ಗುರುವಾರ , ಅಕ್ಟೋಬರ್ 29, 2020
28 °C
ಕುಶಲಕರ್ಮಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಹೇಳಿಕೆ

ಕುಶಲಕರ್ಮಿಗಳ ಅಭಿವೃದ್ಧಿಗೆ ಶೀಘ್ರ ಕ್ರಿಯಾಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಬಿದರಿ ಕಲೆಯಂತಹ ಕಸುಬನ್ನೇ ನಂಬಿ ಬದುಕು ನಡೆಸುತ್ತಿರುವ ಕುಶಲಕರ್ಮಿಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಿದರಿ ಕುಶಲಕರ್ಮಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಕುಶಲಕರ್ಮಿಗಳಿಗೆ ₹ 1 ಲಕ್ಷ ಸಹಾಯಧನ ಒದಗಿಸಲು ಅವಕಾಶ ಇದೆ. ಬಿದರಿ ಕಲಾಕೃತಿಗಳಿಗೆ ವಿಶೇಷ ವೆಬ್‍ಸೈಟ್ ರಚನೆ, ಕಲಾವಿದರಿಗೆ ಮಾಸಾಶನ ಅದಾಲತ್, ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸಿ ಬಿದರಿ ಕಲೆಯ ಕಸುಬುದಾರರಿಗೆ ಅನುಕೂಲ ಮಾಡಿ ಕೊಡಲಾಗುವುದು’ ಎಂದು ಹೇಳಿದರು.

ಬೀದರ್‌ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ಬರ್ ಖಾನ್, ಕೌಶಲ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಕಾಂತ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಇದಕ್ಕೂ ಮೊದಲು ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭ ಅವರು ಜಿಲ್ಲಾಧಿಕಾರಿ ರಾಮಚಂದ್ರನ್ ವಿಡಿಯೊ ಸಂವಾದ ನಡೆಸಿ ಬಿದರಿ ಕಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಿರಿಯಾ, ಇರಾನ್ ಮೂಲದ ಕರಕುಶಲ ಕಲೆಯೇ ಬಿದರಿ ಕಲೆಗೆ ಪ್ರೇರಣೆಯಾಗಿದೆ. ಈ ಕಲೆಗೆ ಉಮರ್‌ಖಯಾಮ್, ರುಬಾಯಿಯತ್ ಶಿಲ್ಪ ಮಾದರಿಯ ಪರ್ಷಿಯನ್ ಸಂಪ್ರದಾಯ ಬೆಸೆದುಕೊಂಡಿದೆ ಎಂದು ಅನೇಕ ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಬೀದರ್‌ ಹಾಗೂ ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಅನೇಕ ಕುಶಲಕರ್ಮಿಗಳು ನೆಲೆಸಿದ್ದಾರೆ. ಈ ಕಸುಬನ್ನು ನಂಬಿ ಸಾವಿರಾರು ಜನರು ಬಿದರಿ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕುಶಲಕರ್ಮಿಗಳು ಮಾಹಿತಿ ಒದಗಿಸಿದರು.

ರೆಹಮತ್ ಉಲ್ಲಾ ಹುಸೇನಿ ರೇಕುಳಗಿ ಅವರು ಮಾತನಾಡಿ, ಬಿದರಿ ಕಲಾಕೃತಿಗಳ ಕಾರ್ಯವು ಅತ್ಯಂತ ಸೂಕ್ಷ್ಮ. ಕುಶಲಕರ್ಮಿಗಳಲ್ಲಿ ಬಹುಬೇಗ ದೃಷ್ಟಿ ದೋಷ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಕುಶಲಕರ್ಮಿಗಳ ನೇತ್ರ ಚಿಕಿತ್ಸೆಗೆ ಸರ್ಕಾರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

2,000 ಬಿದರಿ ಕಲಾಕೃತಿಗಳ ಪ್ರದರ್ಶನಕ್ಕೆ ಸ್ಥಳಾವಕಾಶ ಕಲ್ಪಿಸುವ ಹಾಗೂ ಪಾರಂಪರಿಕ ಬಿದರಿ ಕಲೆಯನ್ನು ಪಠ್ಯಕ್ಕೆ ಸೇರಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ರತ್ನಪ್ರಭ ತಿಳಿಸಿದರು.

ಬಿದರಿ ಕಲಾಕೃತಿಗಳ ತಯಾರಿಕೆಗೆ ವಿಶೇಷ ತರಬೇತಿ ನೀಡಲು ಹಾಗೂ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ಕಲಾಕೃತಿಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ, ಬಿದರಿ ಕಲಾವಿದರಿಗೆ ಸಹಾಯಧನ ಒದಗಿಸುವುದು, ಹೊಸ ತಲೆಮಾರಿನ ಕಲಾವಿದರಿಗೆ ಬಿದರಿ ಕಲಾಕೃತಿಗಳ ಪರಿಚಯ, ವಿಶೇಷ ತರಬೇತಿಕುಶಲಕರ್ಮಿಗಳಿಗೆ ಜಮೀನು ನೀಡುವುದು, ಬಿದರಿ ವಸ್ತು ಸಂಗ್ರಹಾಲಯ, ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಬಿದರಿ ಕಲಾಕೃತಿಗಳ ಪ್ರದರ್ಶನ ಹಾಗೂ ಪ್ರಚಾರಕ್ಕೆ ವ್ಯವಸ್ಥೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಬಿದರಿ ಆರ್ಟಿಸಂ ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಸಲಿಯೊದ್ದಿನ್, ಕಾರ್ಯದರ್ಶಿ ಸಯಿದ್ ಮಹಮ್ಮದ್, ಸದಸ್ಯರಾದ ಉಬೆದುಲ್ಲಾ ಖಾನ್, ಮಹಮ್ಮದ್ ಸಲಾವುದ್ದೀನ್, ಸುನೀಲಕುಮಾರ, ಅಬ್ದುಲ್ ಸಮದ್, ಮಹಮ್ಮದ್ ನದೀಮ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.