ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳಿಂದ ಹೊರ ಬರದ ಜನಪರವಾದ ಸಾಹಿತ್ಯ

ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ವಿಷಾದ
Last Updated 21 ಜನವರಿ 2021, 15:55 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ
ಬೀದರ್:
‘ಸಾಹಿತಿಗಳಿಂದ ಜನಪ್ರಿಯ ಸಾಹಿತ್ಯ ಮಾತ್ರ ರಚನೆಯಾಗುತ್ತಿದೆ. ಆದರೆ, ಜೀವಪರ ಹಾಗೂ ಜನಪರ ಸಾಹಿತ್ಯ ಹೊರ ಬರುತ್ತಿಲ್ಲ’ ಎಂದು ಕಲಬುರ್ಗಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್‌ ತಾಲ್ಲೂಕು ಘಟಕದ ವತಿಯಿಂದ ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗ ಮಂದಿರದಲ್ಲಿ ಗುರುವಾರ ನಡೆದ ನಡೆದ ತಾಲ್ಲೂಕು ಮಟ್ಟದ ಎರಡನೆಯ ಯುವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯ ಸಮ್ಮೇಳನಗಳು ಕಲೆ, ಸಾಹಿತ್ಯ, ಸಂಸ್ಕೃತಿಯ ಪ್ರತೀಕವಾಗಿದೆ. ಯಾವ ದೇಶದಲ್ಲಿ ಬಡತನ, ಹಸಿವು, ಹೋರಾಟ, ಸಂಘರ್ಷವಿದೆಯೋ? ಆ ದೇಶದಲ್ಲಿ ಗಟ್ಟಿ ಸಾಹಿತ್ಯ ಹುಟ್ಟುತ್ತದೆ ಎನ್ನುವುದು ಹಿರಿಯ ಆಂಗ್ಲ ಸಾಹಿತಿಗಳ ಅನಿಸಿಕೆಯಾಗಿದೆ. ಈಗಿನ ಯುವಪೀಳಿಗೆಗೆ ಬಡತನ, ಹಸಿವು, ಹೋರಾಟ ಮತ್ತು ಸಂಘರ್ಷದ ಗಂದ-ಗಾಳಿಯೂ ಗೊತ್ತಿಲ್ಲ. ಬಹುಶಃ ಈ ಕಾರಣಕ್ಕಾಗಿಯೇ ಯುವ ಪೀಳಿಗೆಯ ಜೀವನ ದಾರಿ ತಪ್ಪುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಯುವ ಸಮುದಾಯದವರು ಮೊಬೈಲ್, ವಾಟ್ಸ್‌ಆ್ಯಪ್, ಫೇಸ್‍ಬುಕ್, ಟ್ವಿಟ್ಟರ್, ಇಂಟರ್‌ನೆಟ್ ಗುಲಾಮರಾಗುತ್ತಿದ್ದಾರೆ.
ತನ್ನತನವನ್ನು ಕಳೆದುಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದ ಯುವ ಜನಾಂಗವನ್ನು ಸರಿದಾರಿಗೆ ತರವಂತಹ ಸಾಹಿತ್ಯ ರಚಿಸುವುದು ಇಂದಿನ ಅಗತ್ಯವಾಗಿದೆ’ ಎಂದರು.

‘ಬುದ್ಧ-ಬಸವ-ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ, ಜೀವನ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಜಿಲ್ಲೆಯ ಸಂಘ-ಸಂಸ್ಥೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ‘ಯುವ ಸಾಹಿತ್ಯ ಸಮ್ಮೇಳದ ಜತೆಗೆ ಮಕ್ಕಳ ಸಾಹಿತ್ಯ ಸಮ್ಮೇಳನವೂ ನಡೆಯಬೇಕು. ಕನ್ನಡ ಭಾಷಾ ಬೆಳವಣಿಗೆಗೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಿವೆ’ ಎಂದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಯುವ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಸವರಾಜ ಬಲ್ಲೂರ ಅವರು ಎರಡನೇ ಯುವ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಿಜಲಿಂಗ ರಗಟೆ ಅವರಿಗೆ ಪರಿಷತ್ ಧ್ವಜ ಹಸ್ತಾಂತರ ಮಾಡಿದರು.

ಧ್ವಜಾರೋಹಣ:
ಡಾ.ಚನ್ನಬಸವಪಟ್ಟದ್ದೇವರು ಜಿಲ್ಲಾ ರಂಗ ಮಂದಿರದ ಆವರಣದಲ್ಲಿ ಬೆಳಿಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ರಾಷ್ಟ್ರಧ್ವಜ, ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ಟಿ.ಎಂ.ಮಚ್ಛೆ ನಾಡಧ್ವಜ ಹಾಗೂ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ರಂಗ ಮಂದಿರದ ಆವರಣದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು. ಚಿತ್ರಕಲಾ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT