ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌|ಗೈರು ಹಾಜರಿ: ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆ

ಡಾ.ಬಿ.ಆರ್‌ ಅಂಬೇಡ್ಕರ್‌ ಅವರ 67ನೇ ಮಹಾ ಪರಿನಿರ್ವಾಣ ದಿನಕ್ಕೆ ಗೈರು ಹಾಜರಿ
Published 6 ಡಿಸೆಂಬರ್ 2023, 12:57 IST
Last Updated 6 ಡಿಸೆಂಬರ್ 2023, 12:57 IST
ಅಕ್ಷರ ಗಾತ್ರ

ಬೀದರ್‌: ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಗರದಲ್ಲಿನ ಬಾಬಾ ಸಾಹೇಬರ ಮೂರ್ತಿ ಬಳಿ ಬುಧವಾರ ಬೆಳಿಗ್ಗೆ ಏರ್ಪಡಿಸಿದ್ದ ಗೌರವ ಸಮರ್ಪಣೆ ಹಾಗೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳ ಕ್ರಮವನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಧಿಕ್ಕಾರ, ಧಿಕ್ಕಾರ ಎಂದು ಘೋಷಣೆ ಕೂಗಿದರು.

ಬೆಳಿಗ್ಗೆ 9ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆಣದೂರ ವೈಶಾಲಿ ನಗರದ ವರಜ್ಯೋತಿ ಭಂತೆ, ಮಾಜಿಸಚಿವ ಬಂಡೆಪ್ಪ ಕಾಶೆಂಪುರ್‌ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಆಗಮಿಸಿದ್ದರು. ಆದರೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಬಂದಿರಲಿಲ್ಲ. ಇದು ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಮಾಡಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಧಿಕ್ಕಾರ.. ಧಿಕ್ಕಾರ.. ಎಂದು ಘೋಷಣೆಗಳನ್ನು ಕೂಗಿದರು.

ಘಟನೆಯ ವಿಷಯ ತಲುಪುತ್ತಿದ್ದಂತೆ ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಸ್ಥಳಕ್ಕೆ ಬಂದರು. ಅದಾದ ಕೆಲವು ನಿಮಿಷಗಳ ನಂತರ ಡಿಸಿ ಗೋವಿಂದ ರೆಡ್ಡಿ ಬಂದರು. ಅವರು ಬರುತ್ತಿದ್ದಂತೆ ಅಲ್ಲಿದ್ದವರು, ಗೈರಾದ ಬಗ್ಗೆ ಸ್ಪಷ್ಟೀಕರಣ ಕೊಡಬೇಕೆಂದು ಅವರ ಕೈಗೆ ಮೈಕ್‌ ಇಟ್ಟರು.

‘ಎಲ್ಲಾ ಶಾಲಾ, ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಮಹಾ ಪರಿನಿರ್ವಾಣ ದಿನ ಆಚರಿಸಬೇಕೆಂದು ಸರ್ಕಾರದ ಆದೇಶ ಇದೆಯೋ ಇಲ್ಲವೋ ಎಂದು ಪರಿಶೀಲಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಗೆ ತಿಳಿಸಲಾಗಿತ್ತು. ಅವರು ಪರಿಶೀಲಿಸಿ, ಆ ತರಹದ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಮಂಗಳವಾರ ರಾತ್ರಿಯೇ ತಿಳಿಸಿದ್ದರು. ಸರ್ಕಾರದಿಂದ ಯಾವುದೇ ನಿರ್ದೇಶನ ಬರದ ಕಾರಣ ನಾವು ಸುಮ್ಮನಾಗಿದ್ದೆವು. ಅದನ್ನು ಹೊರತುಪಡಿಸಿದರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಅಂಬೇಡ್ಕರ್‌ ಅವರು ರಚಿಸಿದ ಕಾನೂನಿನ ಅಡಿ ಕೆಲಸ ನಿರ್ವಹಿಸುತ್ತಿದ್ದೇವೆ. ಆ ಸ್ಪಷ್ಟತೆ ಇರಬೇಕು’ ಎಂದು ಗೋವಿಂದ ರೆಡ್ಡಿ ಹೇಳಿದರು.

‘ನಾನು ಹಾಗೂ ಎಸ್ಪಿಯವರು ಬಸವಕಲ್ಯಾಣದಲ್ಲಿ ನಿಗದಿಪಡಿಸಿದ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅದಕ್ಕೂ ಪೂರ್ವದಲ್ಲಿಇಲ್ಲಿಗೆ ಬರುವ ಕಾರ್ಯಕ್ರಮ ಇತ್ತು. ಏನೇ ಇರಲಿ ಅಂಬೇಡ್ಕರ್‌ ಅವರ ಶ್ರದ್ಧಾಂಜಲಿ ದಿನಾಚರಣೆಯ ಶುಭಾಶಯಗಳು’ ಎಂದು ಹೇಳಿದರು. ಅಲ್ಲಿದ್ದವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಶುಭಾಶಯಗಳು ಅಲ್ಲ, ಗೌರವ ನಮನಗಳು ಎಂದು ಹೇಳಬೇಕೆಂದರು. ಅದನ್ನು ಸರಿಪಡಿಸಿಕೊಂಡು ಗೌರವ ನಮನಗಳು ಎಂದು ಹೇಳಿದರು. ಪ್ರತಿ ಸಲ ನಮಗೆ ಶುಭಾಶಯಗಳು ಎಂದು ಹೇಳಿ ರೂಢಿಯಾಗಿದೆ. ಅಂಬೇಡ್ಕರ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದರು.

‘ಕಾನೂನಿನಲ್ಲಿ ಏನೇ ನಿಯಮ ಇರಲಿ, ಬಿಡಲಿ. ಆದರೆ, ದೇಶದ ಸಂವಿಧಾನ ರಚಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾರಣೀಕರ್ತರಾದ ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಅಲ್ಲಿದ್ದವರು ಹೇಳಿದರು.

ಮಾಜಿಸಚಿವ ಬಂಡೆಪ್ಪ ಕಾಶೆಂಪುರ್‌ ಮಾತನಾಡಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಬಹಳಷ್ಟು ಕಷ್ಟಪಟ್ಟು ಓದಿ, ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿ, ನಮ್ಮ ದೇಶದ ಸಂವಿಧಾನ ರಚಿಸಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ. ಸ್ಥಳಕ್ಕಾಗಮಿಸಿದರು. ಕೊನೆಯಲ್ಲಿ ಹಣ್ಣು, ಹಂಪಲ ವಿತರಿಸಲಾಯಿತು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌ ಹಾಗೂ ಇತರೆ ಶಾಸಕರು ಪಾಲ್ಗೊಂಡಿದ್ದರಿಂದ ಅವರು ಬಂದಿಲಿಲ್ಲ.

ಒಕ್ಕೂಟದ ಅಧ್ಯಕ್ಷ ಬಾಬು ಪಾಸ್ವಾನ, ಮುಖಂಡರಾದ ಅಮೃತರಾವ ಚಿಮಕೋಡೆ, ಬಸವರಾಜ ಮಾಳಗೆ, ಅಬ್ದುಲ್‌ ಮನ್ನಾನ್‌ ಸೇಠ್‌, ಸಂದೀಪ ಕಾಂಟೆ, ಶಿವಕುಮಾರ ನೀಲಿಕಟ್ಟಿ, ಶ್ರೀಪತರಾವ ದೀನೆ, ಅಶೋಕಕುಮಾರ ಮಾಳಗೆ ಸೇರಿದಂತೆ ಇತರರಿದ್ದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 67ನೇ ಮಹಾ ಪರಿನಿರ್ವಾಣದ ದಿನದ ಅಂಗವಾಗಿ ಏರ್ಪಡಿಸಿದ್ದ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಡಿಸಿ ಗೋವಿಂದ ರೆಡ್ಡಿ ಜಿಪಂ ಸಿಇಒ ಶಿಲ್ಪಾ ಎಂ. ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಸೇರಿದಂತೆ ಇತರರು ಪಾಲ್ಗೊಂಡಿದ್ದರು
ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 67ನೇ ಮಹಾ ಪರಿನಿರ್ವಾಣದ ದಿನದ ಅಂಗವಾಗಿ ಏರ್ಪಡಿಸಿದ್ದ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಡಿಸಿ ಗೋವಿಂದ ರೆಡ್ಡಿ ಜಿಪಂ ಸಿಇಒ ಶಿಲ್ಪಾ ಎಂ. ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಸೇರಿದಂತೆ ಇತರರು ಪಾಲ್ಗೊಂಡಿದ್ದರು
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿವಿಧೊದ್ದೇಶ ಸಂಘದಿಂದ ಬೀದರ್‌ನ ಹಾರೂರಗೇರಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ 67 ಜನ ರಕ್ತದಾನ ಮಾಡಿದರು.ಸಂಘದ ಅಧ್ಯಕ್ಷ ವಿನೋದಕುಮಾರ ಅಪ್ಪೆ ನಗರಸಭೆ ಸದಸ್ಯ ದಿಗಂಬರ ಮಡಿವಾಳ ಶಂಭುರಾವ್ ಸಾಗರ್ ಶಂಕರರಾವ್ ಮಾಳಗೆ ವಿಜಯಕುಮಾರ ಹೊಸಮನಿ ಅರ್ಜುನ ಹಾವೆ ಅರ್ಜುನ ಬನ್ನೇರ ರಾಮಚಂದ್ರ ಹಿಂದೊಡ್ಡಿ ಮಂಜುನಾಥ ಹಾವನೂರು ಮೊದಲಾದವರು ಇದ್ದರು
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿವಿಧೊದ್ದೇಶ ಸಂಘದಿಂದ ಬೀದರ್‌ನ ಹಾರೂರಗೇರಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ 67 ಜನ ರಕ್ತದಾನ ಮಾಡಿದರು.ಸಂಘದ ಅಧ್ಯಕ್ಷ ವಿನೋದಕುಮಾರ ಅಪ್ಪೆ ನಗರಸಭೆ ಸದಸ್ಯ ದಿಗಂಬರ ಮಡಿವಾಳ ಶಂಭುರಾವ್ ಸಾಗರ್ ಶಂಕರರಾವ್ ಮಾಳಗೆ ವಿಜಯಕುಮಾರ ಹೊಸಮನಿ ಅರ್ಜುನ ಹಾವೆ ಅರ್ಜುನ ಬನ್ನೇರ ರಾಮಚಂದ್ರ ಹಿಂದೊಡ್ಡಿ ಮಂಜುನಾಥ ಹಾವನೂರು ಮೊದಲಾದವರು ಇದ್ದರು
ಸಂವಹನದ ಕೊರತೆಯಿಂದ ಹೀಗಾಗಿದೆ. ನಾನು ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವೆ. 
–ಎಸ್‌.ಎಸ್‌. ಸಿಂಧೂ ಉಪನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ

‘ಭಾವನಾತ್ಮಕ ವಿಷಯದೊಂದಿಗೆ ಚೆಲ್ಲಾಟ ಬೇಡ’ ‘ಪ್ರತಿವರ್ಷ ಮಹಾಪರಿನಿರ್ವಾಣ ದಿನಕ್ಕೆ ದೇಶದ ರಾಷ್ಟ್ರಪತಿ ಪ್ರಧಾನಿ ಸೇರಿದಂತೆ ಎಲ್ಲರೂ ಗೌರವ ಸಲ್ಲಿಸುತ್ತಾರೆ. ಇದು ಭಾವನಾತ್ಮಕ ವಿಷಯ. ಇದು ಡಾ.ಬಿ.ಆರ್‌. ಅಂಬೇಡ್ಕರ್‌ ಅವರೊಬ್ಬರಿಗೆ ಸಂಬಂಧಿಸಿದ ವಿಷಯವಲ್ಲ. ಕೋಟಿ ಕೋಟಿ ಜನರ ಭಾವನಾತ್ಮಕ ವಿಷಯಗಳೊಂದಿಗೆ ಚೆಲ್ಲಾಟವಾಡಬಾರದು. 2006ರಲ್ಲಿ ಮನ್ನಾಏಖೇಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಒಂದು ಸಣ್ಣ ಘಟನೆಯಿಂದ ಇಡೀ ಕಲ್ಯಾಣ ಕರ್ನಾಟಕ ಹೊತ್ತಿ ಉರಿದಿದೆ. ನಮಗೆ ಯಾರಿಗೂ ಕರೆಸಿ ಗೌರವ ಪಡೆಯಬೇಕಿಲ್ಲ. ಇಡೀ ವಿಶ್ವ ಅಂಬೇಡ್ಕರ್‌ ಅವರನ್ನು ಗೌರವಿಸುತ್ತದೆ. ಮುಂದಿನ ದಿನಗಳಲ್ಲಿ ಬಸವೇಶ್ವರು ಸೇರಿದಂತೆ ಎಲ್ಲ ಮಹನೀಯರಿಗೂ ಅಪಮಾನವಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಇಂದಿನ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ತಿಳಿಸಿದ್ದೇವೆ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ ಅನೀಲಕುಮಾರ ಬೆಲ್ದಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT