ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಕೊರತೆ: ಭೂಮಿ ಹದಗೊಳಿಸುವತ್ತ ರೈತರ ಚಿತ್ತ

ಗುರುಪ್ರಸಾದ ಮೆಂಟೆ
Published 25 ಮೇ 2024, 7:34 IST
Last Updated 25 ಮೇ 2024, 7:34 IST
ಅಕ್ಷರ ಗಾತ್ರ

ಹುಲಸೂರ: ವರ್ಷದಿಂದ ಉತ್ತಮ ಮಳೆ ಕಾಣದ ತಾಲ್ಲೂಕಿನಲ್ಲಿ ಈ ವರ್ಷಾರಂಭದಿಂದಲೂ ಮಳೆ ಕೊರತೆಯಾಗಿದೆ. ಅಪರೂಪಕ್ಕೊಮ್ಮೆ ಸಣ್ಣದಾಗಿ ಮಳೆ ಸುರಿದರೂ ಅದು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿಲ್ಲ.

ಈ ನಡುವೆ ತಾಲ್ಲೂಕಿನಾದ್ಯಂತ ಕೃಷಿ ಚುಟುವಟಿಕೆಗಳು ಗರಿಗೆದರಿವೆ. ಮಳೆಯಾಶ್ರಿತ ಬೇಸಾಯ ಮಾಡುವ ರೈತರು ತಮ್ಮ ಜಮೀನುಗಳಲ್ಲಿದ್ದ ಜೋಳ, ತೊಗರಿ ಕೂಳೆ ಹಾಗೂ ಕಳೆ ಗಿಡ ತೆಗೆದಿದ್ದಾರೆ. ಭೂಮಿಗೆ ಕೊಟ್ಟಿಗೆ ಗೊಬ್ಬರ ಹರಡಿದ್ದು, ಭೂಮಿ ಹದಗೊಳಿಸಲು ಮುಂದಾಗಿದ್ದಾರೆ.

ಹುಲಸೂರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭರಣಿ ಮಳೆಗೆ ತೊಗರಿ, ಸೋಯಾ ಅವರೆ,ಉದ್ದು, ಹೆಸರುಕಾಳು ಬಿತ್ತನೆ ಮಾಡುವುದು ವಾಡಿಕೆ. ಈಗಾಗಲೇ ರೈತರು ಟ್ರಾಕ್ಟರ್ ಮೂಲಕ ಜಮೀನು ಉಳುಮೆ ಮಾಡಿಸುತ್ತಿದ್ದಾರೆ. ಈ ನಡುವೆ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಹಾಗೂ ದರವೂ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ 19,334 ಸಾವಿರ ಹೆಕ್ಟೇರ್ ಕೃಷಿ ಜಮೀನಿದ್ದು, ಇವುಗಳಲ್ಲಿ 5,016 ಹೆಕ್ಟೇ‌ರ್ ಜಮೀನಿನಲ್ಲಿ ತೊಗರಿ, 12,825 ಹೆಕ್ಟೇರ್ ಜಮೀನಿನಲ್ಲಿ ಸೋಯಾ ಅವರೆ, 793 ಹೆಕ್ಟೇರ್ ಜಮೀನಿನಲ್ಲಿ ಹೆಸರು, 297 ಹೆಕ್ಟೇರ್ ಜಮೀನಿನಲ್ಲಿ ಉದ್ದು, 343 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಸಲಾಗುತ್ತದೆ.

ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ರೈತರಿಗೆ ಸೋಯಾ ಅವರೆ- ಜೆಎಸ್ 335, ತೊಗರಿಯಲ್ಲಿ ಜಿಆರ್‌ಜಿ 811, ಹೆಸರು ಬಿಜಿಎಸ್ 9 ,ತಳಿಯ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ, ನಿಗದಿತ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ.

’ಕಬ್ಬನ್ನು ಅಲ್ಲಲ್ಲಿ ಬೆಳೆಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ತೀವ್ರ ಬಿಸಿಲಿನ ಪರಿಣಾಮವಾಗಿ ಈಗಾಗಲೇ ಬೆಳೆದ ಕಬ್ಬಿಗೆ ನೀರಿನ ಕೊರತೆ ಉಂಟಾಗಿ ಬೆಳೆ ಕುಂಠಿತವಾಗಿದೆ. ರೈತರು ಕಬ್ಬಿನಲ್ಲಿಯ ಕಳೆ, ಕಸ ತೆಗೆದು ರಸಗೊಬ್ಬರ ಕೊಟ್ಟು ಕಬ್ಬಿನ ಬೆಳೆ ಸುಧಾರಿಸಲು ಸಾಧ್ಯವಾಗುತ್ತದೆ' ಎಂದು ಸಹಾಯಕ ಕೃಷಿ ನಿರ್ದೇಶಕ ಮಾರ್ತಾಂಡ ಮಾಚಕೂರಿ' ಪ್ರಜಾವಾಣಿಗೆ'ಮಾಹಿತಿ ನೀಡಿದರು.

'ಬಿತ್ತನೆಗೆ ಮೊದಲು ಬೀಜಗಳಿಗೆ ಕೆಲ ಔಷಧಗಳಿಂದ ಬೀಜೋಪಚಾರ ಮಾಡುವುದು ಅಗತ್ಯ. ಅದರಿಂದ ಬಹಳಷ್ಟು ಪ್ರಯೋಜನ ಇರುವುದನ್ನು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದರೂ ರೈತರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ' ಎಂದು ಬೀಜೋಪಚಾರದಿಂದ ಆಗುವ ಪ್ರಯೋಜನ ಕುರಿತು ಕೃಷಿ ಅಧಿಕಾರಿ ಶ್ರೀಶೈಲ ಹೇಳಿದರು.

’ಉಳುಮೆ ಮತ್ತು ಬಿತ್ತನೆ ಕಾರ್ಯಗಳಿಗೆ ಪೂರಕವಾಗುವಂತೆ ಹದವಾದ ಮಳೆ ಇನ್ನೂ ಬರಬೇಕಿದೆ. ವರ್ಷದಿಂದ ಮಳೆ ಇಲ್ಲದೆ ಎದುರಾದ ಭೀಕರ ಬರದಿಂದ ರೈತರು ಈಗಾಗಲೇ ಕಂಗಾಲಾಗಿದ್ದಾರೆ. ಈ ಸಲವೂ ಮಳೆ ಕೈ ಕೊಟ್ಟರೆ ರೈತರ ಪಾಡು ಹೇಳತೀರದು' ಎಂದು ರೈತ ಮುಖಂಡ ದೇವೇಂದ್ರ ಹಲಿಂಗೆ ತಿಳಿಸಿದರು.

ನಕಲಿ ಬೀಜ ಹಾವಳಿ ತಡೆಯಿರಿ: ’ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದೆ ರೈತರು ನಷ್ಟ ಅನುಭವಿಸಿದ್ದಾರೆ. ರೋಹಿಣಿ ಮಳೆ ಉತ್ತಮವಾಗಿ ಸುರಿಯಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಬಿತ್ತನೆಗಾಗಿ ಹೊಲಗಳನ್ನು ಹದಗೊಳಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ನಕಲಿ ಬಿತ್ತನೆ ಬೀಜ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು  ಪ್ರಗತಿಪರ ರೈತ ನಾಗೇಶ ಚೌರೆ ಆಗ್ರಹಿಸಿದ್ದಾರೆ.

ಟ್ರ್ಯಾಕ್ಟರ್ ಉಳುಮೆ ಬಾಡಿಗೆಯು ದುಬಾರಿಯಾಗಿದ್ದು ಬರದ ಹಿನ್ನೆಲೆ ರೈತರಿಗೆ ಹೆಚ್ಚುವರಿ ಹೊರೆಯಾಗಿದೆ. ಆದರೂ ಕೃಷಿ ಕೆಲಸ ಬಿಡಲಾಗುವುದಿಲ್ಲ. ಈ ಬಾರಿ ಉತ್ತಮ ಮಳೆಯಾದರೆ ಉತ್ತಮ ಬೆಳೆಯು ರೈತರ ಕೈ ಸೇರುತ್ತದೆ.
–ದೇವೇಂದ್ರ ಹಲಿಂಗೆ, ರೈತ ಮುಖಂಡ
ಕೃಷಿ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ಹೆಸರು ಉದ್ದು ತೊಗರಿ ಹಾಗೂ ಸೋಯಾ ಅವರೆ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡಲಾಗುತ್ತಿದೆ. ಜೂನ್‌ ಮೊದಲ ವಾರದೊಳಗೆ ರೈತರಿಗೆ ವಿತರಿಸಲಾಗುವುದು. ಭೂಮಿಯಲ್ಲಿ ಉತ್ತಮ ತೇವಾಂಶ ಇದ್ದರೆ ಮಾತ್ರ ರೈತರು ಬಿತ್ತನೆ ಕಾರ್ಯ ಆರಂಭಿಸಬೇಕು.
–ಮಾರ್ತಾಂಡ ಮಾಚಕೂರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಮಳೆ ಇಲ್ಲದೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ತಾಲ್ಲೂಕಿನ ರೈತರು ಬರದಿಂದ ತತ್ತರಿಸುತ್ತಿದ್ದರೂ ಸರ್ಕಾರ ಕೆಲವೇ ಕೆಲವು ರೈತರಿಗೆ ಮಾತ್ರ ಬರ ಪರಿಹಾರ ಹಣ ನೀಡಿದೆ. ಸರ್ಕಾರ ಎಲ್ಲ ರೈತರಿಗೂ ಪರಿಹಾರ ನೀಡಬೇಕು.
–ಮಲ್ಲಿಕಾರ್ಜುನ್ ಸ್ವಾಮಿ, ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಬೀದರ್
ರೈತರು ಮುಂಗಾರು ಬೆಳೆ ಬಿತ್ತನೆಗೆ ಹೊಲವನ್ನು ಸಜ್ಜುಗೊಳಿಸುತ್ತಿದ್ದಾರೆ.ಗೊಬ್ಬರವನ್ನು ಆಯಾ ಕೃಷಿ ಪತ್ತಿನ ಸಹಕಾರ ಸಂಘದಿಂದ ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತಿದೆ.
ಓಂಕಾರ ಪಟ್ನೆ, ಅಧ್ಯಕ್ಷ ಪಿಕೆಪಿಎಸ್ ಹುಲಸೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT