ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಉತ್ಸವ | ಅದ್ಧೂರಿ ಪಾರಂಪರಿಕ ನಡಿಗೆಗೆ ಉತ್ಸಾಹದ ಸ್ಪರ್ಶ

Last Updated 6 ಜನವರಿ 2023, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ‘ಬೀದರ್ ಉತ್ಸವ’ದ ಅಂಗವಾಗಿ ಬೀದರ್‌ನ ಬರೀದ್‌ಶಾಹಿ ಉದ್ಯಾನದಿಂದ ಕೋಟೆ ಆವರಣದ ವರೆಗೆ ಶುಕ್ರವಾರ ಪಾರಂಪರಿಕ ನಡಿಗೆ ಅದ್ಧೂರಿಯಾಗಿ ನಡೆಯಿತು. ವೀರಗಾಸೆ, ಹಗಲು ವೇಷ ಕಲಾವಿದರು ಸಾಂಪ್ರದಾಯಿಕ ನೃತ್ಯದ ಮೂಲಕ ನಡಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರಲ್ಲಿ ಉತ್ಸಾಹ ತುಂಬಿದರು.

ಎನ್‌ಸಿಸಿ ಕೆಡೆಟ್‌ಗಳು, ಸ್ಕೌಟ್ ಮತ್ತು ಗೈಡ್ಸ್, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ನಡಿಗೆಯಲ್ಲಿ ಹುರುಪಿನಿಂದ ಪಾಲ್ಗೊಂಡರು. ಸರ್ಕಾರಿ ನೌಕರರು ಬೀದರ್‌ ಉತ್ಸವ ಎಂದು ಬರೆದಿದ್ದ ಟೀಶರ್ಟ್‌ಗಳನ್ನು ಹಾಕಿಕೊಂಡಿದ್ದರು. ಕೆಲ ಶಾಲೆಗಳ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಾಗೂ ನಾಡ ಧ್ವಜ ಹಿಡಿದು ಜಯಘೋಷ ಮೊಳಗಿಸಿದರು.

ರಾಜಕೀಯ ಮುಖಂಡರು ಸಾರ್ವಜನಿಕರತ್ತ ಕೈಬೀಸುತ್ತ ಗಮನ ಸೆಳೆಯಲು ಪ್ರಯತ್ನಿಸಿದರು. ಸಾರ್ವಜನಿಕರು ಸಹ ಚುನಾಯಿತ ಪ್ರತಿನಿಧಿಗಳತ್ತ ಕೈಬೀಸಿ ಶುಭ ಹಾರೈಸಿದರು. ಮೆರವಣಿಗೆ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸಂಚಾರ ಒತ್ತಡ ಹೆಚ್ಚಾಗದಂತೆ ಮಾರ್ಗಗಳನ್ನು ಬದಲಿಸಲಾಗಿತ್ತು.

ಇದಕ್ಕೂ ಮೊದಲು ನಗರದ ಬರೀದಶಾಹಿ ಉದ್ಯಾನದ ಆವರಣದಲ್ಲಿ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಸೈನಿಕ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು.

ನಡಿಗೆಯು ಗುರುನಾನಕ ಗೇಟ್, ಮಡಿವಾಳ ವೃತ್ತ, ರೋಟರಿ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ನಯಾಕಮಾನ್, ಚೌಬಾರಾ ಮಾರ್ಗವಾಗಿ ಐತಿಹಾಸಿಕ ಕೋಟೆ ಆವರಣಕ್ಕೆ ಬಂದು ಸಮಾರೋಪಗೊಂಡಿತು.

ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ, ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ ಬಾಬು, ಬಿಜೆಪಿ ಮುಖಂಡರಾದ. ಸೂರ್ಯಕಾಂತ ನಾಗಮಾರಪಳ್ಳಿ. ಗುರುನಾಥ ಕೊಳ್ಳೂರ. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ‌ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬೀದರ್‌ ಉತ್ಸವದ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ
ಬೀದರ್:
ಇಲ್ಲಿಯ ಕೋಟೆ ಆವರಣದಲ್ಲಿ ಜನವರಿ 7 ರಿಂದ ಮೂರು ದಿನ ನಡೆಯಲಿರುವ ಬೀದರ್ ಉತ್ಸವದ ಸಿದ್ಧತೆಯನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ ಬಾಬು ಪರಿಶೀಲಿಸಿದರು.

ಮುಖ್ಯ ವೇದಿಕೆ, ವೇದಿಕೆ ಮುಂಭಾಗದಲ್ಲಿ ಗಣ್ಯರು ಕುಳಿತುಕೊಳ್ಳುವ ಸ್ಥಳ, ಸಾರ್ವಜನಿಕರಿಗೆ ಮಾಡಲಾದ ವ್ಯವಸ್ಥೆ ಹಾಗೂ ಸುರಕ್ಷತಾ ವ್ಯವಸ್ಥೆಯನ್ನು ವೀಕ್ಷಿಸಿ ಅಧಿಕಾರಿಗಳು ಮೂರು ದಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕೋಟೆ ಆವರಣದೊಳಗೆ ಈಗಾಗಲೇ ಮಕ್ಕಳ ಆಟದ ಮೇಳ ಶುರುವಾಗಿದೆ. ಬೀದರ್‌ನ ಭೂಮರಡ್ಡಿ ಕಾಲೇಜು ಆವರಣದಲ್ಲಿ ಹಾಟ್‌ ಏರ್‌ ಬಲೂನ್ ಹಾಗೂ ಹೆಲಿಕಾಪ್ಟರ್‌ ಬಂದು ಇಳಿದಿದೆ. ನಗರದ ಜನವಾಡ ರಸ್ತೆಯಲ್ಲಿರುವ ಝೀರಾ ಕನ್ವೆನ್ಷನ್‌ ಹಾಲ್‌ ಆವರಣದಲ್ಲಿ ಪ್ಯಾರಾ ಮೋಟರಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಸಂಜೆ ಉತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ 20 ನಿಮಿಷ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಉತ್ಸವದಲ್ಲಿ ಪಾಲ್ಗೊಂಡ ಜನತೆ ಆಕಾಶದಲ್ಲಿ ಮೂಡಿ ಬರುವ ಬೆಂಕಿ ಚಿತ್ತಾರದ ಆನಂದ ಅನುಭವಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT