ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ‘ಬೆಳಕು', ಅಲ್ಲಮಪ್ರಭು ‘ಬೆರಗು'

ಅಲ್ಲಮ ಪ್ರಭುದೇವರ ಜಯಂತಿ ಕಾರ್ಯಕ್ರಮದಲ್ಲಿ ರಮೇಶ ಮಠಪತಿ ಅಭಿಮತ
Last Updated 15 ಏಪ್ರಿಲ್ 2021, 13:48 IST
ಅಕ್ಷರ ಗಾತ್ರ

ಬೀದರ್: ಬಸವಣ್ಣ ವಿಶ್ವದ ಬೆಳಕಾದರೆ, ಅಲ್ಲಮ ಪ್ರಭುದೇವರು ಬೆರಗು ಎಂದು ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ರಮೇಶ ಮಠಪತಿ ನುಡಿದರು.

ಶ್ರೀ ಬಸವೇಶ್ವರ ಹಿರಿಯ ನಾಗರಿಕರ ವೇದಿಕೆ ವತಿಯಿಂದ ನಗರದ ಶಿವನಗರದ ಲಿಂಗಾಯತ ಸಮೃದ್ಧಿ ಸಹಕಾರ ಸಂಘದ ಪ್ರಾಂಗಣದಲ್ಲಿ ಆಯೋಜಿಸಿದ್ದ ಯುಗಾದಿ ಹಬ್ಬ ಹಾಗೂ ಅಲ್ಲಮ ಪ್ರಭುದೇವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಅಲ್ಲಮ ಪ್ರಭುದೇವರು ವಿಶ್ವದ ಮೊದಲ ಸಂಸತ್ ಎನಿಸಿರುವ ಅನುಭವ ಮಂಟಪದ ಪ್ರಪ್ರಥಮ ಅಧ್ಯಕ್ಷರು ಎನ್ನುವುದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂಥದ್ದು. ಅವರ ವಚನಗಳು ಬದುಕಿಗೆ ದಾರಿದೀಪಗಳಾಗಿವೆ ಎಂದು ಹೇಳಿದರು.

ಅಲ್ಲಮರ ಅನುಭಾವದ ಮೂಸೆಯಲ್ಲಿ ಮೂಡಿ ಬಂದ ಬೆಡಗಿನ ವಚನಗಳಂತೂ ಅರಿವಿನ ಆಗರವಾಗಿವೆ. ಅವು ಎಂದೆಂದಿಗೂ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಿಂಗಾಯತ ಸಮಾಜದ ಪ್ರಮುಖ ಸಿ.ಎಸ್. ಪಾಟೀಲ ಅವರು, ಭಾರತೀಯ ಸಂಸ್ಕøತಿಯಲ್ಲಿ ಯುಗಾದಿಗೆ ಎಲ್ಲಿಲ್ಲದ ಮಹತ್ವ ಇದೆ. ಅದು ವರ್ಷದ ಆರಂಭ ಎಂದರು.

ಪ್ರಕೃತಿಯಲ್ಲಿ ಹೊಸ ಚಿಗುರು ಮೂಡುವಂತೆ ಬದುಕಿನಲ್ಲಿಯೂ ಹೊಸತನ ಮೂಡಲಿ. ಸಿಹಿ, ಕಹಿ, ಸುಖ, ದುಃಖಗಳನ್ನು ಸಮನಾಗಿ ಸ್ವೀಕರಿಸುವ ಆತ್ಮಸ್ಥೈರ್ಯವನ್ನು ಮೈಗೂಡಿಸಿಕೊಳ್ಳೋಣ ಎಂದು ಹೇಳಿದರು.

ನಾಡಿನ ಶ್ರೇಷ್ಠ ಪ್ರವಚನಕಾರರಾದ ಅಕ್ಕ ಅನ್ನಪೂರ್ಣತಾಯಿ ಅವರ ಆರೋಗ್ಯಕ್ಕೆ ಹಾರೈಸಿ ಹೊರ ತರಲಾದ ಬಸವ ಭಾರತ ವಿಶೇಷ ಸಂಚಿಕೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ ಬಿಡುಗಡೆ ಮಾಡಿದರು.

ಅಕ್ಕ ಅನ್ನಪೂರ್ಣತಾಯಿ ಅವರ ಚೇತರಿಕೆಗೆ ಪ್ರಾರ್ಥಿಸಿ ಬಸವ ಪೂಜೆ ಹಾಗೂ ಪ್ರಾರ್ಥನೆಗೈಯಲಾಯಿತು. ಪ್ರಮುಖರಾದ ಪ್ರಕಾಶ ಮಠಪತಿ, ಅಣವೀರ ಕೊಡಂಬಲ, ರಮೇಶ ಪಾಟೀಲ ಪಾಶಾಪುರ, ಸಿ.ಎಸ್. ಗಣಾಚಾರಿ, ಅಶೋಕ ಎಲಿ, ಚನ್ನಬಸವ ಹಾರೂರಗೇರಿ ಸಮ್ಮುಖ ವಹಿಸಿದ್ದರು. ಮಾಣಿಕಪ್ಪ ಗೋರನಾಳೆ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ ಪಾಟೀಲ ತೇಗಂಪುರ ಸ್ವಾಗತಿಸಿದರು. ರಾಚಪ್ಪ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT