ಗುರುವಾರ , ಏಪ್ರಿಲ್ 9, 2020
19 °C
ಬಾಲಕಿಯ ತಂದೆಯಿಂದ ಪೊಲೀಸರಿಗೆ ದೂರು

ಮಗುವಿನ ಕೈಮುರಿದ ತಾಯಿ, ಪ್ರಿಯತಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಮೂವತ್ತು ವರ್ಷದ ವಿವಾಹಿತೆ ಹಾಗೂ ಆಕೆಯ ಪ್ರಿಯಕರ ಸೇರಿ ಪ್ರೇಮ ಸಲ್ಲಾಪಕ್ಕೆ ಅಡ್ಡಿಯಾಗುತ್ತಿದ್ದಾಳೆ ಎನ್ನುವ ಕಾರಣಕ್ಕೆ ಆರು ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿ, ಸಿಗರೇಟಿನಿಂದ ಸುಟ್ಟು ಗಾಯಗೊಳಿಸಿದ ಆರೋಪದ ಮೇಲೆ ಜೈಲು ಸೇರಿದ್ದಾರೆ.

ಬಾಲಕಿಯ ಮೈತುಂಬ ಚಿವುಟಿರುವ ಹಾಗೂ ಸಿಗರೇಟ್‌ನಿಂದ ಸುಟ್ಟಿರುವ ಗಾಯಗಳಿವೆ. ಹುಮನಾಬಾದ್‌ ಪೊಲೀಸರು ಬಾಲಕಿಯ ತಾಯಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಪ್ರಿಯಕರನಿಗೆ 18 ವರ್ಷ ಪೂರ್ಣಗೊಳ್ಳದ ಕಾರಣ ಬಾಲಕರ ನಿರೀಕ್ಷಣಾ ಮಂದಿರಕ್ಕೆ ಕಳಿಸಲಾಗಿದೆ.

ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ನಿಲಂಗಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೂಲಿ ಕೆಲಸ ಮಾಡುವ ವ್ಯಕ್ತಿ ತನ್ನ ಹೆಂಡತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಹುಮನಾಬಾದ್‌ ಪೊಲೀಸರಿಗೆ ದೂರು ನೀಡಿದ್ದಾರೆ.

1998ರಲ್ಲಿ ನಾನು ಮೊದಲು ತಾಬೂಲವಾಡಿಯ ಮಹಿಳೆಯನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳು ಇದ್ದಾರೆ. 2010ರಲ್ಲಿ ನನ್ನ ಹೆಂಡತಿ ಅನಾರೋಗ್ಯದಿಂದ ಮೃತಪಟ್ಟ ಕಾರಣ 2011ರಲ್ಲಿ ಎರಡನೆಯ ಮದುವೆಯಾಗಿದ್ದೇನೆ. ಇವಳಿಗೆ 6 ವರ್ಷದ ಮಗಳೂ ಇದ್ದಾಳೆ. ಎರಡು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ನಮ್ಮ ಸಂಬಂಧಿಯೊಬ್ಬರ ಮದುವೆ ಇದೆ ಎಂದು ಹೇಳಿ ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಹೆಂಡತಿಯ ಶೋಧ ಕಾರ್ಯ ನಡೆಸಿದಾಗ ಅವಳು ತಾಬೂಲಾ ಗ್ರಾಮದ ಯುವಕನೊಂದಿಗೆ ಹುಮನಾಬಾದ್‌ನಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿರುವುದು ಗೊತ್ತಾಗಿದೆ. ಮನೆಗೆ ಹೋಗಿ ನೋಡಿದಾಗ ಮಗುವಿನ ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟಿರುವ ಗಾಯಗಳು ಕಂಡು ಬಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಗುವನ್ನು ವಿಚಾರಿಸಿದಾಗ ಯುವಕ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ತೊಡೆಯ ಮೇಲೆ ಕೈಯಾಡಿಸಿ ಸಿಗರೇಟ್‌ನಿಂದ ಸುಟ್ಟಿದ್ದಾನೆ. ಕಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ತಿಳಿಸಿದ್ದಾಳೆ. ಕೈಗೆ ಬಾವು ಬಂದಿರುವುದನ್ನು ನೋಡಿ ವೈದ್ಯರ ಬಳಿ ತೋರಿಸಿದಾಗ ಕೈ ಮುರಿದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಬರೆದಿದ್ದಾರೆ.

ಪೊಲೀಸರು ಮಾಹಿತಿ ನೀಡಿದ ನಂತರ ಮಕ್ಕಳ ರಕ್ಷಣಾ ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯನ್ನು ಪರಿಶೀಲಿಸಿದರು. ನಂತರ ಬಾಲಕಿಯನ್ನು ಅಜ್ಜನ ವಶಕ್ಕೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು