ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟಕಚಿಂಚೋಳಿ | ತರಕಾರಿ ಬೆಳೆದು ಯಶ ಕಂಡ ರೈತ

Published 6 ನವೆಂಬರ್ 2023, 5:35 IST
Last Updated 6 ನವೆಂಬರ್ 2023, 5:35 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಹೋಬಳಿಯ ಚಳಕಾಪುರ ವಾಡಿ ಗ್ರಾಮದ ರೈತ ಸಂದೀಪ ಜಾಧವ್ ತಮ್ಮ ಒಂದು ಎಕರೆ ಪ್ರದೇಶದಲ್ಲಿ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಕೈ ತುಂಬಾ ಆದಾಯ ಗಳಿಸುತ್ತಿದ್ದಾರೆ.

ರೈತ ಸಂದೀಪ್‌ಗೆ ಒಟ್ಟು 5 ಎಕರೆ ಭೂಮಿಯಿದೆ. ಅದರಲ್ಲಿ 2 ಎಕರೆಯಲ್ಲಿ ವಿವಿಧ ಬಗೆಯ ತರಕಾರಿ ಬೆಳೆಯುತ್ತಾರೆ. ಇವರ ಹೊಲಕ್ಕೆ ನೀರಾವರಿ ಸೌಲಭ್ಯವಿದ್ದು, ಇನ್ನುಳಿದ 3 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದಾರೆ. ಸಂದೀಪ ಜಾಧವ್ ಓದಿದ್ದು ಎಂಟನೇ ತರಗತಿ ಮಾತ್ರ. ಆದರೆ ಕೃಷಿಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಿರಂತರ 1ಎಕರೆಯಲ್ಲಿ ಕೊತ್ತಂಬರಿ, ಸಬ್ಬಸಗೆ, ಮೆಂತೆ ಸೊಪ್ಪು ಸೇರಿದಂತೆ ಕಾಲಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುತ್ತಾರೆ. ಓದಿದ್ದು ಕಡಿಮೆಯಾದರೂ ಕೃಷಿ ಜ್ಞಾನ ಅವರಿಗಿದೆ.

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರಿಳಿತ ಸಾಮಾನ್ಯ. ಬಗೆ ಬಗೆಯ ತರಕಾರಿ ಬೆಳೆಯುವುದರಿಂದ ಒಂದು ತರಕಾರಿ ದರ ಇಳಿದರೂ, ಇನ್ನೊಂದು ತರಕಾರಿಗೆ ಬೆಲೆ ಸಿಗುತ್ತದೆ. ಇದರಿಂದ ನಷ್ಟದ ಪ್ರಮಾಣ ಕಡಿಮೆ. ಅಲ್ಲದೇ ವರ್ಷಪೂರ್ತಿ ತರಕಾರಿ ಬೆಳೆಯುವುದರಿಂದ ಆಯಾ ಅವಧಿಯಲ್ಲಿ ಇರುವ ಬೆಲೆ ಸಿಗುತ್ತದೆ. ವರ್ಷಾಂತ್ಯಕ್ಕೆ ಸರಾಸರಿ ಬೆಲೆ ದೊರೆತು ಲಾಭದ ಪ್ರಮಾಣ ಹೆಚ್ಚಾಗುತ್ತದೆ.

ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕಡಿಮೆ ಭೂಮಿಯಲ್ಲಿ ಹೆಚ್ಚಿನ ಆದಾಯ ಪಡೆಯಬಹುದು.
ಸಂದೀಪ ಜಾಧವ್, ರೈತ

‘ಕೊತ್ತಂಬರಿ ಬೆಳೆಯುವ ಮೊದಲು ಭೂಮಿಯನ್ನು ಹದ ಮಾಡುತ್ತೇವೆ. ಉತ್ತಮವಾದ ಬೀಜ ಬಿತ್ತನೆ ಮಾಡುತ್ತೇವೆ. ಬೀಜ ಹಾಕಿದ ನಂತರ ನೀರು ಬೀಡಲಾಗುವುದು. ಒಂದು ವಾರದಲ್ಲಿ ಬೀಜ ಮೊಳಕೆ ಒಡೆದು ಸಸಿಯಾಗುತ್ತದೆ. 15 ದಿನಗಳ ನಂತರ ಕಳೆ ತೆಗೆಯುತ್ತೇವೆ. 35 ದಿನಗಳ ನಂತರ ಕೊತ್ತಂಬರಿ ಸೊಪ್ಪು ಮಾರಾಟಕ್ಕೆ ಬರುತ್ತದೆ' ಎನ್ನುತ್ತಾರೆ ರೈತ ಸಂದೀಪ.

ತರಕಾರಿ ಬೀಜಗಳನ್ನು ನಾಟಿ ಮಾಡಿದ 50 ದಿನಗಳಲ್ಲಿ ಕಟಾವು ಮಾಡುತ್ತೇವೆ. ಹೀಗೆ ಕಟಾವು ಮಾಡಿದ ತರಕಾರಿಯನ್ನು ತಾಲ್ಲೂಕು ಕೇಂದ್ರ ಭಾಲ್ಕಿ, ಹಳ್ಳಿಖೇಡ ಪಟ್ಟಣದಲ್ಲಿ ಮಾರಾಟ ಮಾಡುತ್ತೇವೆ. 'ಒಂದು ಕೊತ್ತಂಬರಿ ಕಟ್ಟಿಗೆ 10 ರೂಪಾಯಿಯಿಂದ 40 ರೂಪಾಯಿವರೆಗೆ ಬೆಲೆ ಸಿಗುತ್ತದೆ. ಸರಾಸರಿ 10 ರೂಪಾಯಿ ಬೆಲೆ ಗ್ಯಾರಂಟಿ. ಕೊತ್ತಂಬರಿಗೆ ರೋಗ ಬಾಧೆ ಕಡಿಮೆ.

'ಕೊತ್ತಂಬರಿ ಸೊಪ್ಪಿಗೆ ಬೇಸಿಗೆಯಲ್ಲಿ ರೇಟು ಹೆಚ್ಚು ಸಿಗುತ್ತದೆ. ಆದರೆ, ಆವಾಗ ಬೆಳೆ ಅಷ್ಟು ಚೆನ್ನಾಗಿ ಬರುವುದಿಲ್ಲ. ಅಕ್ಟೋಬರ್ ತಿಂಗಳಲ್ಲಿ ಬೆಳೆ ಚೆನ್ನಾಗಿ ಬರುತ್ತದೆ. ತಂಪಿನ ವಾತಾವರಣ ಈ ಬೆಳೆಗೆ ಅನುಕೂಲ' ಎನ್ನುತ್ತಾರೆ ರೈತ.

‘ಒಂದು ಎಕರೆಗೆ ಸುಮಾರು 1 ಕ್ವಿಂಟಾಲ್‌ ರಸಗೊಬ್ಬರ ಬೇಕು. ಭೂಮಿ ಹದ, ರಸಗೊಬ್ಬರ ಸೇರಿದಂತೆ ಇನ್ನಿತರ ಖರ್ಚು ಸೇರಿ ₹15 ಸಾವಿರ ಖರ್ಚಾಗುತ್ತದೆ. ಮುಂದಿನ ದಿನಗಳಲ್ಲಿ ₹50 ಸಾವಿರ ಲಾಭ ಸಿಗುವ ನಿರೀಕ್ಷೆ ಇದೆ' ಎನ್ನುತ್ತಾರೆ ರೈತ ಸಂದೀಪ.

ಒಂದು ಎಕರೆಯಲ್ಲಿ ಸವತೆ ಬೆಳೆಯುತ್ತಾರೆ. ನಾಟಿ ಮಾಡಿದ ಎರಡು ತಿಂಗಳಿಗೆ ಫಸಲು ಬರುತ್ತದೆ. ಮಳೆಗಾಲದಲ್ಲಿ ಸವತೆ ಬೆಳೆಗೆ ರೋಗ ಜಾಸ್ತಿ. ಇದರೆ ಜತೆ ಒಂದು ಎಕರೆಯಲ್ಲಿ ಹೀರೆಕಾಯಿ, ಈರುಳ್ಳಿ ಬೆಳೆಯುತ್ತೇವೆ. ಮೂರುವರೆ ತಿಂಗಳಲ್ಲಿ ಫಸಲು ಬರುತ್ತದೆ. ನಾಟಿ ಮಾಡಿದ 2 ತಿಂಗಳದ ನಂತರ ರೋಗ ನಿಯಂತ್ರಣಕ್ಕೆ ರಾಸಾಯನಿಕ ಔಷಧ ಸಿಂಪಡಣೆ ಮಾಡುತ್ತೇವೆ. ಎಲ್ಲ ಖರ್ಚು ತೆಗೆದು 3 ಎಕರೆಗೆ ₹3 ರಿಂದ 4 ಲಕ್ಷ ಆದಾಯ ವಿವಿಧ ಮೂಲಗಳಿಂದ ಬರುತ್ತದೆ' ಎನ್ನುತ್ತಾರೆ ರೈತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT