ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ಸ್ಮಾರ್ಟ್‌ ಕಾರ್ಡ್‌ ಡಿಎಲ್‌ ವಿತರಣೆಗೆ ಕ್ರಮ

ಸಾರಿಗೆ ಅದಾಲತ್‌ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿಕೆ
Last Updated 29 ಜನವರಿ 2021, 15:21 IST
ಅಕ್ಷರ ಗಾತ್ರ

ಬೀದರ್‌: ‘ತಾಂತ್ರಿಕ ಕಾರಣಗಳಿಂದಾಗಿ ಸ್ಮಾರ್ಟ್‌ ಕಾರ್ಡ್‌ ಡ್ರೈವಿಂಗ್‌ ಲೈಸೆನ್ಸ್‌ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ವಾಹನ ಚಾಲಕರಿಗೆ ತೊಂದರೆಯಾಗದಂತೆ ತಾತ್ಕಾಲಿಕ ಡ್ರೈವಿಂಗ್‌ ಲೈಸೆನ್ಸ್‌ ತಕ್ಷಣ ವಿತರಿಸಲಾಗುತ್ತಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿದರು.

ನಗರದ ಆರ್‌ಟಿಒ ಕಚೇರಿಯಲ್ಲಿ ನಡೆದ ಸಾರಿಗೆ ಅದಾಲತ್‌ನಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

‘ಚಾಲನಾ ಪರವಾನಗಿ (ಡಿಎಲ್‌)ಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಂತ ಹಂತವಾಗಿ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಬೇಡಿಕೆ ಇರುವಷ್ಟು ಕಾರ್ಡ್‌ಗಳು ತಕ್ಷಣಕ್ಕೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಕಾರ್ಡ್‌ ವಿತರಣೆಯಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬವಾಗುತ್ತಿದೆ. ಶೀಘ್ರದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದರು.

ಆರ್‌ಟಿಒ ಕಚೇರಿಗೆ ಸ್ಮಾರ್ಟ್ ಕಾರ್ಡ್‌ಗಳೇ ಬಂದಿಲ್ಲ. ಹೀಗಾಗಿ ಅರ್ಜಿ ಹಾಕಿರುವ ಸಾವಿರಾರು ವಾಹನ ಚಾಲಕರು ಹೊಸ ಲೈಸೆನ್ಸ್‌ ಪಡೆಯಲು ಪರದಾಡುವಂತಾಗಿದೆ. ಕೇವಲ ಡಿಎಲ್ ಅಷ್ಟೇ ಅಲ್ಲದೇ ಹೊಸ ವಾಹನಗಳ ರಿಜಿಸ್ಟ್ರೇಷನ್ ಸರ್ಟಿಫಿಕೆಟ್ ಪಡೆಯುವುದು ಕೂಡ ಕಷ್ಟವಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಅಧಿಕಾರಿಗಳ ಗಮನಕ್ಕೆ ತಂದರು.

ಪ್ರಾದೇಶಿಕ ಸಾರಿಗೆ ಇಲಾಖೆ ಆನ್‌ಲೈನ್‌ನಲ್ಲೇ ನೋಂದಣಿ, ಹೆಸರು ಬದಲಾವಣೆ ವ್ಯವಸ್ಥೆ ಮಾಡಿದೆ. ಆದರೆ, ನನ್ನ ಸಂಬಂಧಿಯ ಹೆಸರಲ್ಲಿರುವ ಹಳೆಯ ಕಾರು ನನ್ನ ಹೆಸರಿಗೆ ದಾಖಲಿಸಿಕೊಳ್ಳಬೇಕೆಂದರೆ ಆಗುತ್ತಿಲ್ಲ. ಪ್ರತಿ ಬಾರಿಯೂ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ಅದನ್ನು ಸರಿಪಡಿಸಿಕೊಡಬೇಕು ಎಂದು ಇನ್ನೊಬ್ಬರು ಮನವಿ ಮಾಡಿದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಿವಶಂಕರ ಅವರು ತಕ್ಷಣ ಸಂಬಂಧಪಟ್ಟ ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ ವಿವರಣೆ ಪಡೆದರು. ಅವರಿಗೆ ಸ್ಥಳದಲ್ಲೇ ನೋಂದಣಿ ಮಾಡಿಸಿಕೊಟ್ಟರು.

ಡಿಎಲ್‌ಗೆ ಅರ್ಜಿ ಸಲ್ಲಿಕೆ, ವಾಹನ ನೋಂದಣಿ, ಹೆಸರು ಬದಲಾವಣೆ, ವಿಳಾಸ ಬದಲಾವಣೆಗಾಗಿ ನಿತ್ಯ ನೂರಾರು ಜನ ಬರುವುದರಿಂದ ಸಹಜವಾಗಿಯೇ ಕೆಲಸದ ಒತ್ತಡ ಹೆಚ್ಚಿದೆ. ಆದರೂ ಪ್ರಾದೇಶಿಕ ಕಚೇರಿಗೆ ಬರುವ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿವಶಂಕರ ತಿಳಿಸಿದರು.

ಕಪ್ಟು ಪಟ್ಟಿಗೆ ಸೇರಿಸಿರುವ ವಾಹನವನ್ನು ಬಳಸಿಕೊಳ್ಳಲು ಅನುಮತಿ ಕೊಡಬೇಕೆಂದು ಒಬ್ಬರು ಕೋರಿದರೆ, ಇನ್ನೊಬ್ಬರು ವಾಹನ–4ಗೆ ಖಜಾನೆಯಲ್ಲಿ ಡಿಡಿ ಮೂಲಕ ಶುಲ್ಕ ಸಂದಾಯ ಮಾಡುವಾಗ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಅದನ್ನು ಸರಳೀಕರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮೋಟರ್‌ ವೆಹಿಕಲ್‌ ಇನ್‌ಸ್ಪೆಕ್ಟರ್ ಎಚ್‌.ಎಂ. ಮಂಜುನಾಥ. ಕಚೇರಿ ಅಧೀಕ್ಷಕ ಖಾದ್ರಿ ಖಿರಾನಿಬಾಷಾ, ವೀರೇಂದ್ರ ಎಂ., ವಿಶ್ವನಾಥ, ನಾಗೇಶ ಹಾಗೂ ಕಲಿಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT