ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಯೋಜನೆಗಳಿಂದ 80 ಕೋಟಿ ಜನಕ್ಕೆ ಲಾಭ: ಭಗವಂತ ಖೂಬಾ

Published 1 ಜುಲೈ 2023, 16:03 IST
Last Updated 1 ಜುಲೈ 2023, 16:03 IST
ಅಕ್ಷರ ಗಾತ್ರ

ಬೀದರ್‌: ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಅದರ ವಿವಿಧ ಯೋಜನೆಗಳಡಿ ಲಾಭ ಪಡೆದವರಿಗೆ ಜಾಗೃತಿ ಮೂಡಿಸಲು ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಶನಿವಾರ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿತ್ತು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ, ’ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ದೇಶದ 80 ಕೋಟಿ ಜನ ಲಾಭ ಪಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 9 ವರ್ಷಗಳ ನಿರಂತರ ಶ್ರಮದಿಂದ ಭಾರತ ಇಂದು ವಿಶ್ವಗುರುವಾಗುತ್ತಿದೆ. ದೇಶದ ಬಡವರು, ಮಹಿಳೆಯರು, ದೀನ ದಲಿತರು, ಹಿಂದುಳಿದ ವರ್ಗದವರು, ವಿದ್ಯಾರ್ಥಿಗಳು ಏಳಿಗೆ ಕಂಡಿದ್ದಾರೆ. ವಿರೋಧ ಪಕ್ಷಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ ಎಂದರು.

ಮೋದಿಯವರು ಮಹಿಳಾ ಸಶಕ್ತಿಕರಣಕ್ಕೆ ಒತ್ತು ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಶೌಚಕ್ಕೆ ಹೋಗಬೇಕಾದರೆ ನಸುಕಿನ ಜಾವದಲ್ಲಿ ಅಥವಾ ರಾತ್ರಿಯವರೆಗೆ ಕಾಯುವ ಪರಿಸ್ಥಿತಿ ಇತ್ತು. ಈ ಸಂಕಷ್ಟ ಕೊನೆಗಾಣಿಸಲು ಮೋದಿಯವರು ಕೇಂದ್ರ ಸರ್ಕಾರದ ಅನುದಾನದಿಂದ ದೇಶದ ಎಲ್ಲ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟು ಮಹಿಳೆಯರ ಸ್ವಾಭಿಮಾನ ಕಾಪಾಡಿದ್ದಾರೆ ಎಂದು ತಿಳಿಸಿದರು.

ಗರ್ಭಿಣಿಯರ ಆರೋಗ್ಯ ಹಾಗೂ ಜನಿಸುವ ಮಕ್ಕಳ ಆರೋಗ್ಯ ರಕ್ಷಣೆಗೆ ಮಾತೃವಂದನಾ ಯೋಜನೆಯಡಿ ₹5 ಸಾವಿರ ಪ್ರೋತ್ಸಾಹ ಧನ ಕೇಂದ್ರದಿಂದ ನೀಡಲಾಗುತ್ತಿದೆ. ಮುದ್ರಾ ಯೋಜನೆಯಡಿ ದೇಶದ 27.5 ಕೋಟಿ ಮಹಿಳೆಯರು ಲಾಭ ಪಡೆದಿದ್ದಾರೆ. ಕಡಿಮೆ ಬಡ್ಡಿ ದರದಲ್ಲಿ ಸ್ವ-ಸಹಾಯ ಗುಂಪುಗಳಿಗೆ ಸಾಲ ನೀಡಲಾಗುತ್ತಿದೆ. ಮಹಿಳಾ ಸ್ವ-ಸಹಾಯ ಸಂಘದ ತಾಯಂದಿರು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಕೊಡುಗೆಗಳೇ ಕಾರಣ ಎಂದರು.

ದೇಶದ ಜನರ ದಾರಿ ತಪ್ಪಿಸುತ್ತಿರುವ ವಿರೋಧ ಪಕ್ಷಗಳಿಗೆ 2024ರ ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ. ದೇಶವನ್ನು ಅಸ್ಥಿರಗೊಳಿಸಲು ಹೊರಟಿರುವ 18 ವಿರೋಧ ಪಕ್ಷಗಳನ್ನು ತಾವೆಲ್ಲರೂ ಅಸ್ಥಿರಗೊಳಿಸಬೇಕು. ಮೋದಿಯವರಿಗೆ ತಮ್ಮೆಲ್ಲರ ಬೆಂಬಲ ಇರಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಅರಿಹಂತ ಸಾವಳೆ, ವಿಜಯಕುಮಾರ ಪಾಟೀಲ ಗಾದಗಿ, ಮಂಡಲ ಅಧ್ಯಕ್ಷ ರಾಜು ಪೂಜಾರಿ, ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ, ಹಜ್ ಕಮಿಟಿ ಅಧ್ಯಕ್ಷ ರೌಫೋದ್ಧಿನ ಕಚೇರಿವಾಲೆ, ಮುಖಂಡರಾದ ವೀರು ದಿಗ್ವಾಲ್, ಲುಂಬಿಣಿ ಗೌತಮ, ರಾಜಶೇಖರ ನಾಗಮೂರ್ತಿ, ಸುರೇಶ ಮಾಶೆಟ್ಟಿ ಮತ್ತಿತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT