ಬೀದರ್: ಪದವಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಪಟ್ಟಿ ನೀಡದೇ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಧೋರಣೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಆನಂತರ ವಿಶ್ವವಿದ್ಯಾಲಯದ ಕುಲಪತಿ ಹೆಸರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.
1984ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಗುಲಬರ್ಗಾ ವಿಶ್ವವಿದ್ಯಾಲಯ 42 ವರ್ಷ ಕಳೆದರೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರ ಬಗ್ಗೆ ಗಂಭೀರವಾಗಿಲ್ಲ. ಅಕ್ಷರ ದಾಸೋಹ ಮಾಡಬೇಕಾದ ವಿಶ್ವವಿದ್ಯಾಲಯ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಅಧೋಗತಿಗೆ ತಲುಪಿದೆ. ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಮೇಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಕೂಡ ವಿ.ವಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ವಿ.ವಿ. ಅಧಿಕಾರಿಗಳಿಗೆ ಮತ್ತು ಆಯಾ ವಿಭಾಗದ ನೌಕರಸ್ಥರಿಗೆ ಇದು ಖುಷಿಯ ವಿಚಾರವಾಗಿದೆ. ಭ್ರಷ್ಟಾಚಾರ ಬಲಿತು ಅಮಾಯಕ ವಿದ್ಯಾರ್ಥಿಗಳನ್ನು ಶೋಷಣೆಗೆ ನೂಕಿದೆ. ಆಗಸ್ಟ್ ಮೊದಲ ವಾರದಲ್ಲೇ ಪದವಿ ಪರೀಕ್ಷೆಗಳ ಫಲಿತಾಂಶ ಘೋಷಿಸಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಇದುವರೆಗೆ ಅಂಕಪಟ್ಟಿ ಕೈಸೇರಿಲ್ಲ ಎಂದು ದೂರಿದರು.
ಯಾವ ವಿಷಯದಲ್ಲಿ ಎಷ್ಟು ಅಂಕ ಗಳಿಸಿದ್ದಾರೆ, ಒಟ್ಟು ಎಷ್ಟು ಅಂಕಗಳು ಬಂದಿವೆ ಎಂಬ ಮಾಹಿತಿಯೂ ನೀಡಿಲ್ಲ. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡರಲ್ಲೂ ಅವರ ಫಲಿತಾಂಶ ತಿಳಿಯುತ್ತಿಲ್ಲ. ಈ ಸಂಬಂಧ ವಿದ್ಯಾರ್ಥಿಗಳು, ಅವರ ಪೋಷಕರು ಹಲವು ಸಲ ವಿ.ವಿ. ಅಧಿಕಾರಿಗಳಿಗೆ ವಿಷಯ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂದರು.
ಪದವಿ ಆರನೇ ಸೆಮಿಸ್ಟರ್ ಪರೀಕ್ಷೆ ಬರೆದವರು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬೇಕು. ಆದರೆ, ಅಂಕಪಟ್ಟಿಯೇ ಬರದ ಕಾರಣ ಪ್ರವೇಶ ಪಡೆಯಲಾಗುತ್ತಿಲ್ಲ. ಕೆಲ ವಿದ್ಯಾರ್ಥಿಗಳು 1,2,3, 4 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದಾರೆ. ಆದರೆ, ಇದುವರೆಗೆ ಯಾವ ಸೆಮಿಸ್ಟರ್‌ನ ಅಂಕಪಟ್ಟಿ ಅವರಿಗೆ ಸಿಕ್ಕಿಲ್ಲ. ಕೆಲ ವಿದ್ಯಾರ್ಥಿಗಳ ಅಂಕ ಪಟ್ಟಿಯಲ್ಲಿ ಶೂನ್ಯ ಅಂಕಗಳು ತೋರಿಸುತ್ತಿದೆ. ಮೂರು ವರ್ಷದ ಪದವಿಯಲ್ಲಿ ಒಟ್ಟು ಆರು ಸೆಮಿಸ್ಟರ್‌ಗಳಿವೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಹಿಂದಿನ ಸೆಮಿಸ್ಟರ್‌ಗಳ ಅಂಕಪಟ್ಟಿ ಬರದಿದ್ದರೂ ನಂತರದ ಸೆಮಿಸ್ಟರ್‌ನಲ್ಲಿ ಮುಂದುವರೆಸಲಾಗುತ್ತಿದೆ. ಆದರೆ 6ನೇ ಸೆಮಿಸ್ಟರ್ ಬರೆದವರು ಪಿ.ಜಿ. ಪ್ರವೇಶಕ್ಕೆ ಪರದಾಡುವಂತಾಗಿದೆ ಎಂದು ಗೋಳು ತೋಡಿಕೊಂಡರು.
ಹೀಗೆ ಒಂದಲ್ಲ ಎರಡಲ್ಲ ನಿತ್ಯ ನೂರಾರು ಸಮಸ್ಯೆಗಳು ವಿಶ್ವವಿದ್ಯಾಲಯದಲ್ಲಿ ಉದ್ಭವಿಸುತ್ತಿವೆ. ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಮಾಯಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿವೆ. ಇದಕ್ಕೆಲ್ಲ ಸರ್ಕಾರವೂ ಹೊಣೆ ಎಂದು ಆರೋಪಿಸಿದರು.
ಒಂದು ವೇಳೆ ಸರ್ಕಾರ ಸೂಕ್ತ ಮತ್ತು ಕಠಿಣ ಕ್ರಮಗಳನ್ನು ವಿಶ್ವವಿದ್ಯಾಲಯದ ಅಧಿಕಾರಿ, ಸಿಬ್ಬಂದಿ ಮೇಲೆ ಕೈಗೊಂಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿಲ್ಲ. ವಿ.ವಿಯಿಂದ ಸರಿಯಾದ ಸಮಯಕ್ಕೆ ಪರೀಕ್ಷೆಗಳು ನಡೆಸುತ್ತಿಲ್ಲ. ಉದ್ದೇಶಪೂರ್ವಕವಾಗಿ ಅಂಕಪಟ್ಟಿಯಲ್ಲಿ ಶೂನ್ಯ ಅಂಕಗಳನ್ನು ನೀಡಲಾಗುತ್ತಿದೆ. ಆವಕ ಶಾಖೆಯಲ್ಲಿ ಕೊಟ್ಟ ಅರ್ಜಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪದವಿ ಪರೀಕ್ಷೆ ಕೇಂದ್ರಗಳಿಗೆ ಅರ್ಹತೆ ಇಲ್ಲದ ಉಪನ್ಯಾಸಕರನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕ ಮಾಡಲಾಗುತ್ತಿದೆ. ಹೊಸ ಪದವಿ ಕಾಲೇಜುಗಳಿಗೆ ನಿಯಮ ಮೀರಿ ಅರ್ಹತೆ ಮತ್ತು ಸೌಲಭ್ಯಗಳನ್ನು ಇಲ್ಲದಿದ್ದರೂ ಅನುಮತಿ ನೀಡಲಾಗುತ್ತಿದೆ. ಇದೆಲ್ಲ ಸರಿಪಡಿಸಲು ಸರ್ಕಾರ ತುರ್ತು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಬಿವಿಪಿ ತಾಲ್ಲೂಕು ಸಂಚಾಲಕ ಮಹೇಶ ಕೌರ್, ನಗರ ಕಾರ್ಯದರ್ಶಿ ಆನಂದ ಅಮದಾಬಾದೆ, ನಗರ ಸಹ ಕಾರ್ಯದರ್ಶಿಗಳಾದ ಪವನ, ನಾಗರಾಜ, ಹೋರಾಟ ಪ್ರಮುಖ ಅಭಿಷೇಕ ಶಂಭು, ವಿದ್ಯಾರ್ಥಿನಿ ಪ್ರಮುಖ ರಚನಾ, ಕಲಾಮಂಚ ಪ್ರಮುಖ ಮಮತಾ, ಕಾಲೇಜು ಕಮಿಟಿ ವಿದ್ಯಾರ್ಥಿಗಳಾದ ಆತೀಶ ವರ್ಮಾ, ಚಾಂದ ಪಾಶಾ, ನಾಗೇಶ, ಪಾಂಡುರಂಗ, ಮಮತಾ ವಸಂತ, ಕಾವೇರಿ, ಪೂಜಾ, ಅಪೂರ್ವ, ಪ್ರಾರ್ಥನಾ, ಸುಕನ್ಯಾ, ಅಂಬಿಕಾ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.