ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಮೊದಲ ದಿನವೇ ಮಹಾರಾಷ್ಟ್ರಕ್ಕೆ 60 ಬಸ್‌ಗಳು

ತೆಲಂಗಾಣಕ್ಕೆ ಬಸ್‌ ಇಲ್ಲ, ಮಹಾರಾಷ್ಟ್ರಕ್ಕೆ ಪ್ರಯಾಣಿಕರಿಲ್ಲ
Last Updated 22 ಸೆಪ್ಟೆಂಬರ್ 2020, 14:45 IST
ಅಕ್ಷರ ಗಾತ್ರ

ಬೀದರ್‌: ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಮೊದಲ ಬಾರಿಗೆ ಬೀದರ್‌ ಜಿಲ್ಲೆಯಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 60 ಬಸ್‌ಗಳ ಸಂಚಾರ ಮಂಗಳವಾರ ಪುನರಾರಂಭವಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರ, ಮಿರಜ್, ಲಾತೂರ್, ನಾಂದೇಡ್, ಉದಗಿರ, ದೇಗಲೂರ್‌ಗೆ ಎನ್‌ಇಕೆಆರ್‌ಟಿಸಿ ಬಸ್‌ಗಳು ಪ್ರಯಾಣ ಬೆಳೆಸಿದವು. ಮೊದಲ ದಿನವೇ ಉಮರ್ಗಾ, ಉದಗಿರ ಹಾಗೂ ದೇಗುಲೂರ್‌ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗಿದವು.

ಸೊಲ್ಲಾಪುರ, ಲಾತೂರ್, ನಾಂದೇಡ್, ಮಿರಜ್‌ ಬಸ್‌ಗಳಲ್ಲಿ ಮಾತ್ರ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಲಾಕ್‌ಡೌನ್‌ ಪೂರ್ವದಲ್ಲಿ ಬಸ್‌ಗಳು ಸಂಚರಿಸುತ್ತಿದ್ದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲ ದಿನ ಬಸ್‌ ನಿರ್ವಾಹಕರು ಹಾಗೂ ಚಾಲಕರು ಪ್ರಯಾಣಿಕರಿಗಾಗಿ ಕಾಯಬೇಕಾಯಿತು.

ಮುಂಬೈ ಹಾಗೂ ಪುಣೆ ನಗರಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಅಧಿಕವಾಗಿರುವ ಕಾರಣ ಈ ನಗರಗಳಿಗೆ ಬಸ್‌ಗಳನ್ನು ಓಡಿಸುತ್ತಿಲ್ಲ. ಜಿಲ್ಲೆಯ ಅನೇಕ ಕಾರ್ಮಿಕರು ಇದೇ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಲಾಕ್‌ಡೌನ್‌ ಅವಧಿಯಲ್ಲಿ ಊರಿಗೆ ಬಂದ ಬಹಳಷ್ಟು ಜನ ಮತ್ತೆ ಕೆಲಸಕ್ಕೆ ಮರಳಿಲ್ಲ.

ಮಹಾರಾಷ್ಟ್ರ ಸಾರಿಗೆ ಬಸ್‌ಗಳು ಸಹ ಉದಗಿರ ಹಾಗೂ ಉಮರ್ಗಾದಿಂದ ಔರಾದ್ ಹಾಗೂ ಕಮಲನಗರದ ವರೆಗೆ ಬಂದು ಹೋಗುತ್ತಿವೆ. ಬೀದರ್ ಹಾಗೂ ಬಸವಕಲ್ಯಾಣಕ್ಕೆ ಬರುತ್ತಿಲ್ಲ. ಇಲ್ಲಿಯ ಜನರು ಖಾಸಗಿ ವಾಹನಗಳಲ್ಲಿ ನೆರೆಯ ಪಟ್ಟಣಗಳಿಗೆ ತೆರಳುತ್ತಿದ್ದಾರೆ.

ತೆಲಂಗಾಣ ಸರ್ಕಾರ ಮಾತ್ರ ಕರ್ನಾಟಕದ ಬಸ್‌ಗಳ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ರಾಜ್ಯದ ಬಸ್‌ಗಳು ಬೀದರ್‌ ತಾಲ್ಲೂಕಿನ ಗಡಿ ಗ್ರಾಮ ಭಂಗೂರ್‌ ವರೆಗೆ ಮಾತ್ರ ಹೋಗಿ ಬರುತ್ತಿವೆ. ತೆಲಂಗಾಣದ ಕೆಲ ಬಸ್‌ಗಳು ಭಂಗೂರ್‌ ವರೆಗೂ ಬರುತ್ತಿವೆ. ಕೆಲ ಬಸ್‌ಗಳು ಗಂಗ್ವಾರ್‌ ಚೌರಾಸ್ತಾದಲ್ಲೇ ನಿಂತು ಅಲ್ಲಿಂದ ಮರಳಿ ಹೈದರಾಬಾದ್‌ಗೆ ಹೊರಟಿವೆ. ಪ್ರಯಾಣಿಕರು ಆಟೊರಿಕ್ಷಾಗಳಲ್ಲಿ ಸಮೀಪದ ಪಟ್ಟಣಕ್ಕೆ ಹೋಗಿ ಅಲ್ಲಿಂದ ದೂರದ ಊರುಗಳಿಗೆ ತೆರಳುತ್ತಿದ್ದಾರೆ.

‘ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಬರುವ ದಿನಗಳಲ್ಲಿ ಅವರ ಬೇಡಿಕೆಗೆ ತಕ್ಕಂತೆ ಬಸ್‌ಗಳ ಸಂಚಾರ
ಹೆಚ್ಚಿಸಲಾಗುವುದು’ ಎಂದು ಎನ್‌ಇಕೆಆರ್‌ಟಿಸಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಆರ್‌.ಬಿ. ಜಾಧವ ತಿಳಿಸಿದ್ದಾರೆ.

ಬಸ್‌ಗಳು ಅಂತರರಾಜ್ಯ ಮಧ್ಯೆ ಪ್ರಯಾಣಿಸುತ್ತಿರುವ ಸುದ್ದಿ ತಿಳಿದು ಕೆಲವರು ಬೀದರ್‌ನ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಬಸ್‌ ನಿಲ್ದಾಣದ ನಿಯಂತ್ರಣ ಕೊಠಡಿಯಲ್ಲಿ ಹೈದರಾಬಾದ್‌ ಬಸ್‌ಗಳ ಬಗ್ಗೆಯೇ ವಿಚಾರಿಸಿದರು. ತೆಲಂಗಾಣ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಅನುಮತಿ ನೀಡಿದ ತಕ್ಷಣ ಬೀದರ್‌ನಿಂದ ಬಸ್‌ ಸಂಚಾರ ಆರಂಭಿಸಲಾಗುವುದು. ತುರ್ತು ಪ್ರಯಾಣಿಸಬೇಕಾದವರು ಭಂಗೂರ್‌ಗೆ ತೆರಳಿ ಅಲ್ಲಿಂದ ಹೈದರಾಬಾದ್‌ಗೆ ತೆರಳುವಂತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸಲಹೆ ನೀಡಿದರು.

ಬಸವಕಲ್ಯಾಣ ಹಾಗೂ ಹುಮನಾಬಾದ್‌ನಿಂದ ಬೀದರ್‌ ತಾಲ್ಲೂಕಿನ ಭಂಗೂರ್ ಗ್ರಾಮದ ವರೆಗೂ ಮಂಗಳವಾರ ಅನೇಕ ಬಸ್‌ಗಳು ಸಂಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT