ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹೀನ್‌ ಶಾಲೆ ವಿವಾದಾತ್ಮಕ ನಾಟಕ ಪ್ರಕರಣ: ಬಾಲಕಿಗೆ ಪ್ರತ್ಯೇಕ ಪರೀಕ್ಷೆ

Last Updated 10 ಮಾರ್ಚ್ 2020, 2:55 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ಶಾಹೀನ್‌ ಅನುದಾನಿತ ಉರ್ದು ಪ್ರಾಥಮಿಕ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶಿಸಿದ ನಂತರ 6ನೇ ತರಗತಿಯ ವಾರ್ಷಿಕ ಪರೀಕ್ಷೆಯಿಂದ ದೂರ ಉಳಿದಿದ್ದ ಬಾಲಕಿಗೆ ಪ್ರತ್ಯೇಕ ಪರೀಕ್ಷೆ ನಡೆಸಲು ಶಾಹೀನ್‌ ಶಿಕ್ಷಣ ಸಂಸ್ಥೆ ನಿರ್ಧರಿಸಿದೆ.

ಜ.21ರಂದು ವಿವಾದಾತ್ಮಕ ನಾಟಕ ಪ್ರದರ್ಶನದ ನಂತರ ದೇಶದ್ರೋಹ ಪ್ರಕರಣ ದಾಖಲಿಸಿ ಬಾಲಕಿಯ ತಾಯಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಕಿಯನ್ನು ಅನೇಕ ಬಾರಿ ವಿಚಾರಣೆಗೊಳಪಡಿಸಿದ್ದರಿಂದ ಆಕೆ ಆಘಾತಕ್ಕೊಳಗಾಗಿ ಪರೀಕ್ಷೆಗೆ ಹಾಜರಾಗಿರಲಿಲ್ಲ.

ಇದಾದ ನಂತರ ಶಾಹೀನ್‌ ಶಿಕ್ಷಣ ಸಂಸ್ಥೆಯ ಸಿಇಒ ತೌಸಿಫ್‌ ಮಡಿಕೇರಿ ಅವರು

‘1ರಿಂದ 8ನೇ ತರಗತಿಯ ವರೆಗಿನ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಅವಕಾಶ ಇಲ್ಲ. ಕಲಿಕಾ ಗುಣಮಟ್ಟ ಸುಧಾರಿಸಲು ಪರೀಕ್ಷೆ ನಡೆಸಲಾಗುತ್ತದೆ. ಬಾಲಕಿಯ ಎಫ್‌ಎ–4 ಮರು ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದ್ದರು.

‘ಮಕ್ಕಳ ಹಕ್ಕು ಕಾಯ್ದೆ ಅಡಿಯಲ್ಲಿ ಅಂತಿಮ ಪರೀಕ್ಷೆಯಲ್ಲಿ ಹಾಜರಾತಿ ಅಥವಾ ಸಾಧನೆಯ ಹೊರತಾಗಿಯೂ ವಿದ್ಯಾರ್ಥಿನಿಯನ್ನು ಮುಂದಿನ ತರಗತಿಗೆ ಕಳಿಸಲು ಅವಕಾಶವಿದೆ. ವಿದ್ಯಾರ್ಥಿನಿಯ ಹಾಜರಾತಿಯಲ್ಲಿ ಸಮಸ್ಯೆ ಇಲ್ಲ. ಪ್ರತಿಭಾವಂತಳೂ ಆಗಿರುವ ಕಾರಣ ಸಂಸ್ಥೆಯಲ್ಲಿನ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ವಿದ್ಯಾರ್ಥಿನಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುವುದು.

‘6ನೇ ತರಗತಿಯ 4 ಪರೀಕ್ಷೆ ಕಳೆದ ತಿಂಗಳು ಮುಗಿದಿದೆ. ವಾರ್ಷಿಕ ಪರೀಕ್ಷೆ ಇನ್ನೂ ಆರಂಭವಾಗಿಲ್ಲ’ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌ ಸ್ಪಷ್ಟಪಡಿಸಿದ್ದಾರೆ.

‘30 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಉಳಿಸಿಕೊಂಡು ಬಂದಿರುವ ನಮ್ಮ ಶಾಲೆಯಲ್ಲಿ ಪ್ರಮಾದ ನಡೆದು ಹೋಗಿದೆ. ಇದೊಂದು ಸಣ್ಣ ತಪ್ಪು ಎಂದು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ, ದೇಶದ್ರೋಹದಂತಹ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ’ ಎಂದು ಹೇಳಿದ್ದಾರೆ.

‘ಪೊಲೀಸರು ಪದೇ ಪದೇ ವಿಚಾರಣೆ ನಡೆಸಿದ್ದರಿಂದ ಗಾಬರಿಗೊಂಡು ಪರೀಕ್ಷೆಗೆ ಹಾಜರಾಗಿರಲಿಲ್ಲ ಎಂದು ಬಾಲಕಿ ಕ್ಲಾಸ್‌ ಟೀಚರ್‌ಗೆ ಹೇಳಿದ್ದಳು. ಬಾಲಕಿಯ ತಾಯಿ ನಜಮುನ್ನಿಸಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಮರು ಪರೀಕ್ಷೆಗೆ ಅವಕಾಶ ಕಲ್ಪಿಸುವ ವಿಷಯ ತಿಳಿದು ಬಾಲಕಿ ಖುಷಿಯಾಗಿದ್ದಾಳೆ’ ಎಂದು ತಿಳಿಸಿದ್ದಾರೆ.

‘ರಾಷ್ಟ್ರೀಯ ಏಕತೆ ನಮ್ಮ ಸಂಸ್ಥೆಯ ಉದ್ದೇಶಗಳಲ್ಲೊಂದಾಗಿದೆ. ನಮ್ಮ ಸಂಸ್ಥೆಯಲ್ಲಿ ಎಲ್ಲ ಸಮುದಾಯದವರಿಗೂ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ಸಂಸ್ಥೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಆಡಳಿತ ಮಂಡಳಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇರುವುದನ್ನು ಅಲ್ಲಗಳೆಯುವಂತಿಲ್ಲ’ ಎಂದು ಹೇಳಿದ್ದಾರೆ.

ಮುಖ್ಯಶಿಕ್ಷಕಿ ಸೇವೆಗೆ

ದೇಶದ್ರೋಹ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ನಂತರ ಮುಖ್ಯಶಿಕ್ಷಕಿ ಫರೀದಾಬೇಗಂ ಅವರನ್ನು ನಿಯಮದಂತೆ ಅಮಾನತುಗೊಳಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರ ಅಮಾನತು ಆದೇಶ ವಾಪಸ್‌ ಪಡೆಯಲಾಗಿದ್ದು, ಅವರು ಸೇವೆಗೆ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT