ, ಟೆಕ್ನಿಷಿಯನ್ ಹಾಗೂ ಜೀಪ್ ಚಾಲಕರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲಾ ಮಟ್ಟದ ಅಧಿಕಾರಿಗಳು ಹಿಂದಿನ ಭಾನುವಾರ ಒಂದು ದಿನ ಮಾತ್ರ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಜವಾಬ್ದಾರಿಯಿಂದ ಕೈ ತೊಳೆದುಕೊಂಡರು. ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಒಂದು ಪ್ರೆಸ್ ನೋಟ್‌ ಸಹ ಬಂದಿಲ್ಲ. ಅಧಿಕಾರಿಗಳು ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT