ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷಿಯಾದಿಂದ ಯುವಕನ ಕರೆ ತಂದ ಕೇಂದ್ರ ಸಚಿವ

ನಕಲಿ ಏಜೆಂಟರಿಂದ ಮೋಸ ಹೋಗಿ ಜೈಲು ಸೇರಿದ್ದ ಶರಣಪ್ಪ
Last Updated 17 ಡಿಸೆಂಬರ್ 2022, 14:49 IST
ಅಕ್ಷರ ಗಾತ್ರ

ಬೀದರ್: ನಕಲಿ ಏಜೆಂಟರಿಂದ ವಿಸಾ ಪಡೆದು, ಉದ್ಯೋಗ ಅರಸಿ ಮಲೇಷಿಯಾಕ್ಕೆ ತೆರಳಿ ಮೋಸ ಹೋಗಿ, ಜೈಲು ಸೇರಿದ್ದ ಜಿಲ್ಲೆಯ ಯುವಕರೊಬ್ಬರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಪ್ರಯತ್ನದಿಂದಾಗಿ ತವರಿಗೆ ಮರಳಿದ್ದಾರೆ.

ಭಾಲ್ಕಿ ತಾಲ್ಲೂಕಿನ ಸಿದ್ಧೇಶ್ವರ ಗ್ರಾಮದ ಶರಣಪ್ಪ ವೈಜಿನಾಥ ತಾಯ್ನೆಲಕ್ಕೆ ವಾಪಸ್ಸಾದವರು. ಯುವಕ ಮೋಸ ಹೋದ ವಿಷಯ ಗಮನಕ್ಕೆ ಬಂದ ಕೂಡಲೇ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ ಭಗವಂತ ಖೂಬಾ ಅವರು, ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಯುವಕನನ್ನು ಜೈಲಿನಿಂದ ಬಿಡುಗಡೆಗೊಳಿಸಿ, ಸ್ವದೇಶಕ್ಕೆ ಕರೆ ತಂದಿದ್ದಾರೆ.

ಶನಿವಾರ ನಗರದ ಸಚಿವರ ಗೃಹ ಕಚೇರಿಗೆ ಬಂದ ಯುವಕ ಹಾಗೂ ಕುಟುಂಬದ ಸದಸ್ಯರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ವಿದೇಶದಿಂದ ಕರೆ ತಂದು ನನಗೆ ಹೊಸ ಜೀವನ ನೀಡಿದ್ದೀರಿ. ನಮ್ಮ ಕುಟುಂಬ ನಿಮಗೆ ಚಿರಋಣಿಯಾಗಿದೆ ಎಂದು ಶರಣಪ್ಪ ಹೇಳಿದರು.
ನಮ್ಮಲ್ಲಿಯೇ ಮಾಡಲು ಬಹಳಷ್ಟು ಉದ್ಯೋಗಗಳು ಇವೆ. ಆದರೂ, ವಿದೇಶಕ್ಕೆ ಹೋಗಲು ನಿಶ್ಚಯಿಸಿದ್ದಲ್ಲಿ ಏಜೆಂಟರ ಬಗ್ಗೆ ಸರಿಯಾಗಿ ತಿಳಿದುಕೊಂಡೇ ಹೋಗಬೇಕು. ನಕಲಿ ಏಜೆಂಟರಿಂದ ಮೋಸ ಹೋಗಬಾರದು ಎಂದು ಖೂಬಾ ಸಲಹೆ ಮಾಡಿದರು.

ಶರಣಪ್ಪ ಅವರಂಥ ಇನ್ನೂ ಎರಡು ಪ್ರಕರಣಗಳು ತಮ್ಮ ಬಳಿ ಇವೆ. ಅವರೂ ಮಲೇಷಿಯಾ ಜೈಲಿನಲ್ಲಿದ್ದಾರೆ. ಅವರನ್ನೂ ಆದಷ್ಟು ಬೇಗ ತಾಯ್ನಾಡಿಗೆ ಕರೆ ತರಲಾಗುವುದು ಎಂದು ತಿಳಿಸಿದರು.

ಯುವಕನ ತಂದೆ ವೈಜಿನಾಥ, ಸಂಬಂಧಿ ವಿಜಯ ದೇಶಮುಖ ಇದ್ದರು.

ಪಾಕಿಸ್ತಾನ್ ಸಚಿವ ಅಯೋಗ್ಯ: ಖೂಬಾ ಕಟು ಟೀಕೆ

ಬೀದರ್: ಪಾಕಿಸ್ತಾನ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತು ಮಾತನಾಡಲು ಅಯೋಗ್ಯ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಟುವಾಗಿ ಟೀಕಿಸಿದ್ದಾರೆ.

ಜರ್ದಾರಿ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕೇವಲವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಪಾಕಿಸ್ತಾನ್ ದರಿದ್ರ ದೇಶ. ಸದ್ಯದ ಆಡಳಿತದಿಂದ ಅಲ್ಲಿನ ಜನರಿಗೆ ಸರಿಯಾಗಿ ಊಟ, ಬಟ್ಟೆ ಸಿಗುತ್ತಿಲ್ಲ. ಆ ದೇಶ ಕಂಡ ಕಂಡ ದೇಶಗಳ ಮುಂದೆ ಮಂಡಿಯೂರಿ ಸಹಾಯ ಪಡೆದು, ಬದುಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ್ ಪ್ರಜೆಗಳು ಭಾರತದ ಧ್ವಜ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿರುವುದನ್ನು ಪಾಕಿಸ್ತಾನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ವಿಶ್ವಮಟ್ಟದಲ್ಲಿ ಆ ದೇಶಕ್ಕೆ ಯಾವ ಮರ್ಯಾದೆ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ಭಾರತದ ಪ್ರಜೆಗಳ ಬಗ್ಗೆ ಮಾತನಾಡಲು ಯೋಗ್ಯರಲ್ಲದ ಪಾಕಿಸ್ತಾನದ ರಾಜಕಾರಣಿಗಳು, ಪ್ರಧಾನಿ ಬಗ್ಗೆ ಮಾತನಾಡುವಾಗ ಯೋಚನೆ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT